
ಮೈಸೂರು (ಜೂ.6): ಬೆಂಗಳೂರಿನಲ್ಲಿ ಆರ್‌ಸಿಬಿ ಅಭಿಮಾನಿಗಳ ದುರಂತ ಸಾವು ಪ್ರಕರಣವು ಭದ್ರತಾ ಲೋಪವಲ್ಲ, ಆಡಳಿತ ವೈಫಲ್ಯ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಿಡಿಕಾರಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಬೆಂಬಲ ಆಚರಣೆಗಳ ಬಗ್ಗೆ ಗೊತ್ತಿದ್ರೂ ತರಾತುರಿಯಲ್ಲಿ ಸರ್ಕಾರ ಕಾರ್ಯಕ್ರಮ ಆಯೋಜಿಸಿದೆ. ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ರಾಜ್ಯ ಸರ್ಕಾರ ನಿಯೋಜಿತವಾಗಿ ಈ ದುರಂತ ತಡೆಯಬಹುದಿತ್ತು ಹಾಗೂ ತಡೆಯಬೇಕಿತ್ತು. ಸರ್ಕಾರ ಈ ನಿರ್ಲಕ್ಷ್ಯಕ್ಕೆ ಉತ್ತರ ನೀಡಬೇಕು ಪುನಃ ಇಂತಹ ಘಟನೆಗಳು ಆಗದಂತೆ ತಡೆಯಬೇಕು ಎಂದು ಆಗ್ರಹಿಸಿದರು.
ಎಲ್ಲಾ ವ್ಯವಸ್ಥೆ ಮಾಡಿಕೊಂಡು 2 ದಿನಗಳ ನಂತರ ಸಂಭ್ರಮಾಚರಣೆ ಮಾಡಬಹುದಿತ್ತು. ಪೂರ್ವ ತಯಾರಿ ಮಾಡಿಕೊಂಡು ಚೆನ್ನಾಗಿ ಸಂಭ್ರಮಾಚರಣೆ ಮಾಡಬಹುದಿತ್ತು. ಸರ್ಕಾರ ಆತುರದ ನಿರ್ಧಾರ ಮಾಡಿದೆ. ಇಂಟೆಲಿಜೆನ್ಸ್ ಫೈಲ್ಯೂರ್ ಅಂತ ನಾನು ಈಗಲೇ ಹೇಳಲ್ಲ. ಸಾವಿನ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದ ಅವರು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದರು.
ಸಂಭ್ರಮಾಚರಣೆ ದುರ್ಘಟನೆಗೆ ಸರ್ಕಾರವೇ ನೇರ ಹೊಣೆ: ಸಿಪಿಎಂ ಆರೋಪ
ಮೈಸೂರು : ಆರ್ ಸಿಬಿ ಕ್ರಿಕೆಟ್ ತಂಡದ ಗೆಲುವಿನ ಸಂಭ್ರಮಾಚರಣೆಯ ಹೊತ್ತಿನಲ್ಲಿ ಆಯೋಜಕರ ಅವೈಜ್ಞಾನಿಕ, ಅವ್ಯವಸ್ಥಿತ ಆಯೋಜನೆಯಿಂದಾಗಿ ಕಾಲ್ತುಳಿತಕ್ಕೆ ಸಿಲುಕಿ 11 ಜೀವಬಲಿ ಪಡೆದಿದೆ. ಇದೊಂದು ಅತ್ಯಂತ ದುರಂತದ ಘಟನೆಯಾಗಿದ್ದು, ಇದರ ಹೊಣೆಗಾರಿಕೆಯನ್ನು ಕರ್ನಾಟಕ ಸರ್ಕಾರ ಹೊರಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಆಗ್ರಹಿಸಿದ್ದಾರೆ.
ಐಪಿಎಲ್ ಒಂದು ಖಾಸಗಿ ಸಂಸ್ಥೆ ಆಯೋಜಿಸಿದ ಕ್ರೀಡಾಕೂಟವಾಗಿದ್ದು, ಅದರ ಗೆಲುವು ನಲಿವುಗಳನ್ನು ಕ್ರೀಡಾ ಪ್ರೇಮಿಗಳು ಅವರಿಗೆ ಬೇಕಾದ ಹಾಗೆ ಸಂಭ್ರಮಿಸಿದ್ದಾರೆ. ಆದರೆ, ಸರ್ಕಾರವೊಂದು ಕ್ರೀಡೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿ ಹತ್ತಾರು ಜೀವ ಬಲಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಕ್ರಿಕೆಟ್ ಕ್ರೀಡೆಯನ್ನು ವ್ಯಾಪಾರೀಕರಣ ಮತ್ತು ಖಾಸಗೀಕರಣಕ್ಕೆ ಒಳಪಡಿಸಿದ ಪರಿಣಾಮವಾಗಿ ಉಂಟಾಗಿರುವ ಕ್ರಿಕೆಟ್ ಸರಕೀಕರಣದ ಲಾಭವನ್ನು ರಾಜಕೀಯವಾಗಿ ಪಡೆಯಲು ರಾಜ್ಯ ಸರ್ಕಾರ ಮುಂದಾಗಿ ಈ ಸಂಭ್ರಮಾಚರಣೆ ಆಯೋಜಿಸಿದೆ ಎಂಬುದು ನಿಸ್ಸಂದೇಹವಾಗಿದೆ. ಐಪಿಎಲ್ ಸಂಪೂರ್ಣವಾಗಿ ಹಣಕಾಸಿನ ಮೇಲೆ ನಡೆಯುವ ಜೂಜಾಟವಾಗಿದೆ. ಇದರಿಂದ ರಾಜ್ಯದ ಮತ್ತು ದೇಶದ ಲಕ್ಷಾಂತರ ಯುವಕರು ಇದರಲ್ಲಿ ಸಿಲುಕಿ ತಮ್ಮ ಬದುಕನ್ನ ಕಳೆದುಕೊಳ್ಳುತ್ತಿದ್ದಾರೆ. ಐಪಿಎಲ್ ಪಂದ್ಯಾವಳಿಗಳು ಕ್ರೀಡಾಸ್ಪೂರ್ತಿಗೆ ಬದಲಾಗಿ ಯುವಜನಾಂಗವನ್ನ ದಾರಿ ತಪ್ಪಿಸುತ್ತಿವೆ ಎಂದು ದೂರಿದ್ದಾರೆ.
ವಿಜಯೋತ್ಸವ ಮಾಡುವಾಗ ಸರಿಯಾದ ಪೂರ್ವ ಸಿದ್ಧತೆಗಳನ್ನು ಬಂದೋಬಸ್ತ್ ಮಾಡಿಕೊಳ್ಳದೇ ಅವಸರದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಸರ್ಕಾರದ ಕ್ರಮ ಖಂಡನಿಯ. ಈ ದುರಂತದ ನಿಜವಾದ ಕಾರಣವನ್ನು ಸಮಗ್ರ ತನಿಖೆಯ ಮೂಲಕ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ