
ಬೆಂಗಳೂರು (ಮೇ 28): ನಗರದಲ್ಲಿ ಇತ್ತೀಚೆಗೆ ನಡೆದ ಮೂರು ಪ್ರಮುಖ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಕಳ್ಳತನ, ಬೈಕ್ ಕಳ್ಳತನ ಹಾಗೂ ಸಂಚು ರೂಪಿಸಿ ದೀರ್ಘಕಾಲದಿಂದ ಕಳ್ಳತನದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟಾರೆ ₹18 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ಮತ್ತು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿರುವ ಬಾಬಾಜಾನ್ ಎಂಬಾತನು ಮೂವರು ಹೆಂಡತಿಯರ ಜೊತೆ 9 ಮಕ್ಕಳ ಪೋಷಣೆಗೆ ಹಣ ಬೇಕೆಂಬ ಕಾರಣದಿಂದ ಅಪ್ರಾಪ್ತ ಮಗನೊಂದಿಗೆ ಸೇರಿ ಕಳ್ಳತನ ಮಾಡುತ್ತಿದ್ದ.
ಬೆಟ್ಟದಾಸನಪುರದಲ್ಲಿನ ಮನೆಯೊಂದರಲ್ಲಿ ಬೀಗ ಮುರಿದು 49 ಗ್ರಾಂ ಚಿನ್ನ, 700 ಗ್ರಾಂ ಬೆಳ್ಳಿ, ₹2,000 ನಗದು ಕಳವು ಮಾಡಿದ್ದಾನೆ. ಇದೀಗ ಆರೋಪಿ ಕಳ್ಳ ಹಾಗೂ ಆತನ ಅಪ್ರಾಪ್ತ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಈವರೆಗೆ ನಗರದಲ್ಲಿ ಒಟ್ಟು 9 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿವರ ಬೆಳಕಿಗೆ ಬಂದಿದೆ. ಪೊಲೀಸರು ಬಂಧಿತ ಆರೋಪಿಯಿಂದ ₹16.50 ಲಕ್ಷ ಮೌಲ್ಯದ 188 ಗ್ರಾಂ ಚಿನ್ನಾಭರಣ, 550 ಗ್ರಾಂ ಬೆಳ್ಳಿ ವಸ್ತುಗಳು ಮತ್ತು ₹1,500 ನಗದು ವಶಪಡಿಸಿಕೊಂಡಿದ್ದಾರೆ.
ಏಡ್ಸ್ ಮುರುಘನ್'ನ ಸಹಚರರ ಬಂಧನ:
ಮತ್ತೊಂದು ಪ್ರಕರಣದಲ್ಲಿ ಎಚ್.ಎ.ಎಲ್ ಠಾಣೆ ಪೊಲೀಸರು ಕುಖ್ಯಾತ ಮನೆಗಳ್ಳ ಏಡ್ಸ್ ಮುರುಗನ್‌ನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.– ದಿನಕರನ್ ಮತ್ತು ರಘುರಾಮ್, ತಮಿಳುನಾಡು ಮೂಲದ ಈ ಇಬ್ಬರು ಕುಖ್ಯಾತ ಮನೆಕಳ್ಳ 'ಏಡ್ಸ್ ಮುರುಘನ್'ನ ಸಹಚರರಾಗಿದ್ದು, ಬೆಂಗಳೂರಿಗೆ ಕಳ್ಳತನಕ್ಕೆ ಬಂದಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಬಂಧನ ಮಾಡಲಾಗಿದೆ. ಇವರು ತಮಿಳುನಾಡಿನ ತಿರುವಾಯಿರುರ್‌ನಿಂದ ಬೆಂಗಳೂರಿಗೆ ಬಸ್‌ನಲ್ಲಿ ಬಂದು, ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ, ರಾತ್ರಿ ವೇಳೆ ಕಾರಿನ ಜಾಕ್ ರಾಡ್ ಬಳಸಿ ಕಿಟಕಿಗಳನ್ನು ಮುರಿದು ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ 600 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶೋಕಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಚಾಕು' ಇಮ್ತಿಯಾಜ್ ವಶಕ್ಕೆ:
ಬೇಗೂರು ಠಾಣೆ ಪೊಲೀಸರು ಬಂಧಿಸಿರುವ ಇಮ್ತಿಯಾಜ್ ಅಲಿಯಾಸ್ 'ಚಾಕು' ಇದಕ್ಕೂ ಮೊದಲು ಹಲವು ಬಾರಿ ಜೈಲಿನಲ್ಲಿ ಕಾಲ ಕಳೆದ ದಾಖಲೆ ಹೊಂದಿದ ವ್ಯಕ್ತಿಯಾಗಿದ್ದಾನೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಮರುಕಳ್ಳತನ ಪ್ರಾರಂಭಿಸಿದ ಈತ, ಮೂರು ಬೈಕ್‌ಗಳು ಮತ್ತು 54 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿದ್ದನು. ಪೊಲೀಸರು ಈತನಿಂದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇನ್ನು ಹಲವು ಪ್ರಕರಣಗಳಲ್ಲಿ ತನಿಖೆ ಮುಂದುವರಿದಿದೆ.
ಪೊಲೀಸ್ ಇಲಾಖೆ ಎಚ್ಚರಿಕೆ:
ನagarದಲ್ಲಿ ಈ ತರಹದ ಕಳ್ಳತನಗಳು ಹೆಚ್ಚುತ್ತಿರುವ ಹಿನ್ನೆಲೆ, ಸಾರ್ವಜನಿಕರು ತಮ್ಮ ಮನೆಗಳಿಗೆ ಸುರಕ್ಷತೆ ಕ್ರಮಗಳನ್ನು ಬಲಪಡಿಸಲು, ವಿಶೇಷವಾಗಿ ಪ್ರಯಾಣದ ವೇಳೆ ಬೀಗ ಹಾಕಿದ ಮನೆಗಳನ್ನು ಪಕ್ಕಾ ಲಾಕ್ ಮಾಡಬೇಕು ಎಂದು ಪೋಲಿಸರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ