
ಬೆಂಗಳೂರು (ಜೂ.6) : ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನರು ಬಲಿಯಾದ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ಐದು ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತುಗೊಳಿಸಿದೆ. ಜತೆಗೆ ಘಟನೆ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಅವರ ಏಕಸದಸ್ಯ ತನಿಖಾ ಆಯೋಗ ರಚನೆಗೆ ಸರ್ಕಾರ ತೀರ್ಮಾನಿಸಿದೆ.
ಅಲ್ಲದೆ, ಈ ಘಟನೆ ಸಂಬಂಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ನಿರ್ಲಕ್ಷ್ಯದ ಆರೋಪ ಹೊತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿ ಹಾಗೂ ಡಿಎನ್‌ಎ ಇವೆಂಟ್ ಮ್ಯಾನೇಜ್‌ಮೆಂಟ್ ಪ್ರೈ.ಲಿ. ಸಂಸ್ಥೆಗಳ ಪ್ರತಿನಿಧಿಗಳನ್ನು ಕೂಡಲೇ ಬಂಧಿಸುವಂತೆಯೂ ಸೂಚಿಸಲಾಗಿದೆ. ಈ ಮೂರು ಸಂಸ್ಥೆಗಳ ಲೋಪದ ಕುರಿತ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಇದರ ಜತೆಗೆ ಈಗಾಗಲೇ ಆರಂಭವಾಗಿರುವ ಮ್ಯಾಜಿಸ್ಟ್ರೇಟ್ ತನಿಖೆಯೂ ಮುಂದುವರಿಯಲಿದೆ.
ಗುರುವಾರ ಸಚಿವ ಸಂಪುಟ ಸಭೆ ನಂತರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುದೀರ್ಘ ಮಾತುಕತೆ ನಡೆಸಿ ಈ ತೀರ್ಮಾನ ಕೈಗೊಂಡರು.
ಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ದುರ್ಘಟನೆ ಬಗ್ಗೆ ಪರಿಶೀಲಿಸಿ ಮೇಲ್ನೋಟಕ್ಕೆ ಯಾವೆಲ್ಲ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯ ಕಂಡು ಬಂದಿದೆಯೋ ಅವರ ವಿರುದ್ಧ ಕ್ರಮಕ್ಕೆ ನಿರ್ಧರಿಸಲಾಗಿದೆ. ಅದರನ್ವಯ, ಬೆಂಗಳೂರು ನಗರ ಪೊಲೀಸ್ ಆಯುಕ್ತ, ಕೇಂದ್ರ ವಿಭಾಗದ ಡಿಸಿಪಿ, ಕಬ್ಬನ್‌ಪಾರ್ಕ್ ಉಪವಿಭಾಗದ ಎಸಿಪಿ, ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹಾಗೂ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಭದ್ರತೆಯ ಹೊಣೆ ನೀಡಲಾಗಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ವಿಕಾಸ್ ಕುಮಾರ್ ವಿಕಾಸ್ ಅವರನ್ನು ಅಮಾನತು ಮಾಡಲಾಗುತ್ತಿದೆ ಎಂದು ಹೇಳಿದರು.
ತನಿಖಾ ಆಯೋಗ ರಚನೆ:
ಇಡೀ ಪ್ರಕರಣದ ಕೂಲಂಕುಷ ಪರಿಶೀಲನೆ ಮತ್ತು ತನಿಖೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಅವರ ಏಕಸದಸ್ಯ ತನಿಖಾ ಆಯೋಗ ರಚಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಆರ್‌ಸಿಬಿ ಸಂಸ್ಥೆ, ಕೆಎಸ್‌ಸಿಎ ಹಾಗೂ ಡಿಎನ್‌ಎ ಇವೆಂಟ್ ಮ್ಯಾನೇಜ್‌ಮೆಂಟ್ ಪ್ರೈ.ಲಿ. ಸಂಸ್ಥೆಗಳ ಪ್ರತಿನಿಧಿಗಳನ್ನು ಕೂಡಲೇ ಬಂಧಿಸುವಂತೆಯೂ ನಿರ್ದೇಶಿಸಲಾಗಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಘೋಷಿಸಿದರು.
ಯಾರೆಲ್ಲ ಅಮಾನತು?:
1. ಬಿ. ದಯಾನಂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ
2. ವಿಕಾಸ್ ಕುಮಾರ್ ವಿಕಾಸ್, ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ)
3. ಶೇಖರ್ ಎಚ್.ತೆಕ್ಕಣ್ಣನವರ್, ಕೇಂದ್ರ ವಿಭಾಗದ ಡಿಸಿಪಿ
4. ಬಾಲಕೃಷ್ಣ, ಕಬ್ಬನ್‌ಪಾರ್ಕ್ ಉಪವಿಭಾಗದ ಎಸಿಪಿ
5. ಎ.ಕೆ. ಗಿರೀಶ್, ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ