ಚಿನ್ನಸ್ವಾಮಿ ದುರಂತ ವಿಧಾನಸಭೆಯಲ್ಲಿ ಗೃಹ ಸಚಿವರ ಉತ್ತರ, ಸಿಎಂ ಮತ್ತು ಅಶೋಕ್ ನಡುವೆ ಹಾಸ್ಯಮಯ ಸಂಭಾಷಣೆ

Published : Aug 21, 2025, 09:25 PM IST
R Ashoka and G parameshwara

ಸಾರಾಂಶ

ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಕುರಿತು ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಆರ್. ಅಶೋಕ್ ನಡುವೆ ಹಾಸ್ಯಮಯ ಸಂಭಾಷಣೆ ನಡೆಯಿತು. ಸರ್ಕಾರದ ನಿರ್ಲಕ್ಷ್ಯವನ್ನು ಒಪ್ಪಿಕೊಂಡ ಗೃಹ ಸಚಿವ ಪರಮೇಶ್ವರ್, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ದುರಂತದ ಬಗ್ಗೆ ತೀವ್ರ ಚರ್ಚೆ ನಡೆಯಿತು. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಈ ಘಟನೆಯ ಕುರಿತು ಗೃಹ ಸಚಿವರಿಂದ ಉತ್ತರ ಕೇಳಿದರೂ, ಆ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಸದನದಲ್ಲಿ ಹಾಜರಿರಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಪರಮೇಶ್ವರ್ ಅವರು ಬರುತ್ತಾರೆ” ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಯಾಗಿ ಅಶೋಕ್ ಹಾಸ್ಯಮಿಶ್ರಿತವಾಗಿ “ನೀವು ಆಲ್ ರೌಂಡರ್, ನೀವೇ ಕೊಟ್ಟು ಬಿಡಿ” ಎಂದರು. ತಕ್ಷಣ ಸಿಎಂ ಸಿದ್ದರಾಮಯ್ಯ ಹಾಸ್ಯಪ್ರಜ್ಞೆಯಿಂದ “ನಾನು ಎರಡು ಬಾರಿ ಸಿಎಂ ಆಗಿದ್ದೇನೆ” ನೀನು ಆಗಪ್ಪ ಒಂದ್ಸಾರಿ ಸಿಎಂ ಆಗಪ್ಪ ಎಂದು ಅಶೋಕ್ ಗೆ ಉತ್ತರಿಸಿದರು. ಇದಕ್ಕೆ ಅಶೋಕ್ ಪ್ರತಿಯಾಗಿ “ಇನ್ನೂ ಮುಂದೆ ಇದೆ” ಎಂದು ಹೇಳಿ, ತಮ್ಮಲ್ಲಿಯೂ ಮುಂದಿನ ದಿನಗಳಲ್ಲಿ ಸಿಎಂ ಆಗುವ ಆಸೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.

ಸದನದಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, “ಕಾಲ್ತುಳಿತ ಘಟನೆಯು ರಾಜ್ಯದ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಭವಿಸಿದ್ದು, ಇದು ಇಡೀ ದೇಶವೇ ನೋಡುವಂತೆ ನಡೆದ ದುಃಖಕರ ಘಟನೆ. ಈ ಘಟನೆಯಲ್ಲಿ 11 ಮಂದಿ ಜೀವ ಕಳೆದುಕೊಂಡಿದ್ದು, ಇದು ಅತೀವ ನೋವುಂಟು ಮಾಡಿದೆ. ಸಮಾಜದ ಯಾವ ವರ್ಗಕ್ಕೂ ಇದನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದರು.

ಅವರು ಮುಂದುವರಿದು, “ಮೊದಲ ದಿನವೇ ಸಾವಿಗೀಡಾದವರಿಗೆ ಸಂತಾಪ ಸೂಚಿಸಿದ್ದೇವೆ. ಇಂದಿಗೂ ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ. ನಮ್ಮ ಪ್ರಾರ್ಥನೆಗಳಿಂದ ಸಾವಿಗೀಡಾದವರು ಮರಳಿ ಬರುವುದಿಲ್ಲ, ಆದರೆ ದುಃಖಿತ ಕುಟುಂಬಗಳಿಗೆ ಧೈರ್ಯ ತುಂಬುವುದು ಸಾಧ್ಯ” ಎಂದರು.

ದೇಶ-ವಿದೇಶಗಳಲ್ಲಿ ಸಂಭವಿಸಿದ ಇತರ ದುರಂತಗಳ ಉದಾಹರಣೆ

ಪರಮೇಶ್ವರ್ ಅವರು ಈ ವೇಳೆ ದೇಶದಲ್ಲಿ ನಡೆದ ಇತರೆ ಕಾಲ್ತುಳಿತ ಹಾಗೂ ದುರಂತಗಳ ಉದಾಹರಣೆಗಳನ್ನು ನೀಡಿದರು. “ವೈದ್ಯನಾಥ ಜ್ಯೋತಿರ್ಲಿಂಗದಲ್ಲಿ 10 ಸಾವು, ತಿರುವಣ್ಣಾಮಲೈ 4 ಸಾವು, ಮಹಾಕುಂಭಮೇಳ 6 ಸಾವು, ವೈಷ್ಣೋದೇವಿ ಉತ್ಸವ 12 ಸಾವು, ಪುರಿ ಉತ್ಸವ 9 ಸಾವು, ಕೇರಳ ಸಂಗೀತೋತ್ಸವ 4 ಸಾವು, ಇಂದೋರ್ ರಾಮನವಮಿ 36 ಸಾವು, ಉತ್ತರಪ್ರದೇಶದ ಹತ್ರಾಸ್ ನಲ್ಲಿ 121 ಸಾವು, ತಿರುಮಲ ಬೆಟ್ಟದಲ್ಲಿ 6 ಸಾವು, ಇತ್ತೀಚಿನ ಮಹಾಕುಂಭಮೇಳದಲ್ಲಿ 39 ಸಾವು” ಎಂದು ಅವರು ವಿವರಿಸಿದರು. ಅಲ್ಲದೆ, ರಾಜ್ಯದ ಇತಿಹಾಸದಲ್ಲೂ ಹಲವು ದುರಂತಗಳು ಸಂಭವಿಸಿವೆ ಎಂದು ಉಲ್ಲೇಖಿಸಿದರು. ಡಾ.ರಾಜ್‌ಕುಮಾರ್ ನಿಧನದ ವೇಳೆ 7 ಸಾವು, ಕಾರ್ಲ್ಟನ್ ಟವರ್ ದುರಂತದಲ್ಲಿ 9 ಸಾವು, ಗಂಗಾರಾಮ್ ಕಟ್ಟಡ ದುರಂತದಲ್ಲಿ 127 ಸಾವು ಎಂದು ಅವರು ನೆನಪಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮ

ಈ ದುರ್ಘಟನೆಯಾಗಬಾರದಿತ್ತು, ಆದರೆ ಆಗಿಬಿಟ್ಟಿದೆ. ಸರ್ಕಾರದ ಅಧಿಕಾರಿಗಳ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿದೆ. ಐದು ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರನ್ನೂ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಜೊತೆಗೆ, ಗುಪ್ತಚರ ಇಲಾಖೆಯ ವೈಫಲ್ಯದಿಂದಾಗಿ ಅದರ ಮುಖ್ಯಸ್ಥರನ್ನು ವರ್ಗಾವಣೆ ಮಾಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು. ಸರ್ಕಾರ ಮೃತರ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ಹಾಗೂ ಗಾಯಾಳುಗಳಿಗೆ ಪರಿಹಾರ ನೀಡಿರುವುದಾಗಿ ಅವರು ತಿಳಿಸಿದರು.

ತುಮಕೂರು ಬಳಿ 43 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣ

ಗೃಹ ಸಚಿವರು ಮುಂದುವರಿದು, ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಸರ್ಕಾರ ಜನಸಂದಣಿ ನಿಯಂತ್ರಣ ಬಿಲ್ ತರಲು ತೀರ್ಮಾನಿಸಿದೆ. ಇದು ರಾಜಕೀಯ ಸಭೆಗಳು, ಧಾರ್ಮಿಕ ಉತ್ಸವಗಳು ಅಥವಾ ಕ್ರೀಡಾ ಕಾರ್ಯಕ್ರಮಗಳಲ್ಲಿಯೂ ಅನ್ವಯಿಸುತ್ತದೆ. ಪ್ರಸ್ತುತ ಬಿಲ್‌ನ್ನು ಸದನ ಸಮಿತಿಗೆ ನೀಡಲಾಗಿದ್ದು, ಚರ್ಚೆ ನಂತರ ಮತ್ತೆ ಸದನಕ್ಕೆ ತರಲಾಗುವುದು ಎಂದು ಹೇಳಿದರು.

ಅಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ ಸೀಮಿತವಾಗಿದೆ. ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂ ವಿಶ್ವದ ಅತಿದೊಡ್ಡ ಸ್ಟೇಡಿಯಂ ಆಗಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಹೊಸ ಕ್ರೀಡಾಂಗಣ ನಿರ್ಮಿಸಲು ತೀರ್ಮಾನಿಸಲಾಗಿದೆ. ತುಮಕೂರಿನ ಬಳಿ 43 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದೆ. ದೇವನಹಳ್ಳಿಯಲ್ಲೂ ಸ್ಪೋರ್ಟ್ಸ್ ಕ್ಲಬ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತವು ರಾಜ್ಯದ ಕ್ರೀಡಾ ಇತಿಹಾಸದಲ್ಲಿ ಕಪ್ಪು ದಿನವೆನಿಸಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ಭವಿಷ್ಯದಲ್ಲಿ ಇಂತಹ ದುರಂತ ಮರುಕಳಿಸದಂತೆ ಜನಸಂದಣಿ ನಿಯಂತ್ರಣ ಬಿಲ್ ತರಲು ನಿರ್ಧರಿಸಿರುವುದು ಪ್ರಮುಖ ಬೆಳವಣಿಗೆ. ಜೊತೆಗೆ, ಹೊಸ ಕ್ರೀಡಾಂಗಣ ನಿರ್ಮಾಣದ ಯೋಜನೆ ರಾಜ್ಯದ ಕ್ರೀಡಾ ವಲಯಕ್ಕೆ ದೀರ್ಘಾವಧಿಯಲ್ಲಿ ಬಲ ತುಂಬಲಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!