ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ವಾರ್ಷಿಕವಾಗಿ 100 ದಶ ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರತಿಪಾದಿಸಿದ್ದಾರೆ.
ಬೆಂಗಳೂರು (ಜು.11): ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ವಾರ್ಷಿಕವಾಗಿ 100 ದಶ ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರತಿಪಾದಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಐದು ಸಾವಿರ ಎಕರೆ ಭೂಮಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಸುತ್ತಮುತ್ತ ಹಲವು ಸ್ಥಳಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಉನ್ನತ ಮಟ್ಟದ ಸಮಿತಿಯು ಅಂತಿಮ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಬೆಂಗಳೂರು ದೇಶದ ತಂತ್ರಜ್ಞಾನ ಮತ್ತು ನವೋದ್ಯಮಗಳ ರಾಜಧಾನಿಯೂ ಆಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೆಹಲಿ ಮತ್ತು ಮುಂಬೈ ನಂತರ ಅತಿದಟ್ಟಣೆಯಿಂದ ಕೂಡಿರುವ ಮೂರನೇ ವಿಮಾನ ನಿಲ್ದಾಣವಾಗಿದೆ. ಸದ್ಯಕ್ಕೆ ಇಲ್ಲಿ ವರ್ಷಕ್ಕೆ 52 ಮಿಲಿಯನ್ ಪ್ರಯಾಣಿಕರ ಮತ್ತು 0.71 ಮಿಲಿಯನ್ ಟನ್ ಸರಕು ಸಾಗಣೆ ನಿರ್ವಹಣೆಯಾಗುತ್ತಿದೆ. ಇವುಗಳನ್ನು ಕ್ರಮವಾಗಿ 110 ಮಿಲಿಯನ್ ಮತ್ತು 1.10 ಮಿಲಿಯನ್ ಟನ್ ತನಕ ವಿಸ್ತರಿಸಬಹುದಾಗಿದ್ದು, 2035ರ ವೇಳೆಗೆ ಇದು ಗರಿಷ್ಠ ಮಟ್ಟ ತಲುಪಲಿದೆ. ಆದರೆ ಈಗ ಎರಡು ರನ್-ವೇ ಇದ್ದು, ಇದರಲ್ಲಿ ವಿಸ್ತರಣೆ ಸಾಧ್ಯವಿಲ್ಲದಂತಾಗಿದೆ ಎಂದು ವಿವರಿಸಿದರು.
ನೂತನ ವಿಮಾನ ನಿಲ್ದಾಣ ನಿರ್ಮಿಸಬೇಕಾದರೆ ಸುತ್ತಮುತ್ತ ಎಲ್ಲಿಯೂ ಬೆಟ್ಟಗುಡ್ಡ, ನದಿ, ಸಮುದ್ರಗಳಿರಬಾರದು. ಜತೆಗೆ ಗುಣಮಟ್ಟದ ರಾಜ್ಯ, ರಾಷ್ಟ್ರ ಹೆದ್ದಾರಿ, ರೈಲು ಮತ್ತು ಮೆಟ್ರೋ ಸಂಪರ್ಕ ಇರಬೇಕು. ಈ ಹಿನ್ನೆಲೆಯಲ್ಲಿ ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ, ದೊಡ್ಡಬಳ್ಳಾಪುರ, ಡಾಬಸಪೇಟೆ, ತುಮಕೂರು ಮುಂತಾದ ಸ್ಥಳಗಳಲ್ಲಿ ನಿರ್ಮಿಸುವ ಬಗ್ಗೆ ಸರ್ಕಾರ ಆಲೋಚನೆ ಮಾಡಿದೆ. ಆದರೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಕೆಂಪೇಗೌಡ ವಿಮಾನ ನಿಲ್ದಾಣದ 150 ಕಿ.ಮೀ. ಸುತ್ತಳತೆಯಲ್ಲಿ 2033ರವರೆಗೆ ಹೊಸ ವಿಮಾನ ನಿಲ್ದಾಣ ಸ್ಥಾಪಿಸಬಾರದು ಎನ್ನುವ ಷರತ್ತು ಇದೆ.
ಇದೊಂದೆ ವಿಷಯಕ್ಕೆ ರಶ್ಮಿಕಾ ಮಂದಣ್ಣ ನಾಚುವುದಂತೆ..: ಆದರೂ ಇದು ನಿಮಗಾಗಿ ಎಂದಿದ್ಯಾಕೆ ನ್ಯಾಷನಲ್ ಕ್ರಶ್!
ಸರ್ಕಾರ ಈಗಿನಿಂದಲೇ ಕೆಲಸ ಮಾಡಿದರೆ ಆ ವೇಳೆಗೆ ನೂತನ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಲು ಸಹಕಾರಿಯಾಗಲಿದೆ ಎಂದರು. ಇದೇ ವೇಳೆ ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗಾಗಿ ಕೇಂದ್ರದ ನೆರವು ಕೋರುವ ಬಗ್ಗೆ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಲಾಗಿದೆ. ಸದ್ಯದಲ್ಲೇ ಖುದ್ದು ಭೇಟಿ ನೀಡಿ ಪ್ರಸ್ತಾವನೆ ಸಲ್ಲಿಸಲಾಗುವುದು. ಅವರಿಗೂ ರಾಜ್ಯಕ್ಕೆ ಸೆಮಿಕಂಡಕ್ಟರ್ ಸೇರಿದಂತೆ ಬೃಹತ್ ಕೈಗಾರಿಕೆಗಳನ್ನು ತರಲು ಆಸಕ್ತಿ ಇದ್ದು, ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.