
ಬೆಂಗಳೂರು (ನ.20): ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಎರಡನೇ ದಿನ ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ, ಡೇಟಾ ಸೈನ್ಸ್ ಕ್ಷೇತ್ರಗಳಲ್ಲಿ ತರಬೇತಿ ನೀಡಲು ‘ನಿಪುಣ ಕರ್ನಾಟಕʼ ಯೋಜನೆ ಘೋಷಿಸಿದೆ.
ಭವಿಷ್ಯದಲ್ಲಿ ಎಐ ಕುಶಲ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಲಿದ್ದು, ಅದಕ್ಕೆ ಅನುಗುಣವಾಗಿ ರಾಜ್ಯದ ಯುವಕರನ್ನು ಅಣಿಗೊಳಿಸಲು ಈ ಯೋಜನೆ ಸಹಕಾರಿ. ಎಐ, ಸೈಬರ್ ಸುರಕ್ಷತೆ, ಡೇಟಾ ಸೈನ್ಸ್ ಕ್ಷೇತ್ರಗಳಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈ ತರಬೇತಿ ಯೋಜನೆ ಫಲವಾಗಿ 2,800 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.
ಈ ಯೋಜನೆ 4,000 ಯುವ ಜನರ ವೃತ್ತಿ ಕೌಶಲ ಹೆಚ್ಚಿಸಲಿದೆ. ಪ್ರತಿಷ್ಠಿತ ಕಾರ್ಪೋರೇಟ್‌ಗಳಾದ ಕ್ಯಾಪ್‌ಜೆಮಿನಿ, ವೆಲ್ಸ್ ಫರ್ಗೊ, ಸ್ಟ್ಯಾಂಡರ್ಡ್ ಚಾರ್ಟರ್ಡ್ ಮತ್ತು ಸುಮೆರಿ ಕಂಪನಿಗಳ ಉದ್ಯೋಗಿಗಳು ತರಬೇತಿ ನೀಡಲಿದ್ದಾರೆ. ಐಸಿಟಿ ಅಕಾಡೆಮಿ, ಎಆರ್‌ಡಬ್ಲ್ಯುಎಸ್, ಎಫ್‌ಯುಇಎಲ್ ಮತ್ತು ಎಐಎಸ್‌ಇಸಿಟಿ- ತರಬೇತಿ ಪಾಲುದಾರ ಸಂಸ್ಥೆಗಳಾಗಿವೆ.
ಹೆಚ್ಚುವರಿಯಾಗಿ 10,000 ಯುವ ಜನರ ವೃತ್ತಿ ಕೌಶಲ ಹೆಚ್ಚಿಸಲು ಐಟಿ, ಜೈವಿಕ ತಂತ್ರಜ್ಞಾನ,ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ (ಇಎಸ್‌ಡಿಎಂ), ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ವಿಮೆ (ಬಿಎಫ್‌ಎಸ್‌ಐ) ವಲಯದ ಪ್ರಮುಖ ಕಂಪನಿಗಳು ತರಬೇತಿ ನೀಡಲು ಇಂಗಿತ ವ್ಯಕ್ತಪಡಿಸಿವೆ.
ಶೃಂಗಸಭೆಯಲ್ಲಿ ಬೆಂಗಳೂರು ನಾವೀನ್ಯತಾ ವರದಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಡುಗಡೆ ಮಾಡಿದರು.
ಬೆಂಗಳೂರು ನಗರವು ಕೃತಕ ಬುದ್ಧಿಮತ್ತೆ ಹಾಗೂ ಕ್ವಾಂಟಂ ಕಂಪ್ಯೂಟಿಂಗ್ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಈ ಕ್ಷೇತ್ರಗಳ ಜಾಗತಿಕ ದೈತ್ಯ ಕಂಪನಿಗಳಾದ ಓಪನ್‌ಎಐ, ಆ್ಯಂಥ್ರೊಫಿಕ್ ಮತ್ತು ಗ್ರಾಫ್‌ಕೋರ್- ಗಳನ್ನು ಆಕರ್ಷಿಸಲು ಕ್ರಮ ವಹಿಸಲಾಗಿದೆ. ವಿಶ್ವದ ಐದನೇ ಅತಿದೊಡ್ಡ ಯೂನಿಕಾರ್ನ್ ಶಕ್ತಿಕೇಂದ್ರವಾಗಿ ನಗರ ಬೆಳೆದಿದೆ. 1 ಶತಕೋಟಿ ಡಾಲರ್ ಮೊತ್ತದ ವಹಿವಾಟು ನಡೆಸುವ (ಯೂನಿಕಾರ್ನ್) 53 ನವೋದ್ಯಮ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ಒಟ್ಟಾರೆ ವಹಿವಾಟಿನ ಮೊತ್ತ ಅಂದಾಜು ₹ 1.70 ಲಕ್ಷ ಕೋಟಿ ಗಳಷ್ಟಿದೆ. ದೇಶದ ಒಟ್ಟಾರೆ ಯೂನಿಕಾರ್ನ್ ಮೌಲ್ಯಕ್ಕೆ ಬೆಂಗಳೂರು ಯೂನಿಕಾರ್ನ್‌ಗಳ ಕೊಡುಗೆ ಶೇ 42ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ