
ಬೆಂಗಳೂರು (ಅ.05): ಬೆಂಗಳೂರಿನ ನಮ್ಮ ಮೆಟ್ರೋಗೆ 'ಬಸವ ಮೆಟ್ರೋ' ಎಂದು ನಾಮಕರಣ ಮಾಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಒಂದು ವೇಳೆ ಮೆಟ್ರೋ ಯೋಜನೆ ರಾಜ್ಯ ಸರ್ಕಾರದ ಯೋಜನೆಯಾಗಿದ್ದರೆ, ಇಂದೇ ಬಸವ ಮೆಟ್ರೋ ಎಂದು ನಾಮಕರಣಕ್ಕೆ ಘೋಷಣೆ ಮಾಡುತ್ತಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ವಿಶ್ವಗುರು ಬಸವಣ್ಣ ಅವರನ್ನು 'ಕರ್ನಾಟಕ ಸಾಂಸ್ಕೃತಿಕ ನಾಯಕ' ಎಂದು ಘೋಷಿಸಿದ ವರ್ಷಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ 'ಬಸವ ಸಂಸ್ಕೃತಿ ಅಭಿಯಾನ-2025'ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರಿನ ಮೆಟ್ರೋ ಯೋಜನೆ ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ, ನಾನು ಇವತ್ತೇ ಬೆಂಗಳೂರು ಮೆಟ್ರೋಗೆ 'ಬಸವ ಮೆಟ್ರೋ' ಎಂದು ಘೋಷಿಸಿ ಬಿಡುತ್ತಿದ್ದೆ. ಆದರೆ, ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆಯಾಗಿರುವುದರಿಂದ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ತಿಳಿಸಿದರು.
ನಾನು ಕಾನೂನು ವಿದ್ಯಾರ್ಥಿ ಆದ ಗಳಿಗೆಯಿಂದ ಬಸವಣ್ಣನವರ ಅನುಯಾಯಿ. ಡಾ. ಬಿ.ಆರ್. ಅಂಬೇಡ್ಕರ್ ಅವರೂ ತಮ್ಮ ಸಂವಿಧಾನದಲ್ಲಿ ಬಸವಣ್ಣನವರ ಆಶಯಗಳನ್ನೇ ಹೇಳಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಆಶಯವಾದರೆ, ಬಸವಣ್ಣನವರು ಜಾತಿ ರಹಿತ, ವರ್ಗ ರಹಿತ ಬ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಹೀಗಾಗಿ ಸಂವಿಧಾನ ಮತ್ತು ಶರಣ ಸಂಸ್ಕೃತಿ ಒಂದೇ ಆಗಿದೆ. ನಮ್ಮ ಸರ್ಕಾರ ಸಂವಿಧಾನದ ಪೀಠಿಕೆ ಓದಿಸುವುದನ್ನು ಅಭಿಯಾನದ ರೀತಿ ನಡೆಸುತ್ತಿರುವುದು ಇದೇ ಕಾರಣಕ್ಕೆ. 'ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತವಾಗಿರುತ್ತದೆ. ಬಸವಣ್ಣನವರು ಸಾರಿದ ಸಹಬಾಳ್ವೆ ಮತ್ತು ಸಹಿಷ್ಣುತೆಯನ್ನು ತಾವೂ ಪಾಲಿಸುತ್ತಿರುವುದಾಗಿ ಹೇಳಿದರು.
ಮುಖ್ಯಮಂತ್ರಿಯಾಗಿ ತಾವು ಬಸವ ಜಯಂತಿಯ ದಿನವೇ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಸ್ಮರಿಸಿದ ಸಿದ್ದರಾಮಯ್ಯ ಅವರು, ಅದೇ ದಿನ ಬಸವಣ್ಣನವರ ಆಶಯಗಳಾದ ಸಮಾನ ಅವಕಾಶಗಳನ್ನು ಕಲ್ಪಿಸುವ ತೀರ್ಮಾನ ಕೈಗೊಂಡಿದ್ದೇನೆ. ಹತ್ತು ಹಲವು ಭಾಗ್ಯಗಳ, ಗ್ಯಾರಂಟಿಗಳ ಮೂಲಕ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿಗೆ ಅವಕಾಶಗಳನ್ನು ಕಲ್ಪಿಸಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಇಡುವುದನ್ನು ಕಡ್ಡಾಯ ಮಾಡಿದ್ದು ಇದೇ ಕಾರಣಕ್ಕೆ. ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಇಡೀ ಸರ್ಕಾರ ಬಸವಣ್ಣನವರಿಗೆ ಗೌರವ ಸೂಚಿಸಿದೆ ಎಂದು ವಿವರಿಸಿದರು.
ಬಸವಣ್ಣನವರು ನುಡಿದಂತೆ ನಡೆದರು. ನಾವು ಬಸವ ಅನುಯಾಯಿಗಳೂ ನುಡಿದಂತೆ ನಡೆದಾಗ ಮಾತ್ರ ನಿಜವಾದ ಬಸವ ಅನುಯಾಯಿ ಆಗುತ್ತೇವೆ ಎಂದು ಪ್ರತಿಜ್ಞೆ ಮಾಡಿದರು. ಇದೇ ಸಂದರ್ಭದಲ್ಲಿ, ವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಬೇಡಿಕೆಗೆ ಸರ್ಕಾರದ ಒಪ್ಪಿಗೆ ಇದ್ದು, ಮುಂದಿನ ವರ್ಷ ವಿವಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ