
ಬೆಂಗಳೂರು (ಮೇ 21): ನಗರದ ಹೊರವಲಯ ಆನೇಕಲ್ ತಾಲ್ಲೂಕಿನ ಹಳೆ ಚಂದಾಪುರದ ರೈಲ್ವೆ ಬ್ರಿಡ್ಜ್ ಬಳಿ ಅನುಮಾನಾಸ್ಪದ ಸೂಟ್‌ಕೇಸ್‌ವೊಂದರಲ್ಲಿ ಸುಮಾರು 10 ವರ್ಷದ ಅಪರಿಚಿತ ಬಾಲಕಿಯ ಶವ ಪತ್ತೆಯಾಗಿದೆ.
ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದ ಹೊಸೂರು ಮುಖ್ಯರಸ್ತೆಗೆ ಈ ಸೇತುವೆ ಹೊಂದಿಕೊಂಡಿದ್ದು, ಜನರು ಸಂಚರಿಸುವ ಪ್ರದೇಶವಾಗಿದೆ. ಸ್ಥಳೀಯ ನಿವಾಸಿಗಳು ಶಂಕಿತ ಸೂಟ್‌ಕೇಸ್ ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೂರ್ಯನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸೂಟ್‌ಕೇಸ್ ತೆರೆದು ನೋಡಿದಾಗ ಬಾಲಕಿ ಶವ ಪತ್ತೆಯಾಗಿದೆ. ಇನ್ನು ಪೊಲೀಸರು ಹಾಗೂ ಸಾರ್ವಜನಿಕರು ಚಲಿಸುವ ರೈಲಿನಿಂದ ಈ ಸೂಟ್‌ಕೇಸ್ ಎಸೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಬಾಲಕಿ ಪ್ರಾಣ ಬಿಟ್ಟ ಬಳಿಕ ಶವವನ್ನು ಇಲ್ಲಿ ತಂದು ಎಸೆದಿರಬಹುದು ಎಂದು ಶಂಕಿಸಲಾಗಿದೆ.
ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲು ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆಯ ಪೊಲೀಸರ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಪೊಲೀಸರು ಪರಿಶೀಲನೆ ಮಾಡಿದ ಬಳಿಕ ಸೂಟ್‌ಕೇಸ್ ಹಾಗೂ ಶವದ ಮೇಲಿನ ಸಮಗ್ರ ಪರಿಶೀಲನೆ ಕೈಗೆತ್ತಿಕೊಳ್ಳಲಾಗುವುದು. ಈ ಘಟನೆ ಆನೇಕಲ್ ಭಾಗದಲ್ಲಿ ಆತಂಕದ ವಾತಾವರಣವನ್ನು ಉಂಟುಮಾಡಿದ್ದು, ಸಾರ್ವಜನಿಕರು ಇಲ್ಲಿ ಆತಂಕದಿಂದಲೇ ಸಂಚರಿಸುವಂತಾಗಿದೆ. ಜೊತೆಗೆ, ಸೂಟ್‌ಕೇಸ್‌ನಲ್ಲಿ ಶವವಾಗಿ ಸಿಕ್ಕಿರುವ ಬಾಲಕಿ ಯಾರು? ಇಲ್ಲಿಗೆ ಹೇಗೆ ಈ ಸ್ಥಿತಿಗೆ ಬಂತು? ಯಾರು ಇದನ್ನು ನಡೆಸಿದ್ದಾರೆ? ಎಂಬ ಪ್ರಶ್ನೆಗಳು ಉಂಟಾಗಿವೆ.
ಪ್ರಸ್ತುತ ಬಾಲಕಿಯ ವಯಸ್ಸು ಹಾಗೂ ಉಡುಪುಗಳ ವಿವರಣೆ ಆಧಾರಿಸಿ ಗುರುತುಪತ್ತೆ ಕಾರ್ಯ ಆರಂಭವಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಕರ್ನಾಟಕ, ತಮಿಳುನಾಡು ಗಡಿಯಲ್ಲಿನ ರೈಲ್ವೆ ಹಳಿಯ ಬಳಿಯಲ್ಲಿ ಕಳೆದ ವರ್ಷವೂ ಇದೇ ರೀತಿಯಾಗಿ ಒಂದು ಶವ ಪತ್ತೆಯಾಗಿತ್ತು. ಇದನ್ನು ತಮಿಳುನಾಡಿನಲ್ಲಿ ಕೊಲೆ ಮಾಡಿ ಕರ್ನಾಟಕದ ಬಾರ್ಡರ್‌ನಲ್ಲಿ ಎಸೆದು ಹೋಗಿರಬಹುದು ಎಂದೂ ಊಹಿಸಲಾಗುತ್ತಿದೆ. ಜೊತೆಗೆ, ಸ್ಥಳೀಯವಾಗಿ ಯಾರಾದರೂ ತಮ್ಮ ಕುಟುಂಬದ ಸದಸ್ಯರು ನಾಪತ್ತೆಯಾಗಿದ್ದರೆ, ಪೊಲೀಸರು ನೀಡಿರುವ ಸಂಪರ್ಕ ಸಂಖ್ಯೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ. ಬಾಬಾ ಮಾತನಾಡಿ, 'ಸೂಟ್‌ಕೇಸ್ ಅನ್ನು ಚಲಿಸುತ್ತಿದ್ದ ರೈಲಿನಿಂದ ಎಸೆದಂತೆ ಕಾಣುತ್ತಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳು ರೈಲ್ವೆ ಪೊಲೀಸರ ವ್ಯಾಪ್ತಿಗೆ ಬರುತ್ತವೆ. ಆದರೆ ಇದು ನಮ್ಮ ವ್ಯಾಪ್ತಿಯಲ್ಲೂ ಬರುವುದರಿಂದ ನಾವು ಕೂಡ ತನಿಖೆ ನಡೆಸುತ್ತಿದ್ದೇವೆ. ಯಾವುದೇ ಗುರುತಿನ ಚೀಟಿ ಇಲ್ಲದ ಕಾರಣ ಮೃತಳ ಗುರುತು ಇನ್ನೂ ಪತ್ತೆಯಾಗಿಲ್ಲ' ಎಂದು ತಿಳಿಸಿದ್ದಾರೆ.
ರಾಮನಗರದಲ್ಲಿ 14 ವರ್ಷದ ಬಾಲಕಿ ಶವ ಪತ್ತೆ:
ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಕ್ಷೇತ್ರ ರಾಮನಗರ ಜಿಲ್ಲೆಯಲ್ಲಿ ರೈಲ್ವೆ ಹಳಿಯ ಬಳಿ ಮಾತನಾಡಲು ಮತ್ತು ಕಿವಿ ಕೇಳಿಸದ 14 ವರ್ಷದ ಬಾಲಕಿಯ ಶವವೂ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ಈ ಶವ ಪರಿಶೀಲನೆ ಮಾಡಿದ ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಇದು ರೈಲು ಗುದ್ದಿದ ಅಪಘಾತದಿಂದ ಸಂಭವಿಸಿದ ಅಪಘಾತವೆಂದು ಹೇಳಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ 14 ವರ್ಷದ ಬಾಲಕಿಯ ಮೇಲೆ ರೇಪ್ ಅಂಡ್ ಮರ್ಡರ್ ಆಗಿದೆ ಎಂದು ವಿಡಿಯೋಗಳು ಭಾರೀ ವೈರಲ್ ಆಗಿದ್ದವು. ಇದೀಗ ಪೊಲೀಸರು ಎಲ್ಲ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಇದೀಗ ಸ್ಥಳೀಯ ಜನರು ಬಾಲಕಿಯ ಶವ ಪತ್ತೆಯ ಬಗ್ಗೆ ಮರು ತನಿಖೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ಈ ಕುರಿತು ಪ್ರತಿಭಟನೆಗಳು ಕೂಡ ನಡೆಯುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ