
ಬೆಂಗಳೂರು (ಮೇ.28): ಕರಾವಳಿಯಲ್ಲಿ ಒಂದು ವಾರ, ದಕ್ಷಿಣ ಒಳನಾಡಿನಲ್ಲಿ ಮೂರು ದಿನ ಹಾಗೂ ಉತ್ತರ ಒಳನಾಡಿನಲ್ಲಿ ಎರಡು ದಿನ ಹೆಚ್ಚಿನ ಪ್ರಮಾಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಮೇ 28ರಂದು ರೆಡ್ ಅಲರ್ಟ್, ಮೇ 29 ರಿಂದ ಮೇ 31ರ ವರೆಗೆ ಆರೆಂಜ್ ಅಲರ್ಟ್, ಜೂ.1 ಮತ್ತು 2ರಂದು ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಿಗೆ ಮೇ 31ರ ವರೆಗೆ ಆರೆಂಜ್ ಅಲರ್ಟ್, ನಂತರದ ಮೂರು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉಳಿದಂತೆ ದಕ್ಷಿಣ ಒಳನಾಡಿನ ದಾವಣಗೆರೆ ಮತ್ತು ಮೈಸೂರು ಜಿಲ್ಲೆಗಳಿಗೆ ಮೇ 31ರ ವರೆಗೆ ಯೆಲ್ಲೋ ಅಲರ್ಟ್, ಚಾಮರಾಜನಗರಕ್ಕೆ ಮೇ 30 ಮತ್ತು 31ಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಬೀದರ್ ಜಿಲ್ಲೆಗಳಿಗೆ ಮುಂದಿನ 24 ಗಂಟೆಗೆ ಆರೆಂಜ್ ಅಲರ್ಟ್, ಬಾಗಲಕೋಟೆ, ರಾಯಚೂರು, ವಿಜಯಪುರಕ್ಕೆ ಮೇ 28ರಂದು ಯೆಲ್ಲೋ ಅಲರ್ಟ್, ಯಾದಗಿರಿ ಮುಂದಿನ ಮೂರು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮೇ 29ರಂದು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿ ಪ್ರಕಾರ ದಕ್ಷಿಣ ಕನ್ನಡದ ಮುಲ್ಕಿಯಲ್ಲಿ ಅತಿ ಹೆಚ್ಚು 19 ಸೆಂ.ಮೀ. ಮಳೆಯಾಗಿದೆ. ಮಾಣಿ 18, ಉಪ್ಪಿನಂಗಡಿ, ಪಣಂಬೂರು ತಲಾ 17, ಅಫ್ಜಲ್‌ಪುರ 16, ಕಾರ್ಕಳ 15, ಕೋಟ, ಪುತ್ತೂರಿನಲ್ಲಿ ತಲಾ 13, ಮಂಗಳೂರು ಹಾಗೂ ಬೆಳ್ತಂಗಡಿಯಲ್ಲಿ ತಲಾ 12, ಮಂಗಳೂರು, ಭಾಗಮಂಡಲ, ಆಗುಂಬೆಯಲ್ಲಿ ತಲಾ 11, ನಾಪೋಕ್ಲು 10, ಸೋಮವಾರಪೇಟೆ, ಪೊನ್ನಂಪೇಟೆ, ಉಡುಪಿಯಲ್ಲಿ ತಲಾ 9, ಕಳಸ, ಶಹಪೂರ, ಸಿದ್ದಾಪುರ, ಗಾಣಗಾಪುರ, ಧರ್ಮಸ್ಥಳದಲ್ಲಿ ತಲಾ 8 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಎರಡೇ ದಿನಕ್ಕೆ ರಾಜ್ಯಕ್ಕೆ ವ್ಯಾಪಿಸಿದ ಮುಂಗಾರು: ರಾಜ್ಯಕ್ಕೆ ಮೇ 24ರಂದು ಮುಂಗಾರು ಪ್ರವೇಶಿಸಿತ್ತು. ಮೇ 26ಕ್ಕೆ ರಾಜ್ಯದ ಬೀದರ್ ಜಿಲ್ಲೆ ಹೊರತುಪಡಿಸಿ ಇಡೀ ಕರ್ನಾಟಕವನ್ನು ಮಳೆ ವ್ಯಾಪಿಸಿದೆ. ಇತಿಹಾಸದಲ್ಲಿ ಇದೇ ಮೊದಲೇ ಬಾರಿಗೆ ಇಷ್ಟೊಂದು ವೇಗವಾಗಿ ಮುಂಗಾರು ರಾಜ್ಯವನ್ನು ಆವರಿಸಿದೆ. ಸಾಮಾನ್ಯವಾಗಿ ಜೂ.10ರ ವೇಳೆಗೆ ಇಡೀ ರಾಜ್ಯ ವ್ಯಾಪಿಸುತ್ತಿತ್ತು. ಇದೀಗ ಸುಮಾರು 15 ದಿನ ಮೊದಲೇ ಮುಂಗಾರು ವ್ಯಾಪಿಸಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ