
ಬೆಂಗಳೂರು/ಬಾಪಟ್ಲಾ (ಜು.25): ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಬಿಜೆಪಿ ಮುಖಂಡರಾದ ವೀರಸ್ವಾಮಿ ರೆಡ್ಡಿ ಹಾಗೂ ಅವರ ಮಗ ಪ್ರಶಾಂತ್ ರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಪೊಲೀಸರು ಜಂಟಿ ತನಿಖೆ ಮುಂದುವರೆಸಿದ್ದಾರೆ. ಬೆಂಗಳೂರು ಕಾಡುಗೋಡಿ ಪ್ರದೇಶದ ನಿವಾಸಿಗಳಾದ ವೀರಸ್ವಾಮಿ ಮತ್ತು ಪ್ರಶಾಂತ್ ರೆಡ್ಡಿ, ಕೆಲವು ದಿನಗಳ ಹಿಂದೆ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಗೆ ತೆರಳಿದ್ದ ನಂತರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಕುರಿತು ನರ್ಸಿಂಹಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ತನಿಖೆಯ ಪ್ರಗತಿ:
ಆಂಧ್ರಪ್ರದೇಶದ ಪೊಲೀಸರು ಮೃತರ ಮೊಬೈಲ್‌ಗಳನ್ನು ಪರಿಶೀಲಿಸಿ, ಮೃತರು ಬಾಪಟ್ಲಾ ಕಡೆಗೆ ಹೊರಡುವ ಮೊದಲು ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಈ ಪೈಕಿ ಪ್ರಮುಖವಾಗಿ ಮಾರ್ವೆಲ್ ರಿಯಲ್ ಎಸ್ಟೇಟ್ ಕಂಪನಿಯ ಮಾಲೀಕರಾದ ಮಾದವ್ ರೆಡ್ಡಿ ಹಾಗೂ ಅನಿಲ್ ರೆಡ್ಡಿ ಮೇಲೆ ಶಂಕೆ ವ್ಯಕ್ತವಾಗಿದೆ.
ವೀರಸ್ವಾಮಿ ಹಾಗೂ ಪ್ರಶಾಂತ್ ರೆಡ್ಡಿ ಅವರು ಮಾದವ್ ರೆಡ್ಡಿ ಜೊತೆಗೆ ಬೆಂಗಳೂರಿನ ಕಾಡುಗೋಡಿ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿದ್ದರು. ಕೆಲ ಸಮಯದೊಳಗೆ ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಗಂಭೀರ ಮನಸ್ತಾಪ ಉಂಟಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ. ವ್ಯವಹಾರಿಕ ವಿಚಾರಕ್ಕೆ ಸಂಬಂಧಿಸಿದಂತೆ, ಮೃತರ ತಂದೆ-ಮಗನ ವಿರುದ್ಧ ನರ್ಸಿಂಹಪುರಂ ಪೊಲೀಸ್ ಠಾಣೆಯಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಆಧಾರದ ಮೇಲೆ ವೀರಸ್ವಾಮಿ ಹಾಗೂ ಪ್ರಶಾಂತ್ ರೆಡ್ಡಿಯವರನ್ನು ಆಂಧ್ರ ಪ್ರದೇಶಕ್ಕೆ ಕರೆಸಿದ್ದು, ನಂತರ ಕಿಡ್ನಾಪ್ ಮಾಡಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆರೋಪಿಗಳ ಬಂಧನ:
ಸದ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಇಬ್ಬರನ್ನು ಆಂಧ್ರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಇಬ್ಬರು ಪ್ರಮುಖ ಆರೋಪಿಗಳಾದ ಮಾದವ್ ರೆಡ್ಡಿ ಹಾಗೂ ಅನಿಲ್ ರೆಡ್ಡಿ ಪರಾರಿಯಾಗಿದ್ದು, ಅವರನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆದಿದೆ. ಈ ಪ್ರಕರಣದ ಬೆಳವಣಿಗೆಯ ಬಗ್ಗೆ ಬೆಂಗಳೂರು ಕಾಡುಗೋಡಿ ಠಾಣೆ ಪೊಲೀಸರು ಕೂಡ ನಿಕಟ ಸಹಕಾರ ನೀಡುತ್ತಿದ್ದು, ಇಬ್ಬರು ರಾಜ್ಯಗಳ ಪೊಲೀಸರು ಜಂಟಿಯಾಗಿ ತನಿಖೆ ಮುಂದುವರೆಸಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ:
ಆಂಧ್ರ ಪ್ರದೇಶದಲ್ಲಿ ಕೊಲೆಯಾಗಿದ್ದ ಬಿಜೆಪಿ ಮುಖಂಡರಾದ ವೀರಸ್ವಾಮಿ ರೆಡ್ಡಿ ಹಾಗೂ ಅವರ ಮಗ ಪ್ರಶಾಂತ್ ರೆಡ್ಡಿ ಅವರ ಮೃತದೇಹಗಳನ್ನು ಅವರ ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ. ಇಂದು ಬೆಳಗ್ಗೆ ಇಬ್ಬರ ಮೃತದೇಹ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಕೂಡ ಅಂತಿಮ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಇನ್ನು ಕುಟುಂಬ ಸದಸ್ಯರು ಮನೆಗೆ ಆಸರೆಯಾಗಿದ್ದ ಇಬ್ಬರನ್ನೂ ದುಷ್ಕರ್ಮಿಗಳು ಕೊಲೆ ಮಾಡಿ ಬೀದಿ ಹೆಣ ಮಾಡಿದ್ದಾರೆ. ನಮ್ಮ ಕುಟುಂಬ ಅಕ್ಷರಶಃ ಆಸರೆಯನ್ನು ಕಳೆದುಕೊಂಡು ಕಂಗಾಲಾಗಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ