ಬೆಂಗಳೂರು- ಮೈಸೂರು ಎಕ್ಸಪ್ರೆಸ್‌ನಲ್ಲಿ 100ಕ್ಕಿಂತ ಜಾಸ್ತಿ ವೇಗವಿದ್ರೆ 1 ಸಾವಿರ ದಂಡ, ಡಿಎಲ್ ಕ್ಯಾನ್ಸಲ್!

By Gowthami KFirst Published Jul 5, 2023, 6:00 PM IST
Highlights

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ  ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪೊಲೀಸ್ ಇಲಾಖೆ ದಂಡಾಸ್ತ್ರಕ್ಕೆ ಮುಂದಾಗಿದೆ. ಮೊದಲ ದಿನವೇ ಒಟ್ಟು 44 ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ

ಬೆಂಗಳೂರು (ಜು.5): ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿರುವ ಹಿನ್ನೆಲೆ, ಈ ರಸ್ತೆಯಲ್ಲಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪೊಲೀಸ್ ಇಲಾಖೆ ದಂಡಾಸ್ತ್ರಕ್ಕೆ ಮುಂದಾಗಿದೆ. ವಾಹನಗಳು ಸ್ಪೀಡ್ ಲಿಮಿಟ್ ಮೀರಿದ್ರೆ 1 ಸಾವಿರ ದಂಡ ಮತ್ತು ಡಿಎಲ್ ಕ್ಯಾನ್ಸಲ್ ಗೆ ಮುಂದಾಗಿದೆ. ಹೆದ್ದಾರಿಯಲ್ಲಿ ಸ್ಪೀಡ್ ರೆಡಾರ್ ಗನ್ ಮೂಲಕ ವಾಹನ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ವೇಗ ಮಿತಿ 100ಕ್ಕಿಂತ ಹೆಚ್ಚಾಗಿದ್ದರೆ ಬೀಳುತ್ತೆ ಕೇಸ್. ಮಾತ್ರವಲ್ಲ ವಾಹನ ಸವಾರರ ಮೊಬೈಲ್ ಗೆ ಬರಲಿದೆ ನಿಯಮ ಉಲ್ಲಂಘನೆಯ ಪೋಟೊ ಜೊತೆಗೆ ನೋಟಿಸ್. ಹೀಗಾಗಿ ಹದ್ದಿನ ಕಣ್ಣಿಟ್ಟಿರುವ ಪೊಲೀಸ್ ಇಲಾಖೆ ರಾಮನಗರ ವ್ಯಾಪ್ತಿಯಲ್ಲಿ 5 ಸ್ಪೀಡ್ ರೆಡಾರ್ ಗನ್ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. ಈ ಮೂಲಕ ಓವರ್ ಸ್ಪೀಡ್ ಕಂಟ್ರೋಲ್‌ ಮೂಲಕ ಅಪಘಾತ ತಡೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Dharwad-Bengaluru ವಂದೇ ಭಾರತ್ ಟ್ರೈನ್ ಕಲ್ಲು ಹೊಡೆದ ಪ್ರಕರಣ, ಇಬ್ಬರು ಮಕ್ಕಳು ಪೊಲೀಸ್ ವಶಕ್ಕೆ!

Latest Videos

ಮೊದಲ ದಿನವೇ 44 ಜನರ ವಿರುದ್ಧ ಕೇಸ್!
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಮಂಗಳವಾರ ಒಟ್ಟು 44 ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ಸುರಕ್ಷತೆ) ಅಲೋಕ್ ಕುಮಾರ್ ತಿಳಿಸಿದ್ದಾರೆ. ರಾಮನಗರ ಪೊಲೀಸರು ರೇಡಾರ್ ಗನ್‌ಗಳೊಂದಿಗೆ ಎಕ್ಸ್‌ಪ್ರೆಸ್‌ವೇಯಲ್ಲಿ ವೇಗ ತಪಾಸಣೆ ನಡೆಸಿದರು ಮತ್ತು ಅನುಮತಿಸುವ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಮಾರ್ಚ್‌ನಲ್ಲಿ ಉದ್ಘಾಟನೆಯಾದಾಗಿನಿಂದಲೂ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಯಲ್ಲಿ  243 ಅಪಘಾತ ಪ್ರಕರಣಗಳು ಆಗಿವೆ. ವರದಿಗಳ ಪ್ರಕಾರ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 45 ಮಂದಿ, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 55 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ. 

ಇದು ಹೆದ್ದಾರಿ,  ರೇಸಿಂಗ್ ಟ್ರ್ಯಾಕ್ ಅಲ್ಲ: ಪ್ರತಾಪ್ ಸಿಂಹ
ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ನಿಮ್ಮ ಕಾರಿನ ಸ್ಪೀಡ್ ಲಿಮಿಟ್ ನೋಡಿಕೊಂಡು ಡ್ರೈವ್ ಮಾಡಿ. ಇದು ಹೆದ್ದಾರಿ, ರೇಸಿಂಗ್ ಟ್ರ್ಯಾಕ್ ಅಲ್ಲ ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ರೋಡ್ ಚನ್ನಾಗಿದೆ ಅಂತ ರೇಸ್ ಮಾಡಬೇಡಿ.  ಓವರ್ ಸ್ಪೀಡ್‌ನಿಂದ ಆಕ್ಸಿಡೆಂಟ್ ಆಗುತ್ತಿದೆ. ಕಿಯಾ, ನಿಸ್ಸಾನ್ ಕಾರುಗಳಲ್ಲಿ ಬರೀ ಪ್ಲ್ಯಾಸ್ಟಿಕ್ ಇದೆ. ಯದ್ವಾತದ್ವ ಸೀಡ್‌ನಲ್ಲಿ ಹೋದರೆ  ಆಕ್ಸಿಡೆಂಟ್ ಆಗದೆ ಇರುತ್ತಾ? ಗೂಡ್ಸ್ ಗಾಡಿಯವರು ಸೈಡ್‌ನಲ್ಲಿ ಹೋಗಿ.  ಮಧ್ಯ ರೋಡ್‌ನಲ್ಲಿ ಹೋಗಿತ್ತಿದ್ದೀರಿ. ಹಿಂದಿನ ಗಾಡಿ ಬಂದು ಹೊಡೆದರೆ ಉಳೀತೀರಾ? ರಸ್ತೆ ವಿಭಜಕ ಎತ್ತರಿಸುವುದು, ಸ್ಪೀಡ್ ಲಿಮಿಟ್, ಆ್ಯಂಬುಲೆನ್ಸ್ ಸೇವೆ ಎಲ್ಲವನ್ನೂ 6 ತಿಂಗಳ ಒಳಗೆ ಮಾಡುತ್ತೇವೆ. ಅಲ್ಲಿವರೆಗೂ ನಮಗೆ ಸಹಕಾರ ಕೊಡಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

ಕಾಮಗಾರಿ ಹಿನ್ನೆಲೆ ಹಟಿಯಾ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲುಗಳ ಮಾರ್ಗ ಬದಲಾವಣೆ

ಮೂರು ಕಡೆ ಹೊಸ ಮೇಲ್ಸೇತುವೆ ನಿರ್ಮಾಣ 
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಹೆಚ್ಚಳ ಹಿನ್ನೆಲೆ ಹೆದ್ದಾರಿ ವೀಕ್ಷಣೆ ಮಾಡಿದ ರಾಮನಗರ  ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಎಸ್ಪಿ‌ ಕಾರ್ತಿಕ್ ರೆಡ್ಡಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರು-ಮೈಸೂರು ಹೆದ್ದಾರಿ ಸಂಬಂಧ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಅಪಘಾತಗಳು ಹೆಚ್ಚಳ ಹಿನ್ನೆಲೆ ಈಗಾಗಲೇ ಪೋಲಿಸರು ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿದ್ದಾರೆ. ನಿನ್ನೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಸಭೆ ನಡೆದಿದೆ. ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ.

ಮೂರು ಕಡೆ ಹೊಸ ಮೇಲ್ಸೇತುವೆ, ಅಂಡರ್ ಪಾಸ್ , ಸ್ಕೈವಾಕ್ ಗಳನ್ನು ನಿರ್ಮಾಣ ಮಾಡಬೇಕೆಂದು ಸ್ಥಳ ಗುರುತಿಸಲಾಗಿದೆ. ಮಳೆ ಬಂದರೆ ಹೆದ್ದಾರಿಯಲ್ಲಿ ನೀರು ನಿಲ್ಲುವ ಸಂಭವವಿದೆ. ಹೀಗಾಗಿ ಕಳೆದ ಬಾರಿ‌ ನೀರು ನಿಂತಿರುವುದಕ್ಕೆ ಸರ್ವಿಸ್ ರಸ್ತೆಗಳು ಸರಿಯಾಗಿರಲಿಲ್ಲ. ಇದೀಗ ಸರ್ವೀಸ್ ರಸ್ತೆಗಳು ಎಲ್ಲ ಕಡೆ ಸಂಪೂರ್ಣವಾಗಿ ಮುಗಿದಿದೆ.  ಈಗಾಗಲೇ ಡ್ರೈನೆಜ್ ಗಳನ್ನು ಸರಿಪಡಿಸುವಂತೆ ಸೂಚಿಸಲಾಗಿದೆ‌. ಹೊಸದಾಗಿ ಡ್ರೈನೇಜ್ ನಿರ್ಮಿಸುವ ಬಗ್ಗೆ ಕೂಡ ಚಿಂತನೆ ಮಾಡಲಾಗಿದೆ. ಎಂಟ್ರಿ- ಎಕ್ಸಿಟ್ ಗಳ ಬಳಿ ಹಂಪ್ ಗಳನ್ನು‌ ನಿರ್ಮಿಸಲಾಗಿದೆ. ಹಲವು ಕಡೆ ಸೂಚನಾ ಫಲಕಗಳನ್ನು ಕೂಡ ಅಳವಡಿಸಲಾಗಿದೆ. ಒಂದು ತಿಂಗಳ ಒಳಗಾಗಿ ಕೆಲಸ ಮುಗಿಸುವಂತೆ ಹೆದ್ದಾರಿ ಪ್ರಾಧೀಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

click me!