ರಿಪೋರ್ಟರ್ಸ್ ಡೈರಿ | ಬಂದರೋ ಬಂದರೋ ಗಣತಿದಾರರು ಕಾರಲ್ಲಿ ಬಂದರು!

Kannadaprabha News, Ravi Janekal |   | Kannada Prabha
Published : Oct 27, 2025, 11:44 AM IST
Bengaluru social and educational survey reporter diary

ಸಾರಾಂಶ

15-20 ನಿಮಿಷದಲ್ಲಿ ಪಟ ಪಟನೆ ಮಾಹಿತಿ ಪಡೆದ ಮಹಿಳೆ ಥ್ಯಾಂಕ್ಸ್ ಎಂದು ಬುರ್ರೆಂದು ಕಾರಿನಲ್ಲಿ ಹೊರಟು ಹೋಗುವುದನ್ನು ನೋಡುತ್ತಾ ನಿಂತ ಸ್ನೇಹಿತ ಬೆಂಗಳೂರಿನಲ್ಲಿ ಮಾತ್ರ ಇದೆಲ್ಲ ಸಾಧ್ಯ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದು ನಿಜ.

ಮಧ್ಯಮ ವರ್ಗದ ಜನ ವಾಸಿಸುವ ಪ್ರದೇಶಗಳ ಮನೆಗಳಿಗೆ ದಿಢೀರ್‌ ಕಾರಲ್ಲಿ ಬಂದು ನಿಮ್ಮ ಹೆಸರು ಹೇಳಿದ್ರೆ, ಯಾರಪ್ಪ ಇವರು... ನನ್ನ ಹೆಸರು ಇವರಿಗೆ ಹೇಗೆ ಗೊತ್ತು? ಎಂದು ಕೊಂಚ ಗಲಿಬಿಲಿಯಾದರೆ ಅಚ್ಚರಿ ಇಲ್ಲ ಬಿಡಿ!

ಇಷ್ಟಕ್ಕೂಇಂತಹ ಪ್ರಸಂಗ ಸದ್ಯ ನಡೆಯುತ್ತಿರುವುದು ಬೇರೆಲ್ಲೂ ಅಲ್ಲ, ರಾಜಧಾನಿ ಬೆಂಗಳೂರಿನಲ್ಲಿ. ವಿಷಯ ಏನೆಂದರೆ ಸದ್ಯ ರಾಜಧಾನಿ ಬೆಂಗಳೂರಿನಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿ ನಡೆಯುತ್ತಿದೆ. ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶಿಕ್ಷಕರ ಬದಲು ಬೇರೆ ಬೇರೆ ಇಲಾಖೆಗಳ ನೌಕರರ ಮೂಲಕ ಗಣತಿ ಕಾರ್ಯ ಮಾಡಿಸಲಾಗುತ್ತದೆ. ಸಾಮಾನ್ಯವಾಗಿ ಗಣತಿ ಎಂದರೆ ಶಿಕ್ಷಕರು ಬರುತ್ತಾರೆ. ಬಿಸಿಲು, ಗಾಳಿ, ಧೂಳು ಎನ್ನದೇ ಮನೆ ಮನೆಗೆ ತೆರಳಿ ಉಸ್ಸಪ್ಪಾ ಎನ್ನುತ್ತಾ ಈವರೆಗೆ ಗಣತಿ ಮಾಡುವುದನ್ನು ನೋಡಿಕೊಂಡು ಬರುತ್ತಿದ್ದ ಜನರಿಗೆ ಈಗ ಹೊಸ ಗಣತಿದಾರರ ದರ್ಶನ ಆಗುತ್ತಿದೆ. ಟಿಪ್-ಟಾಪ್‌ ಆಗಿ ಕಾರಿನಿಂದಿಳಿದು ಬರುವ ಗಣತಿದಾರರು ಮನೆ ಮನೆ ಸಮೀಕ್ಷೆ ಮಾಡತೊಡಗಿದ್ದಾರೆ.

ಇತ್ತೀಚೆಗೆ ಸ್ನೇಹಿತರೊಬ್ಬರು ರಜೆ ದಿನದಂದು ಮನೆ ಮುಂದಿನ ಕಸ ಗುಡಿಸುತ್ತಾ ನಿಂತಿದ್ದರು, ಆಗ ಬುರ್ರೆಂದು ಮನೆ ಮುಂದೆ ಕಾರು ಬಂದು ನಿಂತಿತು. ಕಾರಿನಿಂದಿಳಿದ ಇಬ್ಬರು, ಮೂವರು ಮಹಿಳೆಯರು ಒಂದೊಂದು ಕಡೆ ತೆರಳಿದರು. ಒಬ್ಬ ಮಹಿಳೆ ನೇರವಾಗಿ ಇವರತ್ತ ಬಂದು ಹೆಸರು ಹೇಳುತ್ತಿದ್ದಂತೆ ತಾವ್ಯಾರು, ಯಾರು ಬೇಕಾಗಿತ್ತು? ಎಂದು ಕೇಳಿದರು. ಅದಕ್ಕೆ ತಾವು ಗಣತಿ ಮಾಡಲು ಬಂದಿದ್ದೇವೆ ಎಂದಾಗ ಸ್ನೇಹಿತ ಕೊಂಚ ಸಾವರಿಸಿಕೊಂಡು ಮನೆ ಒಳಗೆ ಕರೆದು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಮನೆಗೆ ಬಂದವರಿಗೆ ಸುಮ್ಮನೆ ಕಳಿಸಲು ಆಗುತ್ತಾ.. ಬಿಸಿ ಬಿಸಿ ಟೀ ನೀಡಿ, ಯಾವ ಡಿಪಾರ್ಟ್‌ಮೆಂಟ್‌? ಹೇಗೆ ಗಣತಿ ನಡೆಯುತ್ತಿದೆ ಎಂದೆಲ್ಲಾ ಪ್ರಶ್ನೆ ಕೇಳಿಯೇ ಬಿಟ್ಟರು.

15-20 ನಿಮಿಷದಲ್ಲಿ ಪಟ ಪಟನೆ ಮಾಹಿತಿ ಪಡೆದ ಮಹಿಳೆ ಥ್ಯಾಂಕ್ಸ್ ಎಂದು ಬುರ್ರೆಂದು ಕಾರಿನಲ್ಲಿ ಹೊರಟು ಹೋಗುವುದನ್ನು ನೋಡುತ್ತಾ ನಿಂತ ಸ್ನೇಹಿತ ಬೆಂಗಳೂರಿನಲ್ಲಿ ಮಾತ್ರ ಇದೆಲ್ಲ ಸಾಧ್ಯ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದು ಮಾತ್ರ ನಿಜ.

ಬೆಳಗ್ಗೆ ಸೂಟು, ಮಧ್ಯಾಹ್ನ ಕುರ್ತಾ  ಸಂಜೆ ವೇಳೆ ಮಡಿ ಪಂಚೆಯಲ್ಲಿ ಡಿಕೆಶಿ!

ಬೆಳಗ್ಗೆ ಸೂಟು ಬೂಟು. ಮಧ್ಯಾಹ್ನ ಕುರ್ತಾ ಮಾದರಿಯ ಡ್ರೆಸ್‌ ಮೇಲೊಂದು ಆಕರ್ಷಕ ಶಾಲು, ಸಂಜೆ ಮಡಿ ಪಂಚೆ, ಶಲ್ಯ, ಒಂದೊಂದು ಸಾರಿ ಅರ್ಧ ತೋಳಿನ ಶರ್ಟ್‌, ಪ್ರತಿ ಉಡುಪಿನ ಮೇಲೊಂದು ಆಕರ್ಷಕ ಚಿಕ್ಕ ಶಾಲು.... ಈ ರೀತಿ ಇತ್ತೀಚಿನ ತಿಂಗಳಲ್ಲಿ ಸಮಯ, ಕಾರ್ಯಕ್ರಮ, ಸಂದರ್ಭಕ್ಕೆ ತಕ್ಕಂತೆ ದಿರಿಸು ಹಾಕಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿರುವವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌.

ಕಾರ್ಯಕ್ರಮಕ್ಕೆ ತಕ್ಕಂತೆ ಧಿರಿಸು ಧರಿಸುವುದು ಒಂದಾದರೆ, ಹೆಗಲ ಮೇಲೆ ವಿಶೇಷವಾದ ವಿನ್ಯಾಸದ ಶಾಲು ಗಮನ ಸೆಳೆಯುತ್ತಿರುವುದು ಸುಳ್ಳಲ್ಲ, ಅದರಲ್ಲೂ ದಿನಕ್ಕೊಂದು ಬಗೆಯ ಶಾಲು ಧರಿಸುವುದನ್ನು ನೋಡಿದರೆ, ಉಪಮುಖ್ಯಮಂತ್ರಿಗಳ ಬಳಿ ಒಳ್ಳೆಯ ಡಿಸೈನರ್‌ ಇದ್ದಾರೆಂದು ಹೇಳಬಹುದು.

ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರದ ವೇಳೆ ಪಂಚೆ, ಶರ್ಟ್‌ ಮೇಲೆ ತಾಮ್ರ ಬಣ್ಣದ ಪಟ್ಟೆ ಇರುವ ಶರ್ಟ್‌ ಧರಿಸಿ ಗಮನ ಸೆಳೆದಿದ್ದ ಡಿ.ಕೆ.ಶಿವಕುಮಾರ್‌, ಪಕ್ಷದ ಕಾರ್ಯಕ್ರಮಕ್ಕೆ ಬಂದಾಗ ಗಾಂಧಿ ಟೋಪಿ ಧರಿಸುತ್ತಾರೆ. ತ್ರಿವರ್ಣದ ಅಂಚು ಇರುವ ಶಾಲು ಧರಿಸಿ ಗಮನ ಸೆಳೆಯುತ್ತಾರೆ. ಸದ್ಯ ನಡೆಸುತ್ತಿರುವ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಟೀ ಶರ್ಟ್‌ ಪ್ಯಾಂಟು ಜೊತೆಗೆ ಮೇಲೋಂದು ಶಲ್ಯ ಧರಿಸಿಕೊಳ್ಳುತ್ತಿದ್ದಾರೆ.

ವಿದೇಶದ ಪ್ರತಿನಿಧಿಗಳು ಬಂದರೆ ಡಿಕೆಶಿ ಫುಲ್ ಸೂಟ್

ವಿದೇಶದ ಪ್ರತಿನಿಧಿಗಳು ಬಂದರೆ ಫುಲ್‌ ಸೂಟ್‌ನಲ್ಲಿ ಕಂಗೊಳಿಸಿದರೆ, ದೇವಸ್ಥಾನ, ಪೂಜೆ. ಹವನ ಕಾರ್ಯಕ್ರಮದಲ್ಲಿ ಮಡಿ ಪಂಚೆ, ಮೇಲೊಂದು ಬಿಳಿ ಬಟ್ಟೆ ಉಟ್ಟುಕೊಂಡು ಬಿಡುತ್ತಾರೆ. ಇಷ್ಟಕ್ಕೆ ಮುಗಿಯುವುದಿಲ್ಲ, ಒಂದೊಂದು ಸಾರಿ ಪ್ರಧಾನಿ ಮೋದಿ ರೀತಿಯೇ ಅರ್ಧ ತೋಳಿನ ಜಾಕೆಟ್‌ ಧರಿಸಿ ಗಮನ ಸೆಳೆಯುತ್ತಾರೆ.

ಬಹಳ ವರ್ಷಗಳ ಹಿಂದೆ ಎಸ್‌.ಬಂಗಾರಪ್ಪ ಅವರು ಸಹ ಕಾರ್ಯಕ್ರಮಕ್ಕೆ ತಕ್ಕಂತೆ ಸೂಟ್‌, ಕಚ್ಚೆಪಂಚೆ, ಅಡ್ಡ ಪಂಚೆ, ಬಣ್ಣ ಬಣ್ಣದ ಶರ್ಟ್‌ ಧರಿಸುತ್ತಿದ್ದರು, ನಂತರದಲ್ಲಿ ಬಂದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಮಾತ್ರ ತುಂಬಾ ವಿಶಿಷ್ಟ. ಅಡಿಯಿಂದ ಮುಡಿಯವರೆಗೆ ಶಿಸ್ತು. ಯಾವುದೇ ಡ್ರೆಸ್‌ ಹಾಕಿಕೊಂಡರೂ ಮತ್ತೊಮ್ಮೆ ನೋಡಬೇಕು ಎನ್ನುವಂತಹ ವ್ಯಕ್ತಿತ್ವವಾಗಿತ್ತು. ಈಗ ಅವರ ಸಾಲಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರ್ಪಡೆಯಾಗಿದ್ದಾರೆ.

-ಎಂ.ಆರ್‌.ಚಂದ್ರಮೌಳಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!