
ಬೆಂಗಳೂರು (ಜೂ.04): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025ರ ಟ್ರೋಫಿ ಗೆದ್ದ ವಿಜಯೋತ್ಸವ ಕಾರ್ಯಕ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಒಟ್ಟು 11 ಮಂದಿ ಜೀವ ಕಳೆದುಕೊಂಡಿದ್ದಾರೆ. ಆಸ್ಪತ್ರೆಗಳಿಂದ ಬಂದಿರುವ ನಿಖರ ಮಾಹಿತಿ ಪ್ರಕಾರ, ಮೃತರ ಹೆಸರುಗಳು, ವಯಸ್ಸು ಮತ್ತು ಚಿಕಿತ್ಸೆ ಪಡೆಯುತ್ತಿರುವವರ ವಿವರಗಳು ಇದೀಗ ಬಹಿರಂಗವಾಗಿವೆ.
ವೈದೇಹಿ ಆಸ್ಪತ್ರೆಯಲ್ಲಿ – 4 ಮೃತರು
ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದವರು – 1 ಸಾವು
ಬೌರಿಂಗ್ ಆಸ್ಪತ್ರೆಯಲ್ಲಿ– 6 ಮಂದಿ ಸಾವು
ಇನ್ನು ಬೌರಿಂಗ್ ಆಸ್ಪತ್ರೆಯಲ್ಲಿ ನಿಧಿ, ರಕ್ಷಿತಾ, ಹೀನಾ, ಶಾಮಿಲಿ ಹಾಗೂ ಅನುಜ್ ಇವರಿಗೆ ತೀವ್ರವಾದ ಗಾಯಗಳಿಂದ ಬಳಲುತ್ತಿದ್ದಾರೆ. ಇನ್ನು ಕೆಲವರ ಸ್ಥಿತಿ ಗಂಭೀರವಾಗಿದೆ.
ಸಾರಾಂಶ:
RCB ವಿಜಯೋತ್ಸವದ ಮಂಡ್ಯದ ಯುವಕ ಪೂರ್ಣಚಂದ್ರ ಸಾವು
ಐಪಿಎಲ್ 2025ರಲ್ಲಿ ಮೊದಲ ಬಾರಿಗೆ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸಂಭ್ರಮಾಚರಣೆ ದುಃಖದಲ್ಲಿ ಮುಗಿದಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಭೀಕರ ಕಾಲ್ತುಳಿತ ದುರಂತದಲ್ಲಿ ಹಲವರು ಗಾಯಗೊಂಡಿದ್ದು, ಕೆಲವು ಅಮಾಯಕರ ಜೀವ ಬಲಿಯಾಗಿವೆ. ಈ ನಡುವೆ ಮಂಡ್ಯ ಜಿಲ್ಲೆಯ ಯುವಕ ಪೂರ್ಣಚಂದ್ರ (25) ಸಾವಿಗೀಡಾಗಿದ್ದಾರೆ. ಮೃತ ಪೂರ್ಣಚಂದ್ರ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ರಾಯಸಮುದ್ರ ಗ್ರಾಮದವರು. ಸಿವಿಲ್ ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದ ಅವರು ಮೈಸೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಕ್ರಿಕೆಟ್ ಹಾಗೂ RCB ತಂಡದ ಅಭಿಮಾನಿಯಾಗಿದ್ದ ಪೂರ್ಣಚಂದ್ರ, ತಮ್ಮ ಸ್ನೇಹಿತರೊಂದಿಗೆ RCB ಸಂಭ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದರು. ಆದರೆ, ಈ ಉತ್ಸಾಹವೇ ಅವರಿಗಾಗಿ ಜೀವನದ ಕೊನೆಯ ಕ್ಷಣವಾಯಿತು. ಕ್ರೀಡಾಂಗಣದ ಬಳಿ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಸಂಭವಿಸಿದ್ದು, ಅಲ್ಲಿ ಪೂರ್ಣಚಂದ್ರ ಸಾವಿಗೀಡಾದ ಸುದ್ದಿ ಜಿಲ್ಲೆಯಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ.
RCB ಸಂಭ್ರಮ, ಸರ್ಕಾರದ ನಿರ್ಲಕ್ಷ್ಯ:
ಆರ್‌ಸಿಬಿ ತಂಡದ ಸನ್ಮಾನಕ್ಕಾಗಿ ನಡೆಯುತ್ತಿದ್ದ ಈ ಕಾರ್ಯಕ್ರಮಕ್ಕೆ ಯಾವುದೇ ಪೂರ್ವ ತಯಾರಿ ಇಲ್ಲದೆ, ಸಾರ್ವಜನಿಕ ನಿರ್ವಹಣೆಯಲ್ಲಿ ಸರಿಯಾದ ಕ್ರಮವಿಲ್ಲದ ಕಾರಣ ಈ ದುರಂತ ಸಂಭವಿಸಿದೆ ಎಂದು ಆರೋಪ ಕೇಳಿಬಂದಿದೆ. ನೂರಾರು ಅಭಿಮಾನಿಗಳು ಕೆಲವೇ ಗೇಟ್‌ಗಳಿಂದ ಒಳಗೆ ಹೋಗಬೇಕಾದ ದಕ್ಷತೆ ಕೊರತೆಯಿಂದ ನೂಕುನುಗ್ಗಲು ಉಂಟಾಗಿ, ಅನೇಕರು ಕಾಲ್ತುಳಿತದ ಬಲಿಯಾಗಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆಯಲ್ಲಿ ವೈದೇಹಿ ಆಸ್ಪತ್ರೆಗೆ 16 ಜನರನ್ನು ಕರೆತರಲಾಗಿದೆ. ಇದರಲ್ಲಿ 4 ಜನರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಅಂದರೆ, ಅತಿಹೆಚ್ಚು ಜನರು ಒಂದೇ ಕಡೆ ಸೇರಿ ಕಾಲ್ತುಳಿತ ಆದಾಗ ಉಸಿರಾಡಲು ಸಾಧ್ಯವಾಗದೇ ಸಾವಿಗೀಡಾಗಿದ್ದಾರೆ ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿದೆ. ಉಳಿದಂತೆ 10 ಜನರು ಚಿಕಿತ್ಸೆ ಪಡೆಯುತ್ತಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳದಿಂತೆ ಒಬ್ಬರು ಸಣ್ಣಪುಟ್ಟ ಗಾಯಗೊಂಡಿದ್ದು, ಚಿಕಿತ್ಸೆ ನೀಡಿ ಕಳುಹಿಸಲಾಗಿದೆ ಎಂದು ವೈದೇಹಿ ಆಸ್ಪತ್ರೆ ವೈದ್ಯೆ ಡಾ.ಹುಮೆರಾ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ