
ಬೆಂಗಳೂರು (ಜೂ.04): ಐಪಿಎಲ್ 2025ರ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭೀಕರ ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಭೀಕರ ದುರಂತದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಜಯಗಳಿಸಿದ ನಂತರ, ಇಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡದ ಸನ್ಮಾನ ಕಾರ್ಯಕ್ರಮವನ್ನು ಕ್ರಿಕೆಟ್ ಅಸೋಸಿಯೇಷನ್ ಹಾಗೂ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದವು. ಆದರೆ ನಿರೀಕ್ಷೆಗೂ ಮೀರಿ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣದ ಬಳಿ ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿ ಈ ಭೀಕರ ಘಟನೆ ಸಂಭವಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 'ಸಂಭ್ರಮಾಚರಣೆ ವೇಳೆ ಇಂತಹ ದುರಂತ ನಡೆಯಬಾರದಿತ್ತು. ಸರ್ಕಾರ ಇದಕ್ಕೊಸ್ಕರ ದು:ಖ ವ್ಯಕ್ತಪಡಿಸುತ್ತದೆ. ನಿರೀಕ್ಷೆ ಮೀರಿ ಜನ ಅಭಿಮಾನಿಗಳು ಸೇರಿದ್ದರು. ವಿಧಾನಸೌಧದ ಎದುರುಗಡೆ 1 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮ ವೇಳೆ ಯಾವುದೇ ದುರಂತ ನಡೆದಿಲ್ಲ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ದುರಂತ ಆಗಿದೆ. ಯಾರು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಜಿಲ್ಲಾಧಿಕಾರಿಯಿಂದ ಘಟನೆಯ ಬಗ್ಗೆ ವಿಚಾರಣೆ ಮಾಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಅಧಿಕೃತ ಮಾಹಿತಿ ಪ್ರಕಾರ:
ಸಿದ್ಧರಾಮಯ್ಯ ಅವರ ಟ್ವೀಟ್:
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಸಂತಾಪ ವ್ಯಕ್ತಪಡಿಸಿದ್ದಾರೆ. 'ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ನೂಕುನುಗ್ಗಲು ಉಂಟಾಗಿ ಹಲವರು ಪ್ರಾಣ ಕಳೆದುಕೊಂಡು, ಮತ್ತೆ ಕೆಲವರು ಗಂಭೀರ ಗಾಯಗೊಂಡ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಈ ದುರಂತದ ನೋವು ಗೆಲುವಿನ ಸಂಭ್ರಮವನ್ನೂ ಅಳಿಸಿಹಾಕಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ತಮ್ಮವರನ್ನು ಕಳೆದುಕೊಂಡ ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು.
ಇಂತಹದ್ದೊಂದು ನೂಕುನುಗ್ಗಲು ನಡೆದು ಜನಸಂದಣಿಯನ್ನು ನಿಯಂತ್ರಣ ಮಾಡಲಾಗದೆ ಅಹಿತಕರ ಘಟನೆ ನಡೆಯಬಹುದೆಂಬ ನಿರೀಕ್ಷೆಯಿಂದಲೇ ತಂಡದ ವಿಜಯಯಾತ್ರೆಗೆ ಅವಕಾಶ ನೀಡದೆ ಮುಂಜಾಗ್ರತೆ ವಹಿಸಲಾಗಿತ್ತು. ಹೀಗಿದ್ದರೂ ಕ್ರೀಡಾಂಗಣದ ಬಳಿ ಜನ ಕಿಕ್ಕಿರಿದು ಸಾಗರದಂತೆ ಸೇರಿದ್ದ ಕಾರಣ ನೂಕುನುಗ್ಗಲು ನಡೆದು ಕಾಲ್ತುಳಿತದಿಂದ ಈ ಅವಘಡ ಸಂಭವಿಸಿದೆ. ಪ್ರೀತಿ - ಅಭಿಮಾನ ಈ ಎಲ್ಲಕ್ಕಿಂತ ಜೀವ ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಂಡು, ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ' ಎಂದು ಟ್ವೀಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ