ಬೆಂಗಳೂರಿನ ಐಪಿಎಲ್ ಟಿಕೆಟ್ ಹಗರಣ: ಕತ್ತಲಲ್ಲುಳಿದ ಪೊಲೀಸ್ ಕಮಿಷನರ್!

Published : Apr 18, 2025, 01:28 PM ISTUpdated : Apr 18, 2025, 01:43 PM IST
ಬೆಂಗಳೂರಿನ ಐಪಿಎಲ್ ಟಿಕೆಟ್ ಹಗರಣ: ಕತ್ತಲಲ್ಲುಳಿದ ಪೊಲೀಸ್ ಕಮಿಷನರ್!

ಸಾರಾಂಶ

ಐಪಿಎಲ್ 2025ರ ಟಿಕೆಟ್‌ಗಳ ಕಾಳ ಮಾರುಕಟ್ಟೆ ಜಾಲದಲ್ಲಿ ಶಾಸಕರು, ಸಚಿವರ ಸಹಾಯಕರು, ಕೆಎಸ್‌ಸಿಎ ಸಿಬ್ಬಂದಿ ಮತ್ತು ಪೊಲೀಸರ ಪಾತ್ರವಿರುವ ಬಗ್ಗೆ ಆರೋಪಗಳಿವೆ. ಸಿಸಿಬಿ ಕೆಲವು ಬಂಧನಗಳನ್ನು ಮಾಡಿದ್ದರೂ, ದೊಡ್ಡ ಮಾಸ್ಟರ್ ಮೈಂಡ್‌ಗಳು ಇನ್ನೂ ಹೊರಗಿದ್ದಾರೆ ಎಂಬ ಅನುಮಾನಗಳಿವೆ. ಅಭಿಮಾನಿಗಳು ನ್ಯಾಯಯುತವಾಗಿ ಟಿಕೆಟ್ ಪಡೆಯಲು ಏನು ಮಾಡಬೇಕು?

ಗಿರೀಶ್ ಲಿಂಗಣ್ಣ
(ಲೇಖಕರು ರಕ್ಷಣಾ ವಿಶ್ಲೇಷಕ)

IPL 2025 ಬೆಂಗಳೂರಿಗೆ ಹೊಸ ರೋಮಾಂಚನ ತಂದಿದೆ. ಆರ್‌ಸಿಬಿ ತಂಡದ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಧಾವಿಸುತ್ತಿದ್ದಾರೆ. ಆದರೆ, ಈ ಖುಷಿಯ ಮೇಲೆ ಈಗ ಒಂದು ಕಾರ್ಮೋಡ ಮೂಡುತ್ತಿದೆ. ಅದೇ ವಿಪರೀತವಾದ ಬ್ಲ್ಯಾಕ್ ಮಾರ್ಕೆಟ್ ಟಿಕೆಟ್ ವ್ಯಾಪಾರ. ವರದಿಗಳ ಪ್ರಕಾರ, ಈ ಜಾಲದಲ್ಲಿ , ಶಾಸಕರು ಮತ್ತು ಸಚಿವರ ವೈಯಕ್ತಿಕ ಸಹಾಯಕರು, ಕೆಎಸ್‌ಸಿಎ ಸಿಬ್ಬಂದಿಗಳು, ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ನಿನ ಒಂದಷ್ಟು ಸಿಬ್ಬಂದಿಗಳೂ ಭಾಗಿಯಾಗಿದ್ದಾರೆ. ಬೆಂಗಳೂರು ಪೊಲೀಸ್ ಮತ್ತು ಸೆಂಟ್ರಲ್ ಕ್ರೈಮ್ ಬ್ರ್ಯಾಂಚ್ (ಸಿಸಿಬಿ) ಒಂದಷ್ಟು ಜನರನ್ನು ಬಂಧಿಸಿರುವ ಹೊರತಾಗಿಯೂ, ಈ ಜಾಲದ ಕಾರ್ಯಾಚರಣೆ ಮುಂದುವರಿದಿದೆ. ಅಭಿಮಾನಿಗಳು ಆಕ್ರೋಶಗೊಂಡಿದ್ದು, ಸಿಸಿಬಿ ನಿಜವಾದ ಅಪರಾಧಿಗಳ ಮೇಲೆ ಕಣ್ಣಿಡಲು ವಿಫಲವಾಗಿದೆಯೇ ಎಂಬ ಅನುಮಾನಗಳು ಮೂಡುವಂತೆ ಮಾಡಿದೆ.

ಎಪ್ರಿಲ್ 13, 2025ರಂದು, ಕ್ರೀಡಾಂಗಣದ ಸಿಬ್ಬಂದಿ ಸೇರಿದಂತೆ ಎಂಟು ಜನರನ್ನು 1,200 ರೂಪಾಯಿ ಮೂಲ ಬೆಲೆಯ ಟಿಕೆಟ್‌ಗಳನ್ನು 32,000 ರೂಪಾಯಿಗಳಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ. ಕೆಲವು ದಿನಗಳ ಮುನ್ನ, ಕ್ಯಾಂಟೀನ್ ಸಿಬ್ಬಂದಿ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್‌ನಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಕೆಎಸ್‌ಸಿಎ ವಿರುದ್ಧ ಈಗ ಅನುಮಾನಗಳು ಮೂಡಿದ್ದು, ಅದರ ಸದಸ್ಯರು ಪ್ರಶ್ನೆಗಳನ್ನು ಎದುರಿಸಬೇಕಾಗಬಹುದು. ಬಿಸಿಸಿಐ ಸಹ ಅಕ್ರಮ ಟಿಕೆಟ್ ವ್ಯಾಪಾರದ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಆದರೂ ಈಗ ಕೈಗೊಂಡಿರುವ ಬಂಧನಗಳಿಂದ ಯಾವುದೇ ಪ್ರಯೋಜನ ಆದಂತೆ ಕಾಣುತ್ತಿಲ್ಲ. ಅಭಿಮಾನಿಗಳು ಇವುಗಳನ್ನು ಪ್ರಚಾರದ ಕ್ರಮಗಳು ಎಂದೇ ಪರಿಗಣಿಸಿದ್ದು, ಈ ದಂಧೆಯ ಹಿಂದಿನ ಮಾಸ್ಟರ್ ಮೈಂಡ್‌ಗಳು ಯಾವುದೇ ಕ್ರಮಕ್ಕೆ ಒಳಗಾಗದೆ ಹಾಯಾಗಿದ್ದಾರೆ.

ಇದನ್ನೂ ಓದಿ: ಬೆಂಗೂರಲ್ಲಿಂದು ಆರ್‌ಸಿಬಿ vs ಪಂಜಾಬ್ ಕಿಂಗ್ಸ್ ಬಿಗ್ ಫೈಟ್

ಈ ಹಗರಣದ ಬೇರುಗಳು ಆಳವಾಗಿರುವ ಕುರಿತು ಗಾಳಿ ಸುದ್ದಿಗಳು ಹಬ್ಬಿದ್ದು, ಅವುಗಳನ್ನು ತಳ್ಳಿ ಹಾಕಲು, ಕಡೆಗಣಿಸಲು ಸಾಧ್ಯವಿಲ್ಲ. ಅವುಗಳ ಪ್ರಕಾರ, , ಶಾಸಕರು ಮತ್ತು ಸಚಿವರುಗಳ ಸಹಾಯಕರು, ಮತ್ತು ಒಂದಷ್ಟು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಸಿಬ್ಬಂದಿಗಳೂ ಈ ಹಗರಣದ ಭಾಗವಾಗಿದ್ದಾರೆ. ಇದು ಒಂದು ರೀತಿಯಲ್ಲಿ ಅವರಿಗೆ ಸುಲಭವಾಗಿ ಹಣ ಗಳಿಸುವ ವಿಧಾನವಾಗಿದೆ. ಈ ಆರೋಪಗಳು ಇನ್ನೂ ಸಾಬೀತಾಗಿಲ್ಲವಾದರೂ, ಅಭಿಮಾನಿಗಳ ಆಕ್ರೋಶದ ಬೆಂಕಿಗೆ ತುಪ್ಪ ಸುರಿದಿವೆ. ಒಂದು ವೇಳೆ ಈ ಆರೋಪಗಳು ನಿಜವಾಗಿದ್ದರೆ, ಸಿಸಿಬಿ ಯಾಕೆ ಸಣ್ಣಪುಟ್ಟ ಅಪರಾಧಿಗಳನ್ನು ಹಿಡಿದು, ದೊಡ್ಡವರನ್ನು ಹಾಗೇ ಬಿಟ್ಟಿದೆ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಬೆಂಗಳೂರು ಪೊಲೀಸ್ ಕಮಿಷನರ್ ಈ ಹಗರಣದ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು ಭರವಸೆ ಮೂಡಿಸಿದ್ದರೂ, ಇಲ್ಲಿಯ ತನಕ ಕೇವಲ 15 ಜನರು ಮಾತ್ರವೇ ಬಂಧಿತರಾಗಿದ್ದು, ಸಂಪೂರ್ಣ ಪೊಲೀಸ್ ವ್ಯವಸ್ಥೆ ಈ ಹಗರಣವನ್ನು ಭೇದಿಸುವಲ್ಲಿ ಗಂಭೀರವಾಗಿದೆಯೇ ಎಂಬ ಅನುಮಾನಗಳನ್ನು ಮೂಡಿಸಿದೆ.

ಈ ಹಗರಣ ಕೇವಲ ಅಭಿಮಾನಿಗಳ ಹಣವನ್ನು ಪೋಲು ಮಾಡುತ್ತಿರುವುದು ಮಾತ್ರವಲ್ಲ, ಅವರ ನಂಬಿಕೆಯನ್ನೇ ಹರಣ ಮಾಡುತ್ತಿದೆ. ಐಪಿಎಲ್ ಒಂದು ರೀತಿ ಕ್ರಿಕೆಟ್‌ನ ಜಾದೂ ಆಗಿದ್ದು, ಈಗ ಐಪಿಎಲ್ ಟಿಕೆಟ್ ಹೀಗೆ ಕಾಳ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದರಿಂದ ಶ್ರೀಮಂತರು ಮಾತ್ರವೇ ಟಿಕೆಟ್ ಕೊಳ್ಳಲು ಸಾಧ್ಯವಾಗುತ್ತದೆ. ವಿರಾಟ್ ಕೊಹ್ಲಿಯಂತಹ ಕ್ರಿಕೆಟಿಗರನ್ನು ನೋಡಲು ಬಯಸುವ ಪ್ರಾಮಾಣಿಕ ಕ್ರಿಕೆಟ್ ಅಭಿಮಾನಿಗಳು ಮೈದಾನದಿಂದ ಹೊರಗುಳಿಯುವಂತಾಗಿದೆ. ಸಿಸಿಬಿ ಪೊಲೀಸರು ಹಗರಣದ ಆಳಕ್ಕಿಳಿದು, ಪ್ರಭಾವಿ ವ್ಯಕ್ತಿಗಳು ರಾಜಕೀಯ,  ಅಥವಾ ಇನ್ನಾವುದೇ ಸ್ಥಾನದಲ್ಲಿದ್ದರೂ ಅವರನ್ನು ಹಿಡಿಯಬೇಕು. ಇಲ್ಲಿ ಪಾರದರ್ಶಕತೆ ಅವಶ್ಯಕವಾಗಿದ್ದು, ಅಭಿಮಾನಿಗಳಿಗೆ ಯಾರು ವಿಚಾರಣೆಗೆ ಒಳಪಡುತ್ತಿದ್ದಾರೆ ಎನ್ನುವುದು ತಿಳಿಯಬೇಕಿದೆ. ಇಲ್ಲದಿದ್ದರೆ ಎಲ್ಲವೂ ಅಭಿಮಾನಿಗಳಿಗೆ ದ್ರೋಹ ಬಗೆದಂತೆ ಭಾಸವಾಗುತ್ತದೆ.

ಅಭಿಮಾನಿಗಳು ಕೇವಲ ಬುಕ್ ಮೈ ಶೋನಂತಹ ಅಧಿಕೃತ ಜಾಲತಾಣಗಳಿಂದ ಟಿಕೆಟ್ ಖರೀದಿಸುವುದರಿಂದ ಈ ಹಗರಣದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು. ಆದರೆ ಇದು ಕೇವಲ ತಾತ್ಕಾಲಿಕ ಪರಿಹಾರವಷ್ಟೇ. ನೈಜ ಪರಿಹಾರಕ್ಕಾಗಿ, ಬೆಂಗಳೂರು ಪೊಲೀಸರು, ಸಿಸಿಬಿ, ಕೆಎಸ್‌ಸಿಎ ತಮ್ಮ ಆಟಗಳನ್ನು ನಿಲ್ಲಿಸಬೇಕು. ಅವರು ಈ ಹಗರಣದ ಸಂಪೂರ್ಣ ಜಾಲವನ್ನು ಬಯಲಿಗೆ ತರಬೇಕು. ಒಂದು ವೇಳೆ , ರಾಜಕೀಯ ವ್ಯಕ್ತಿಗಳು, ಅಥವಾ ಕಬ್ಬನ್ ಪಾರ್ಕ್ ಪೊಲೀಸರು ಇದರ ಭಾಗವಾಗಿದ್ದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕೆಎಸ್‌ಸಿಎ ಪಂದ್ಯದ ಟಿಕೆಟ್‌ಗಳು ಅಭಿಮಾನಿಗಳಿಗೇ ಸಿಗುವಂತೆ ಮಾಡಬೇಕು. ಶಿಸ್ತಿನ ಕ್ರಮಗಳ ಹೊರತಾಗಿ, ಬೆಂಗಳೂರಿನ ಐಪಿಎಲ್ ಆಸಕ್ತಿ ಕುಸಿದು ಹೋಗಿ, ಅಭಿಮಾನಿಗಳ ನಂಬಿಕೆಯೂ ಕಳೆದೀತು.

ಐಪಿಎಲ್ ಒಂದು ಕ್ರಿಕೆಟ್ ಹಬ್ಬವಾಗಿದ್ದು, ಈ ಕಾಳ ಮಾರುಕಟ್ಟೆ ಅದರ ಅಂತಃಸತ್ವವನ್ನೇ ಹೀರುತ್ತಿದೆ. , ಶಾಸಕರು, ಸಚಿವರ ಸಹಾಯಕರು, ಕೆಎಸ್‌ಸಿಎ ಸಿಬ್ಬಂದಿಗಳು, ಕಬ್ಬನ್ ಪಾರ್ಕ್ ಪೊಲೀಸರ ವಿರುದ್ಧ ಆರೋಪಗಳು ಮೂಡಿಬಂದಿದ್ದು, ಸಿಸಿಬಿಯ ಅರೆ ಮನಸ್ಸಿನ ಕ್ರಮಗಳು ಪ್ರಯೋಜ‌ನ ತರುವುದಿಲ್ಲ. ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಉತ್ತಮ ವ್ಯವಸ್ಥೆಯ ಅವಶ್ಯಕತೆಯಿದೆ. ಈಗ ಪೊಲೀಸ್ ಕಮಿಷನರ್ ಮತ್ತು ಸಿಸಿಬಿಗೆ ತಮ್ಮ ಕಣ್ಣುಗಳನ್ನು ತೆರೆದು, ನಿಜವಾದ ಆರೋಪಿಗಳನ್ನು ಹಿಡಿಯುವ ಸಮಯ ಬಂದಿದೆ. ಆ ಮೂಲಕ ಜನರ ನೆಚ್ಚಿನ ಕ್ರೀಡೆಗೆ ನ್ಯಾಯ ಒದಗಿಸಬೇಕು. ಇನ್ನು ಮುಂದಾದರೂ ಅಭಿಮಾನಿಗಳಿಗೆ ನ್ಯಾಯಯುತವಾಗಿ ಐಪಿಎಲ್ ನೋಡುವ ಅವಕಾಶ ಲಭಿಸುವಂತಾಗಲಿ.

ಇದನ್ನೂ ಓದಿ: ಆರ್‌ಸಿಬಿ ತವರಿನ ಪಂದ್ಯಗಳ ಟಿಕೆಟ್‌ ಈ ಸಲವೂ ದುಬಾರಿ! ಒಂದು ಟಿಕೆಟ್ ಬೆಲೆ ಕೇವಲ ₹42,000

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!