
ಬೆಂಗಳೂರು (ಫೆ.13): ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಮತ್ತು ಮಾಲಿನ್ಯಮುಕ್ತ ಸಂಚಾರನಾಡಿ ಆಗಿರುವ ಬಿಎಂಆರ್‌ಸಿಎಲ್‌ನ ನಮ್ಮ ಮೆಟ್ರೋ ದರವನ್ನು ಬೇಕಾಬಿಟ್ಟಿಯಾಗಿ ಹೆಚ್ಚಳ ಮಾಡಿದ ಬೆನ್ನಲ್ಲಿಯೇ ಜನರು ಆಕ್ರೋಶ ವ್ಯಕ್ತಪಡಿಸಿ ಬೆಲೆ ತಗ್ಗಿಸುವಂತೆ ಆಗ್ರಹಿಸಿದ್ದರು. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಬೆಲೆ ತಗ್ಗಿಸಲು ಮುಂದಾಗಿರುವ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಸುದ್ದಿಗೋಷ್ಠಿ ಮೂಲಕ ಬೆಲೆ ತಗ್ಗಿಸುವ ಬಗ್ಗೆ ಮಾಹಿತಿ ನೀಡಿದ್ದು, ಶೀಘ್ರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಅವರು, 2010ರಿಂದ ನಮ್ಮ ಮೆಟ್ರೋ ಶುರುವಾಗಿದೆ. ಕಳೆದ 15 ವರ್ಷದಿಂದ ನಡೆಸುತ್ತಿದ್ದೇವೆ. ಕಳೆದ ನಾಲ್ಕೈದು ವರ್ಷದಿಂದ ದರ ನಿಗದಿ ಮಾಡಲು ಕೇಳಿದ್ದೆವು. ಸದ್ಯ ಟಿಕೆಟ್ ದರ ನಿಗದಿ ವರದಿಯನ್ವಯ ಟಿಕೆಟ್ ದರ ಏರಿಕೆ ಮಾಡಿದ್ದೇವೆ. ಅಸಹಜವಾಗಿ ಟಿಕೆಟ್ ದರ ಏರಿಕೆ ಮಾಡಿದ್ದಾರೆ ಅಂತ ದೂರುಗಳು ಬಂದಿವೆ. ಇದರನ್ವಯ ನಾವು ಸಾಕಷ್ಟು ಚರ್ಚೆ ಮಾಡಿದ್ದೇವೆ. ಬೋರ್ಡ್ ಮೆಂಬರ್ ಗಳ ಜೊತೆ ಕೂಡ ಇದರ ಬಗ್ಗೆ ಚರ್ಚೆ ಮಾಡಿದ್ದೇವೆ. ಜೊತೆಗೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೂ ಟಿಕೆಟ್ ದರದ ಬಗ್ಗೆ ಪರಿಶೀಲಿಸಲು ತಿಳಿಸಿದ್ದಾರೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ಬಿಎಂಆರ್‌ಸಿಎಲ್ ಬೋರ್ಡ್ ಮೀಟಿಂಗ್ ಹಾಗೂ ಸೆಕ್ರೆಟರಿ ಜೊತೆ ನಾವು ಚರ್ಚೆ ಮಾಡಿದ್ದೇವೆ. ಕೆಲವು ಕಡೆ ಶೇ.100ರಷ್ಟು ಹಾಗೂ ಶೇ90ರಷ್ಟು ಹೆಚ್ಚಳವಾಗಿದೆ. ಎಲ್ಲೆಲ್ಲಿ ಅತಿಹೆಚ್ಚು ಬೆಲೆ ಹೆಚ್ಚಾಗಿದೆಯೋ ಅಲ್ಲಿ ಬದಲಾವಣೆ ಮಾಡುತ್ತೇವೆ. ಟಿಕೆಟ್ ದರ ಏರಿಕೆ ಮಾಡಿರೋದನ್ನ ಬದಲಾವಣೆ ಮಾಡಿದ್ರೆ ಶೇ.45 ರಷ್ಟು ಮಾತ್ರ ಹೆಚ್ಚಳಕ್ಕೆ ತರುತ್ತೇವೆ. ಇದರಿಂದ ಜನರಿಗೆ ರಿಲೀಫ್ ಸಿಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ನಮ್ಮ ಮೆಟ್ರೋ ದರ ಏರಿಕೆ ಬಳಿಕ ನಾಲ್ಕೇ ದಿನದಲ್ಲಿ 80 ಸಾವಿರ ಪ್ರಯಾಣಿಕರು ಕಡಿಮೆ!
ಮೆಟ್ರೋ ದರ ಏರಿಕೆ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲಿ ಸಾಕಷ್ಟು ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವೆಲ್ಲವನ್ನು ಪರಿಗಣಿಸಿ ದರ ನಿಗದಿ ಬದಲಾವಣೆ ಮಾಡುತ್ತೇನೆ. ನಾವು ಪ್ಲಾಟ್ ಫಾರ್ಮ್ ಡೋರ್‌ಗಳನ್ನ ಹಾಕಬೇಕು. ಆದ್ದರಿಂದ ನಮಗೆ ಒಂದಷ್ಟು ಇನ್ ಕಮ್ ಬೇಕಾಗುತ್ತದೆ. ಹೀಗಾಗಿ, ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯವಾಗಿತ್ತು. ಮೆಟ್ರೋ ದರ ಏರಿಕೆ ಮಾಡಿದ್ದ ತಕ್ಷಣ ನಮ್ಗೆ ತುಂಬಾ ಆದಾಯ ಬರಲ್ಲ. ಲೋನ್ ಪೇಮೆಂಟ್ ಬಾಕಿ ಇದೆ. ನಮ್ಮ ನಿರ್ವಹಣಾ ವೆಚ್ಚವೂ ಇದೆ ಎಂದರು.
ಬೆಂಗಳೂರಿನ ನಮ್ಮ ಮೆಟ್ರೋ ಹಲವು ವರ್ಷಗಳಿಂದ ನಷ್ಟದಲ್ಲಿಯೇ ನಡೆಯುತ್ತಿದೆ. ಆದರೂ, ದರ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾಗ ಹಿನ್ಎಲೆಯಲ್ಲು ಶಿಘ್ರದಲ್ಲಿಯೇ ಮೆಟ್ರೋ ಪರಿಷ್ಕರಣೆ ದರ ಪಟ್ಟಿ ಬಿಡುಗಡೆ ಮಾಡುತ್ತೇವೆ. ಎಲ್ಲ ಸ್ಟೇಜ್‌ಗಳಲ್ಲೂ ನಾವು ಇಷ್ಟೇ ಅಂತ ಏರಿಕೆ ಮಾಡಿಲ್ಲ. 29 ರೂಪಾಯಿ ಇರೋದು 60 ರೂಪಾಯಿಗೆ ಜಂಪ್ ಆಗಿದ್ದರೆ ಅದನ್ನು 50 ರೂಪಾಯಿ ಮಾಡುವ ಸಾಧ್ಯತೆಯಿದೆ. ನಾವು ಮ್ಯಾಟ್ರಿಕ್ಸ್ ಆಧಾರದ ಮೇಲೆ ಬಿಎಂಆರ್‌ಸಿಎಲ್ ದರ ನಿಗದಿ ಮಾಡುತ್ತೇವೆ. ಕೆಲವು ಕೇಸ್‌ಗಳಲ್ಲಿ ಶೇಕಡಾವಾರು 30, 40, 50, 70 ರೀತಿಯಲ್ಲಿ ಟಿಕೆಟ್ ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮೆಟ್ರೋ ಟಿಕೆಟ್ ಏರಿಕೆ ನಿರ್ಧಾರ ಕೇಂದ್ರದ್ದು: ಸಿಎಂ | ದರ ಪರಿಷ್ಕರಣೆಗೆ ಪತ್ರ ಬರೆದಿದ್ದೆ ರಾಜ್ಯ ಸರ್ಕಾರ: ತೇಜಸ್ವಿ ಸೂರ್ಯ!
ಇಲ್ಲಿ ಮುಖ್ಯವಾಗಿ ಮಿನಿಮಮ್ ದರ 10 ರೂಪಾಯಿ ಇದೆ. ಮ್ಯಾಕ್ಸಿಮಮ್ ದರ 90 ರೂಪಾಯಿ ಇದೆ. ಮುಂದೆಯೂ ಇದು ಬದಲಾವಣೆ ಆಗಲ್ಲ. ಈಗ ನಿಗದಿಯಾಗಿರುವ ಮಿನಿಮಮ್ ದರ ಮತ್ತು ಮ್ಯಾಕ್ಸಿಮಮ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಉಳಿದಂತೆ ಸ್ಟೇಜ್ ಲೆಕ್ಕದಲ್ಲಿ ದರ ಪರಿಷ್ಕರಣೆ ಮಾಡಲು ಮುಂದಾಗುತ್ತೇವೆ. ನಾಳೆಯಿಂದ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ