Bengaluru Stampede Case: ಡಿಪಿಎಆರ್‌ ಸತ್ಯವತಿಗೆ ಬರೆದಿದ್ದಾರೆನ್ನಲಾದ ಡಿಸಿಪಿ ಪತ್ರ ವೈರಲ್; ಪತ್ರದಲ್ಲೇನಿದೆ?

Kannadaprabha News   | Kannada Prabha
Published : Jun 09, 2025, 07:31 AM ISTUpdated : Jun 09, 2025, 10:08 AM IST
Bengaluru stampede case

ಸಾರಾಂಶ

ಆರ್‌ಸಿಬಿ ತಂಡದ ಸನ್ಮಾನ ಕಾರ್ಯಕ್ರಮವನ್ನು ವಿಧಾನಸೌಧದಲ್ಲಿ ಆಯೋಜಿಸುವುದರಿಂದ ಭದ್ರತಾ ಸಮಸ್ಯೆ ಉಂಟಾಗಬಹುದು ಎಂದು ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಎಚ್ಚರಿಸಿದ್ದಾರೆ..

ಬೆಂಗಳೂರು (ಜೂ.9): ಆರ್‌ಸಿಬಿ ಕ್ರಿಕೆಟ್‌ ತಂಡದ ಸನ್ಮಾನ ಕಾರ್ಯಕ್ರಮವನ್ನು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆತುರದಲ್ಲಿ ಆಯೋಜಿಸಿದರೆ ಬಂದೋಬಸ್ತ್‌ ಕರ್ತವ್ಯಕ್ಕೆ ತೊಂದರೆಯಾಗಲಿದೆ ಎಂದು ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಕರಿಬಸವನಗೌಡ ಜೂ.4ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಡಿಪಿಎಆರ್‌) ಕಾರ್ಯದರ್ಶಿ ಸತ್ಯವತಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಧಾನಸೌಧದಲ್ಲಿ ಆರ್‌ಸಿಬಿ ಆಟಗಾರರಿಗೆ ಸನ್ಮಾನಿಸಲು ಅನುಮತಿ ಕೋರಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಜೂ.3ರಂದು ಡಿಪಿಎಆರ್‌ ಇಲಾಖೆಗೆ ಪತ್ರ ಬರೆದಿತ್ತು. ಈ ಪತ್ರದ ಬಗ್ಗೆ ಅಭಿಪ್ರಾಯ ಕೇಳಿ ಡಿಪಿಎಆರ್‌ ಕಾರ್ಯದರ್ಶಿ ವಿಧಾನಸೌಧ ಭದ್ರತೆ ಡಿಸಿಪಿಗೆ ಪತ್ರ ಬರೆದಿದ್ದರು. ಈ ಪತ್ರ ಸಂಬಂಧ ಡಿಸಿಪಿ ಅವರು ಆತುರದಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಬಂದೋಬಸ್ತ್‌ ಕರ್ತವ್ಯಕ್ಕೆ ತೊಂದರೆಯಾಗಲಿದೆ ಎಂದು ಪತ್ರದ ಬರೆದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಿಯಮಾನುಸಾರ ಕಾರ್ಯಕ್ರಮ ನಡೆಸಲು ಸಮಯಾವಕಾಶದ ಅಗತ್ಯವಿದೆ. ಆದರೂ ಸರ್ಕಾರ ತೆಗೆದುಕೊಳ್ಳುವ ನಿರ್ಣಯದಂತೆ ನಡೆದುಕೊಳ್ಳುವುದಾಗಿ ಅಭಿಪ್ರಾಯ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಸಿಬ್ಬಂದಿ ಕೊರತೆಯಿಂದ ತೊಂದರೆ:

ಆರ್‌ಸಿಬಿ ಕ್ರಿಕೆಟ್‌ ತಂಡಕ್ಕೆ ದೇಶಾದ್ಯಂತ ಅಭಿಮಾನಿಗಳು ಇದ್ದು, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆತುರದಲ್ಲಿ ಕಾರ್ಯಕ್ರಮ ಆಯೋಜಿಸಿದರೆ, ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ವಿಧಾನಸೌಧಕ್ಕೆ ಆಗಮಿಸುವ ಸಾಧ್ಯತೆಯಿದೆ. ವಿಧಾನಸೌಧ ಭದ್ರತಾ ವಿಭಾಗದಲ್ಲಿ ಅಧಿಕಾರಿ. ಸಿಬ್ಬಂದಿ ಕೊರತೆ ಇರುವುದರಿಂದ ಬಂದೋಬಸ್ತ್‌ ಕರ್ತವ್ಯಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸಚಿವಾಲಯದ ಅಧಿಕಾರಿ/ಸಿಬ್ಬಂದಿಗೆ ರಜೆ ಕೊಡಿ:

ಜೂ.4ರಂದು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಸಾರ್ವಜನಿಕರಿಗೆ ವಿಧಾನಸೌಧ ಪ್ರವೇಶಿಸಲು ವಿತರಣೆ ಮಾಡುವ ಆನ್‌ಲೈನ್‌ ಮತ್ತು ಆಫ್‌ ಲೈನ್‌ ಪಾಸುಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು. ಸಚಿವಾಲಯದ ಅಧಿಕಾರಿ/ಸಿಬ್ಬಂದಿ ತಮ್ಮ ಕುಟುಂಬ ವರ್ಗದವರನ್ನು ಕರೆತರುವ ಸಾಧ್ಯತೆಗಳು ಹೆಚ್ಚಿರುವುದರಿಂದ ಕುಟುಂಬ ವರ್ಗದವರನ್ನು ಕರೆತರದಂತೆ ಆದೇಶಿಸಬೇಕು ಮತ್ತು ಜೂ.4ರ ಮಧ್ಯಾಹ್ನ ಅಧಿಕಾರಿ/ಸಿಬ್ಬಂದಿಗೆ ರಜೆ ಘೋಷಿಸಬೇಕು. ಕಾರ್ಯಕ್ರಮದ ಸ್ಥಳಕ್ಕೆ ಬಾರದಂತೆ ಸೂಚನೆ ನೀಡಬೇಕು ಎಂದು ಡಿಸಿಪಿ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಸಿಸಿಟಿವಿ ಕ್ಯಾಮರಾಗಳಿಲ್ಲ:

ವಿಧಾನಸೌಧ ಕಟ್ಟಡವು ಪ್ರಮುಖ ಕಟ್ಟಡವಾಗಿದ್ದು, ಕಟ್ಟಡದ ಸುರಕ್ಷತೆ ಸಂಬಂಧ ಆವರಣ ಮತ್ತು ಮುಂಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಕೋರಿದ್ದರೂ ಅಳವಡಿಸಿಲ್ಲ. ಸನ್ಮಾನ ಕಾರ್ಯಕ್ರಮಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ಆಗಮಿಸುವುದರಿಂದ ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಅವಶ್ಯಕತೆ ಇರುತ್ತದೆ. ಇಲ್ಲವಾದರೆ, ಭದ್ರತಾ ವ್ಯವಸ್ಥೆಗೆ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

2 ತಾಸು ಮೊದಲು ವೇದಿಕೆ ಬಿಟ್ಟು ಕೊಡಬೇಕು:

ಕಾರ್ಯಕ್ರಮದಲ್ಲಿ ಕ್ರಿಕೆಟ್‌ ಆಟಗಾರರನ್ನು ಸನ್ಮಾನಿಸುವ ಸಂಬಂಧ ವೇದಿಕೆಯು ಸದೃಢವಾಗಿರುವ ಬಗ್ಗೆ ವಿಧಾನಸೌಧದ ಲೋಕೋಪಯೋಗಿ ಇಲಾಖೆಯಿಂದ ದೃಢೀಕರಣ ಪತ್ರ ಪಡೆದುಕೊಳ್ಳಲು ಕನಿಷ್ಠ ಎರಡು ತಾಸು ಮೊದಲು ವೇದಿಕೆ ಪರಿವೀಕ್ಷಣೆಗೆ ಬಿಟ್ಟು ಕೊಡಲು ಆಯೋಜಕರಿಗೆ ತಿಳಿಸಬೇಕು. ಕಾರ್ಯಕ್ರಮದಲ್ಲಿ ವಿದ್ಯುತ್‌ ಉಪಕರಣಗಳನ್ನು ಬಳಸುತ್ತಿರುವುದರಿಂದ ಸಂಬಂಧಿತ ಸದೃಢತೆ ಪ್ರಮಾಣಪತ್ರ(ಫಿಟ್‌ನೆಸ್‌ ಸರ್ಟಿಫಿಕೆಟ್‌) ಪಡೆಯುವ ಸಂಬಂಧ ಲೋಕೋಪಯೋಗಿ ಇಲಾಖೆ ಎಇಇ(ಎಲೆಕ್ಟ್ರಿಕಲ್‌)ಗೆ ಪತ್ರ ವ್ಯವಹಾರ ನಡೆಸಲು ವಿದ್ಯುತ್‌ ವಿಭಾಗದ ಅಭಿಯಂತರರಿಗೆ ಕೋರಲಾಗಿದೆ.

ಸಮನ್ವಯತೆಗೆ ಸಮಯ ಬೇಕು:

ಕಾರ್ಯಕ್ರಮ ಜರುಗುವ ಎರಡು ತಾಸಿಗೂ ಮೊದಲು ವೇದಿಕೆಯನ್ನು ವಿಧ್ವಂಸಕ ನಿಗ್ರಹ ತಪಾಸಣಾ ತಂಡಕ್ಕೆ ಬಿಟ್ಟುಕೊಡಲು ಆಯೋಜಕರಿಗೆ ಸೂಚಿಸಬೇಕು. ಆರ್‌ಸಿಬಿ ತಂಡಕ್ಕೆ ಫ್ಯಾನ್‌ ಫಾಲೋಯಿಂಗ್‌ ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ಹೊರಗಿನಿಂದ ಅಧಿಕಾರಿ/ಸಿಬ್ಬಂದಿ ಬಂದೋಬಸ್ತ್‌ಗೆ ತೆಗೆದುಕೊಳ್ಳಲು ಸಮಯದ ಅಗತ್ಯವಿದೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸರೊಂದಿಗೆ ಸಮನ್ವಯತೆ ಸಾಧಿಸುವ ಅಗತ್ಯವಿದ್ದು, ಇದಕ್ಕೆ ಸಮಯದ ಕೊರತೆ ಇದೆ ಎನಿಸುತ್ತಿದೆ.

ಸರ್ಕಾರದ ನಿರ್ಣಯಕ್ಕೆ ಬದ್ಧ:

ಇನ್ನು ಕಾರ್ಯಕ್ರಮಗಳಲ್ಲಿ ಹೊರಗಿನಿಂದ ಡ್ರೋನ್‌ ಕ್ಯಾಮೆರಾ ಬಳಸುವ ಸಾಧ್ಯತೆ ಇರುವುದರಿಂದ ಆ್ಯಂಟಿ ಡ್ರೋನ್‌ ಸಿಸ್ಟಂ ಅಳವಡಿಸುವ ಅಗತ್ಯವಿದೆ. ವಿಧಾನಸೌಧ ಕಟ್ಟಡವು ಪಾರಂಪರಿಕ ಕಟ್ಟಡ ಆಗಿರುವುದರಿಂದ ಭದ್ರತೆ ದೃಷ್ಟಿಯಿಂದ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗದಂತೆ ನಿಯಮಾನುಸಾರ ಕಾರ್ಯಕ್ರಮ ನಡೆಸಲು ಸಮಯಾವಕಾಶದ ಅಗತ್ಯವಿದೆ. ಆದರೂ ಸರ್ಕಾರ ತೆಗೆದುಕೊಳ್ಳುವ ನಿರ್ಣಯದಂತೆ ನಡೆದುಕೊಳ್ಳುವುದಾಗಿ ಡಿಸಿಪಿ ಅವರು ಡಿಪಿಎಆರ್‌ ಇಲಾಖೆ ಕಾರ್ಯದರ್ಶಿಗೆ ತಮ್ಮ ಅಭಿಪ್ರಾಯ ವರದಿಯಲ್ಲಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!