ಬೆಂಗಳೂರು - ಮೈಸೂರು ಹೆದ್ದಾರಿ ಉದ್ಘಾಟನೆಗಿಲ್ಲದ ಆಹ್ವಾನ, ಮೋದಿಗೆ ಧನ್ಯವಾದ ಅರ್ಪಿಸಿದ ಡಿಕೆ ಸುರೇಶ್!

By Gowthami K  |  First Published Mar 12, 2023, 5:05 PM IST

ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆ ತನ್ನನ್ನು ಕರೆಯದಕ್ಕೆ ಪ್ರಧಾನಿ ಮೋದಿ ಅವರಿಗೆ ಸಂಸದ ಡಿಕೆ ಸುರೇಶ್ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು (ಮಾ.12): ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಇಂದು ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಉದ್ಘಾಟಿಸಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ  ತನ್ನನ್ನು ಆಹ್ವಾನ ಮಾಡದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿಕೆ ಸುರೇಶ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೋದಿ ಅವರನ್ನು ಪ್ರಶ್ನೆ ಮಾಡಿ ಸುದೀರ್ಫವಾಗಿ ಬರೆದುಕೊಂಡಿದ್ದಾರೆ.

ತಾವು ಈ ದಿನ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟಿಸಿದ್ದೀರಿ. ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸುವ ಕನಿಷ್ಟ ಸೌಜನ್ಯ ತೋರದಿರುವುದಕ್ಕೆ ನಾನು ತಮಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸುತ್ತೇನೆ.

Tap to resize

Latest Videos

ಈ ರಾಷ್ಟ್ರೀಯ ಹೆದ್ದಾರಿಯ ಬಹುಭಾಗವು ನಾನು ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹಾದುಹೋಗಿದ್ದು, ಇಲ್ಲಿನ ಜನತೆ ನನ್ನನ್ನು ತಮ್ಮ ಸಂಸದನಾಗಿ ಆಯ್ಕೆ ಮಾಡಿದ್ದಾರೆ. ಆದರೆ ನಿಮ್ಮ ಕ್ಷುಲ್ಲಕ ರಾಜಕಾರಣವು ಸಂವಿಧಾನಾತ್ಮಕ ಶಿಷ್ಟಾಚಾರವನ್ನು ಮರೆಮಾಚಿದೆ.

ಈ ರಾಷ್ಟ್ರೀಯ ಹೆದ್ದಾರಿಯ ಸುಮಾರು 30 % ಕಾಮಗಾರಿಯು ಇನ್ನೂ ಬಾಕಿ ಇರುವುದು ನಿಮ್ಮ ಗಮನದಲ್ಲಿದೆ ಎಂದು ಭಾವಿಸಿದ್ದೇನೆ. ಆದರೂ ನೀವು ಈ ಅಪೂರ್ಣ ಯೋಜನೆಯನ್ನು ಕೇವಲ ಚುನಾವಣಾ ಗಿಮಿಕ್ ಗಾಗಿ  ಇಂದು ಉದ್ಘಾಟಿಸಿದ್ದೀರಿ.

2013 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಅಭಿವೃದ್ಧಿ ಪಡಿಸಲು ಮೊದಲು ಪ್ರಸ್ತಾವನೆ ಸಲ್ಲಿಸಿದ್ದನ್ನು ತಮಗೆ ನೆನಪಿಸಬಯಸುತ್ತೇನೆ.

ಅಲ್ಲದೇ ರೈತರ ಭೂಮಿ ಸುಗಮ ಸ್ವಾಧೀನಕ್ಕೆ ಭೂ ಸ್ವಾಧೀನ ಕಾಯಿದೆಗೆ ತಿದ್ದುಪಡಿ ತರದೇ ಹೋಗಿದ್ದರೆ ಈ ಯೋಜನೆ ಇಷ್ಟು ಸುಲಭವಾಗಿ ಕಾರ್ಯಸಾಧು ಆಗುತ್ತಿರಲಿಲ್ಲ ಎಂಬುದನ್ನು ನಾವು ಮರೆಯಬಾರದು. ಇದರ ಸಂಪೂರ್ಣ ಶ್ರೇಯಸ್ಸು ಶ್ರೀಯುತ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಸಲ್ಲಬೇಕು.

ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಯಾದ ದಿನವೇ ಅಪಘಾತ, ಮೂವರಿಗೆ ಗಾಯ!

ಇನ್ನು ಕೇಂದ್ರಕ್ಕೆ ಅತಿಹೆಚ್ಚು ತೆರಿಗೆ ಪಾವತಿಸುವ ಎರಡನೇ ದೊಡ್ಡ ರಾಜ್ಯ ಕರ್ನಾಟಕದ ಸುಮಾರು 5,200 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯು ಪ್ರಧಾನಿ ಕಚೇರಿ ಹಾಗೂ ನೀತಿ ಆಯೋಗದ ಮುಂದೆ ಕಳೆದ 8 ವರ್ಷಗಳಿಂದ ಧೂಳು ಹಿಡಿಯುತ್ತಾ ಕೂತಿದೆ. ಈ ಕುರಿತು ನಿಮ್ಮ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಕರ್ನಾಟಕ ಅಭಿವೃದ್ಧಿ ವಿರುದ್ದದ ನಿಮ್ಮ ನಿಲುವು ಹಾಗೂ ಮಲತಾಯಿ ಧೋರಣೆಗೆ ಹಿಡಿದ ಕೈಗನ್ನಡಿ.

ಮೋದಿ ಕಾರ್ಯಕ್ರಮದ ಬೆನ್ನಲ್ಲೇ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಚಾರ ಪುನರ್ ಆರಂಭ!

ಕರ್ನಾಟಕದ ಅಪೂರ್ಣ ಯೋಜನೆಗಳನ್ನು ಉದ್ಘಾಟಿಸುತ್ತಿರುವುದು ಕರ್ನಾಟಕದ ಜನತೆಯನ್ನು ಹೇಗಾದರೂ ವಂಚಿಸಿ ಚುನಾವಣಾ ಗೆಲುವು ಸಾಧಿಸಬಹುದು ಎನ್ನುವ ನಿಮ್ಮ ಹತಾಶ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿ. ನಿಮ್ಮ ಈ ವಿಕೃತ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ.

 

click me!