ಅವಾಂತರಗಳ ಮಧ್ಯೆ ಕೂಲ್ ಆದ ಬೆಂಗಳೂರು, 25 ವರ್ಷಗಳ ದಾಖಲೆ ಮೀರಿದ ಮಳೆ! ಈ ಮೂರು ಜಿಲ್ಲೆಗಳಿಗೆ ಮತ್ತೆ ಹೈ ಅಲರ್ಟ್ ಘೋಷಣೆ

Published : Apr 30, 2026, 11:08 AM IST
Bengaluru Rains

ಸಾರಾಂಶ

ಏಪ್ರಿಲ್ 29 ರಂದು ಬೆಂಗಳೂರಿನಲ್ಲಿ ಸುರಿದ 111.0 ಮಿ.ಮೀ ಮಳೆಯು ಹಲವು ವರ್ಷಗಳ ದಾಖಲೆಯನ್ನು ಮುರಿದಿದೆ. ಈ ಭಾರೀ ಮಳೆಯೊಂದಿಗೆ ಬಲವಾದ ಗಾಳಿ, ಆಲಿಕಲ್ಲು ಮಳೆ ಕೂಡ ಸಂಭವಿಸಿದ್ದು, ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿಯೂ ಮಳೆಯಾಗುವ ಮುನ್ಸೂಚನೆ ನೀಡಿದೆ.

ಬೆಂಗಳೂರು ನಗರದಲ್ಲಿ ಏಪ್ರಿಲ್ 29ರಂದು ಸುರಿದ ಭಾರೀ ಮಳೆ ಹಲವು ವರ್ಷಗಳ ದಾಖಲೆಗಳನ್ನು ಮುರಿದಿದೆ. ಭಾರತೀಯ ಹವಾಮಾನ ಇಲಾಖೆ (IMD) ನಗರದ ವೀಕ್ಷಣಾಲಯ ನೀಡಿದ ಮಾಹಿತಿಯ ಪ್ರಕಾರ, ಒಂದೇ ದಿನದಲ್ಲಿ 111.0 ಮಿಲಿಮೀಟರ್ ಮಳೆಯು ದಾಖಲಾಗಿದ್ದು, ಇದು ಏಪ್ರಿಲ್ ತಿಂಗಳಲ್ಲಿ ಈವರೆಗೆ ಕಂಡುಬಂದ ಅತ್ಯಧಿಕ ಮಳೆಯಾಗಿದೆ. ಇದಕ್ಕೂ ಮೊದಲು 2001ರ ಏಪ್ರಿಲ್‌ನಲ್ಲಿ 108.6 ಮಿಲಿಮೀಟರ್ ಮಳೆಯೇ ಗರಿಷ್ಠ ದಾಖಲೆಯಾಗಿತ್ತು.

ಮಳೆ ಜೊತೆಗೆ ಬಲವಾದ ಗಾಳಿ

ನಿನ್ನೆ ಸುರಿದ ಮಳೆ ಕೇವಲ ಪ್ರಮಾಣದಲ್ಲೇ ಅಲ್ಲ, ತೀವ್ರತೆಯಲ್ಲಿಯೂ ಗಮನಾರ್ಹವಾಗಿತ್ತು. ಕೇವಲ ಒಂದು ಗಂಟೆಯ ಅವಧಿಯಲ್ಲಿ ಭಾರೀ ಮಳೆಯೊಂದಿಗೆ ಮಿಂಚು, ಗುಡುಗು ಮತ್ತು ಆಲಿಕಲ್ಲು ಮಳೆಯೂ ಸಂಭವಿಸಿತು. ಜೊತೆಗೆ ಗಂಟೆಗೆ ಸುಮಾರು 75 ಕಿಲೋಮೀಟರ್ ವೇಗದ ಬಲವಾದ ಗಾಳಿಯೂ ಬೀಸಿದ ಪರಿಣಾಮ ನಗರದ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಮರಗಳು ಉರುಳುವುದು, ವಿದ್ಯುತ್ ವ್ಯತ್ಯಯ, ರಸ್ತೆಗಳಲ್ಲಿನ ನೀರಿನ ನಿಲುಗಡೆ ಸೇರಿದಂತೆ ಹಲವು ಅವಾಂತರ ಆಯ್ತು.

ಈ ಅಕಾಲಿಕ ಮಳೆಯ ಪರಿಣಾಮವಾಗಿ ನಗರದಲ್ಲಿ ತಾಪಮಾನ ತಕ್ಷಣವೇ ಕುಸಿತಗೊಂಡಿದ್ದು, ಸುಮಾರು 10 ಡಿಗ್ರಿ ಸೆಲ್ಸಿಯಸ್ ಮಟ್ಟಿಗೆ ಇಳಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿಲಿನ ತೀವ್ರತೆಯಿಂದ ಬಳಲುತ್ತಿದ್ದ ನಾಗರಿಕರಿಗೆ ತಾತ್ಕಾಲಿಕ ತಂಪಿನ ಅನುಭವ ನೀಡಿದರೂ, ಆಲಿಕಲ್ಲು ಮಳೆ ಮತ್ತು ಬಲವಾದ ಗಾಳಿಯಿಂದ ಉಂಟಾದ ಹಾನಿ ಮಾತ್ರ ಹೇಳ ತೀರದಾಗಿದೆ.

ಅತ್ಯಂತ ತೀವ್ರ ಆಲಿಕಲ್ಲು ಮಳೆ

ಐಎಂಡಿ ಬೆಂಗಳೂರು ನಿರ್ದೇಶಕ (ಕಾರ್ಯನಿರ್ವಹಣೆ) ಎನ್. ಪುವಿಯಾರಸನ್ ಅವರು ಈ ಕುರಿತು ಮಾತನಾಡಿ, ಇತ್ತೀಚಿನ ಅವಧಿಯಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವ ಮಳೆಯಲ್ಲಿದು ಮೂರನೇ ಹಾಗೂ ಅತ್ಯಂತ ತೀವ್ರ ಆಲಿಕಲ್ಲು ಮಳೆಯಾಗಿದೆ. ಮಾರ್ಚ್ ತಿಂಗಳ ಎರಡನೇ ವಾರ ಮತ್ತು ಏಪ್ರಿಲ್ ಮೊದಲ ವಾರದಲ್ಲಿಯೂ ನಗರದ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆಯ ಘಟನೆಗಳು ವರದಿಯಾಗಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.

ಮುಂದಿನ ದಿನಗಳ ಹವಾಮಾನ ಕುರಿತು ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ತುಮಕೂರು, ಹಾಸನ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆಗಳಲ್ಲಿ ಆಲಿಕಲ್ಲು ಮಳೆಯ ಸಾಧ್ಯತೆಯೂ ಇದೆ. ಇದೇ ವೇಳೆ ಗರಿಷ್ಠ ತಾಪಮಾನದಲ್ಲಿ 1 ರಿಂದ 2 ಡಿಗ್ರಿ ಸೆಲ್ಸಿಯಸ್ ಏರಿಕೆ ಕಂಡುಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಮೂರು ಜಿಲ್ಲೆಗಳಿಗೆ ಅಲರ್ಟ್

ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ಚಿತ್ರದುರ್ಗ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ಒಟ್ಟಾರೆ, ಏಪ್ರಿಲ್ ತಿಂಗಳಲ್ಲೇ ಇಷ್ಟು ತೀವ್ರ ಮಳೆಯಾಗಿರುವುದು ಹವಾಮಾನ ವೈಪರಿತ್ಯದ ಸೂಚನೆಯಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru Rains: ಚರ್ಚ್ ಸ್ಟ್ರೀಟ್‌ನ ಜನಪ್ರಿಯ 'ಬುಕ್ ವರ್ಮ್' ಪುಸ್ತಕ ಮಳಿಗೆಗೆ ನುಗ್ಗಿದ ಮಳೆ ನೀರು, ಮಾಲೀಕ ಕಣ್ಣೀರು
ಇಂದು ಸಚಿವ ಸಂಪುಟ ಸಭೆ: ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲಿಗೆ ಒಪ್ಪಿಗೆ?