
ಬೆಂಗಳೂರು/ಮೈಸೂರು (ಸೆ.30): ಸಿಲಿಕಾನ್ ಸಿಟಿ ಬೆಂಗಳೂರಿನ ವಿಜಯನಗರದಲ್ಲಿ ವಾಟ್ಸಾಪ್ ಗ್ರೂಪ್ ಮೂಲಕ 12 ವರ್ಷದ ಬಾಲಕಿಯನ್ನು ಮಾರಾಟಕ್ಕಿಟ್ಟಿದ್ದ ಸೆಕ್ಸ್ ಮಾಫಿಯಾ ಗ್ಯಾಂಗ್ ಸಿಕ್ಕಿಬಿದ್ದಿದೆ. ಋತುಮತಿಯಾದ ತಕ್ಷಣ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದರೆ ಮಾನಸಿಕ ರೋಗ ವಾಸಿಯಾಗುತ್ತೆ ಎಂದು ಪ್ರಚಾರ ಮಾಡಿ ಮಗುವನ್ನು ಮಾರಾಟಕ್ಕಿಡಲಾಗಿತ್ತು. ಈ ಘಟನೆ ಗಮನಕ್ಕೆ ಬಂದ ಕೂಡಲೇ ಸ್ವಯಂ ಸೇವಾ ಸಂಸ್ಥೆಯೊಂದರ ಮಧ್ಯಪ್ರವೇಶದ ನಂತರ ಪೊಲೀಸರು ಗ್ಯಾಂಗಿನ ಇಬ್ಬರನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಮಕ್ಕಳ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಗ್ಯಾಂಗ್‌ನ ಇಬ್ಬರು ಮೈಸೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಬೆಂಗಳೂರು ನಿವಾಸಿ ಶೋಭಾ ಮತ್ತು ಆಕೆಯ ಸಂಗಾತಿ ತುಳಸಿಕುಮಾರ್ ಅವರನ್ನು ವಿಜಯನಗರ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ. ಋತುಮತಿಯಾದ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದರೆ ಮಾನಸಿಕ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ಮೂಢನಂಬಿಕೆ ಹರಡಿ ಇವರು ಮಗುವನ್ನು ಮಾರಾಟಕ್ಕಿಟ್ಟಿದ್ದರು.
20 ಲಕ್ಷ ರೂಪಾಯಿ ಬೆಲೆ ನಿಗದಿಪಡಿಸಿ ವಾಟ್ಸಾಪ್ ಗ್ರೂಪ್ ಮೂಲಕ ಪ್ರಚಾರ ಮಾಡುತ್ತಿದ್ದದ್ದು ಒಂದು ಸ್ವಯಂ ಸೇವಾ ಸಂಸ್ಥೆಯ ಗಮನಕ್ಕೆ ಬಂದಿದ್ದೇ ಈ ಪ್ರಕರಣಕ್ಕೆ ತಿರುವು ನೀಡಿತು. ಈ ಗ್ಯಾಂಗ್ ಮಗುವಿನ ವಿಡಿಯೋ ದೃಶ್ಯಗಳನ್ನು ಕೂಡ ಹಂಚಿಕೊಂಡಿತ್ತು. ಗ್ರಾಹಕರ ಸೋಗಿನಲ್ಲಿ ಗ್ಯಾಂಗ್‌ನ ಶೋಭಾಳನ್ನು ಸಂಪರ್ಕಿಸಿದ ಮೈಸೂರಿನ ಓಡನಾಡಿ ಸೇವಾ ಸಮಸ್ತೆ' ಎಂಬ ಸ್ವಯಂ ಸೇವಾ ಸಂಸ್ಥೆ, ಮಗುವಿನೊಂದಿಗೆ ಮೈಸೂರಿಗೆ ಬರುವಂತೆ ಹೇಳಿತು. ಅದರಂತೆ ಮೈಸೂರಿಗೆ ಬಂದ ಶೋಭಾಳೊಂದಿಗೆ ಎನ್‌ಜಿಒ ಸದಸ್ಯರು ಮಗುವನ್ನು ತಮಗೆ ನೀಡುವಂತೆ ಹಾಗೂ ಹಣದಲ್ಲಿ ಸ್ವಲ್ಪ ಕಡಿಮೆ ಮಾಡಿಕೊಳ್ಳುವಂತೆ ಚೌಕಾಶಿ ನಡೆಸುತ್ತಿದ್ದಾಗ, ಪೊಲೀಸರು ಸುತ್ತುವರಿದು ಅವರನ್ನು ಬಂಧಿಸಿದರು.
ಈ ಸಮಯದಲ್ಲಿ ಆರೋಪಿ ಶೋಭಾಳ ಸಹಚರ ತುಳಸಿಕುಮಾರ್ ಸ್ವಲ್ಪ ದೂರದಲ್ಲಿ ನಿಂತಿದ್ದನು. ಆತನನ್ನೂ ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ತುಳಸಿಕುಮಾರ್ ತನ್ನ ಪತಿ ಎಂದು ಶೋಭಾ ಪೊಲೀಸರಿಗೆ ತಿಳಿಸಿದ್ದಾಳೆ. ಇನ್ನು ಮಾರಾಟಕ್ಕೆ ಇಡಲಾಗಿದ್ದ 12 ವರ್ಷದ ಬಾಲಕಿ ತನ್ನ ಮಗಳು ಎಂದೂ ಹೇಳಿದ್ದಳು. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ, ಆಕೆ ತನ್ನ ಸಹೋದರನ ಮಗಳು, ಆಕೆ ನನೆ ಸೊಸೆ ಆಗಬೇಕು ಎಂದು ಮಾತು ಬದಲಿಸಿದ್ದಾಳೆ. ಮತ್ತಷ್ಟು ಕಠಿಣವಾಗಿ ವಿಚಾರಣೆ ಶೋಭಾ, ನಂತರ ಮಗುವನ್ನು ದತ್ತು ಪಡೆದಿದ್ದಾಗಿ ಹೇಳಿದಳು. ಈ ಘಟನೆ ಕುರಿತು ಪೊಲೀಸರು ವಿವರವಾದ ತನಿಖೆ ಆರಂಭಿಸಿದ್ದಾರೆ.
ಮಗು ಇವರ ಕೈಗೆ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಶೋಭಾ ಮತ್ತು ತುಳಸಿಕುಮಾರ್ ದೊಡ್ಡ ಮಾಫಿಯಾದ ಕೊಂಡಿಗಳೇ ಎಂಬ ಅನುಮಾನವೂ ಪೊಲೀಸರಿಗಿದೆ. ಈ ಗ್ಯಾಂಗ್ ಇದೇ ರೀತಿ ಬೇರೆ ಮಕ್ಕಳನ್ನು ಮಾರಾಟ ಮಾಡಿದ್ದಾರೆಯೇ ಎಂದೂ ಪರಿಶೀಲಿಸಲಾಗುತ್ತಿದೆ. ಶೋಭಾ ಮತ್ತು ತುಳಸಿಕುಮಾರ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಮಗುವನ್ನು ಮಕ್ಕಳ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ