ಬೆಂಗಳೂರು ಏರ್ಪೋರ್ಟಲ್ಲಿ ಡಿ.8ರಿಂದ ಹೊಸ ಪಿಕಪ್‌ ನಿಯಮ: ಕೇವಲ 8 ನಿಮಿಷ ಉಚಿತ, ಅವಧಿ ಮೀರಿದರೆ ದಂಡ ಖಚಿತ!

Published : Dec 02, 2025, 02:46 PM IST
Bengaluru Airport Pickup Rules

ಸಾರಾಂಶ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಡಿಸೆಂಬರ್ 8, 2025 ರಿಂದ ಹೊಸ ಪಿಕಪ್ ನಿಯಮ ಜಾರಿಯಾಗಲಿದೆ. ಈ ನಿಯಮದ ಪ್ರಕಾರ, ಖಾಸಗಿ ವಾಹನಗಳಿಗೆ ಪಿಕಪ್ ವಲಯದಲ್ಲಿ ಕೇವಲ 8 ನಿಮಿಷಗಳ ಉಚಿತ ಕಾಯುವ ಅವಧಿ ನೀಡಲಾಗಿದೆ.

ಬೆಂಗಳೂರು (ಡಿ.02): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) ತನ್ನ ಪ್ರಯಾಣಿಕರ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಆಗಮನ ಪ್ರದೇಶಗಳಲ್ಲಿ ಶಿಸ್ತು ಹಾಗೂ ಸುರಕ್ಷತೆಯನ್ನು ಸುಧಾರಿಸಲು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಡಿಸೆಂಬರ್ 8, 2025 ರಿಂದ ವಿಮಾನ ನಿಲ್ದಾಣದಲ್ಲಿ ವರ್ಧಿತ ಪಿಕಪ್ ನಿಯಮಗಳನ್ನು (Enhanced Pickup Rules) ಜಾರಿಗೆ ತರಲಾಗುತ್ತಿದ್ದು, ಇದರ ಅಡಿಯಲ್ಲಿ ಖಾಸಗಿ ವಾಹನಗಳ ಉಚಿತ ಕಾಯುವ ಅವಧಿಯನ್ನು ಕೇವಲ 8 ನಿಮಿಷಗಳಿಗೆ ಸೀಮಿತಗೊಳಿಸಲಾಗಿದೆ. ಈ ಸಮಯ ಮೀರಿದರೆ, ಭಾರೀ ದಂಡವನ್ನು ವಿಧಿಸಲು ನಿರ್ಧರಿಸಲಾಗಿದೆ.

ಭಾರತದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣ:

ಪ್ರತಿದಿನ ಸುಮಾರು 1,30,000 ಪ್ರಯಾಣಿಕರು ಮತ್ತು 1,00,000 ವಾಹನಗಳ ಸಂಚಾರವನ್ನು ನಿರ್ವಹಿಸುವ ಭಾರತದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣ ಇದಾಗಿದೆ. ಟರ್ಮಿನಲ್‌ಗಳ ಮುಂಭಾಗವಿರುವ ಡ್ರಾಪ್-ಆಫ್ ಮತ್ತು ಪಿಕ್-ಅಪ್ ಮಾರ್ಗಗಳಲ್ಲಿ (ಕರ್ಬ್‌ಸೈಡ್) ಅನಗತ್ಯವಾಗಿ ದೀರ್ಘಕಾಲ ವಾಹನ ನಿಲುಗಡೆಯಿಂದ ಕೃತಕ ದಟ್ಟಣೆ ಹೆಚ್ಚುತ್ತಿದ್ದು, ಇದರಿಂದ ವಿಮಾನ ನಿಲ್ದಾಣದ ಒಟ್ಟಾರೆ ಅನುಕೂಲಕ್ಕೆ ಅಡ್ಡಿಯಾಗುತ್ತಿದೆ. ಇದನ್ನು ಪರಿಹರಿಸಲು ಬಿಐಎಎಲ್‌ ಈ ಕಠಿಣ ಕ್ರಮ ಜಾರಿಗೊಳಿಸುತ್ತಿದೆ.

 

ಖಾಸಗಿ ವಾಹನಗಳಿಗೆ (ಬಿಳಿ ಬೋರ್ಡ್) ಹೊಸ ನಿಯಮ:

ಹೊಸ ಪ್ರತ್ಯೇಕ ಪಥ ವ್ಯವಸ್ಥೆಯ ಪ್ರಕಾರ, ಟಿ1 ಮತ್ತು ಟಿ2 ಆಗಮನದ ಪಿಕ್-ಅಪ್ ವಲಯಕ್ಕೆ ಖಾಸಗಿ (ಬಿಳಿ ಬೋರ್ಡ್) ಕಾರುಗಳ ಪ್ರವೇಶ ಉಚಿತವಾಗಿರುತ್ತದೆ. ಆದರೆ, ಅಂತಾರಾಷ್ಟ್ರೀಯ ಮಾನದಂಡಗಳಿಗಿಂತ ಹೆಚ್ಚಿರುವ 8 ನಿಮಿಷಗಳ ಉಚಿತ ಕಾಯುವ ಅವಧಿಯನ್ನು ಮೀರಿದರೆ ದಂಡ ಅನಿವಾರ್ಯವಾಗಲಿದೆ.

ಕಾಯುವ ಅವಧಿವಿಧಿಸುವ ಶುಲ್ಕ

  • 8 ನಿಮಿಷದವರೆಗೆ - ಉಚಿತ
  • 8 ರಿಂದ 13 ನಿಮಿಷಗಳು - ₹150
  • 13 ರಿಂದ 18 ನಿಮಿಷಗಳು- ₹300
  • 18 ನಿಮಿಷಗಳಿಗಿಂತ ಹೆಚ್ಚುವಾಹನ ಟೋಯಿಂಗ್ ಮತ್ತು ದಂಡ

18 ನಿಮಿಷಗಳಿಗಿಂತ ಹೆಚ್ಚು ಕಾಲ ನಿಲುಗಡೆ ಮಾಡಿದರೆ, ವಾಹನವನ್ನು ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಟೋಯಿಂಗ್‌ ಮಾಡಲಾಗುತ್ತದೆ ಮತ್ತು ಸೂಕ್ತ ದಂಡ ಶುಲ್ಕ ವಿಧಿಸಲಾಗುವುದು.

ವಾಣಿಜ್ಯ ಮತ್ತು ಕ್ಯಾಬ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್

ಓಲಾ, ಊಬರ್ ಸೇರಿದಂತೆ ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಕ್ಯಾಬ್‌ಗಳು ಸೇರಿದಂತೆ ಎಲ್ಲಾ ವಾಣಿಜ್ಯ ವಾಹನಗಳಿಗೆ ಆಗಮನದ ಪಿಕ್-ಅಪ್‌ಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇವುಗಳು ನಿಗದಿಪಡಿಸಿದ ಪಾರ್ಕಿಂಗ್ ವಲಯಗಳಲ್ಲಿ ಮಾತ್ರ ಕಾಯಬೇಕಾಗುತ್ತದೆ.

ವಾಣಿಜ್ಯ ವಾಹನಗಳಿಗೆ ಪಾರ್ಕಿಂಗ್‌ನ ಮೊದಲ 10 ನಿಮಿಷಗಳು ಉಚಿತವಾಗಿರುತ್ತದೆ.

ಟರ್ಮಿನಲ್-1 ಗೆ ಬರುವ ವಾಣಿಜ್ಯ ವಾಹನಗಳು ಪಿ-4 ಮತ್ತು ಪಿ-3 ಪಾರ್ಕಿಂಗ್ ವಲಯ ಬಳಸಬೇಕು.

ಟರ್ಮಿನಲ್-2 ಗೆ ಬರುವ ವಾಣಿಜ್ಯ ವಾಹನಗಳು ಪಿ-2 ಪಾರ್ಕಿಂಗ್ ವಲಯ ಬಳಸಬೇಕು.

'ಶಿಸ್ತು ಅತ್ಯಗತ್ಯ' ಎಂದ ಬಿಐಎಎಲ್ ಸಿಇಒ

ಈ ಉಪಕ್ರಮದ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್‌) ಎಂ.ಡಿ. ಮತ್ತು ಸಿಇಒ ಹರಿ ಮರಾರ್, 'ಪ್ರಯಾಣಿಕರ ಸಂಖ್ಯೆ ತೀವ್ರ ಹೆಚ್ಚುತ್ತಿರುವುದರಿಂದ, ಪಿಕ್-ಅಪ್ ವಲಯಗಳಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಅತ್ಯಗತ್ಯ. ಇದರಿಂದ ಸುರಕ್ಷಿತ ಮತ್ತು ಸುಗಮ ಆಗಮನ-ನಿರ್ಗಮನಕ್ಕೆ ಅನುಕೂಲವಾಗುತ್ತದೆ. ಪ್ರಯಾಣಿಕರು ಮತ್ತು ಕ್ಯಾಬ್ ಚಾಲಕರು ಹೊಸ ಪ್ರಕ್ರಿಯೆಗಳನ್ನು ಅನುಸರಿಸಿ, ನಮ್ಮ #BeCabWise ಅಥವಾ #ಜಾಣ್ಮೆಯಿಂದಕ್ಯಾಬ್‌ಆರಿಸಿ ಉಪಕ್ರಮಕ್ಕೆ ಬೆಂಬಲ ನೀಡಬೇಕೆಂದು' ಮನವಿ ಮಾಡಿದ್ದಾರೆ.

ರಸ್ತೆ ಬದಿಯ ಪಿಕ್-ಅಪ್‌ಗಳು, ಪಥಗಳನ್ನು ನಿರ್ಬಂಧಿಸುವುದು ಮತ್ತು ದೀರ್ಘಕಾಲ ಕಾಯುವುದರಿಂದ ಉಂಟಾಗುವ ದಟ್ಟಣೆ ಮತ್ತು ಸುರಕ್ಷತಾ ಅಪಾಯಗಳನ್ನು ತಡೆಯಲು ಈ ಕಠಿಣ ಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಇದು ವಿಮಾನ ನಿಲ್ದಾಣದ ಒಟ್ಟಾರೆ ಉತ್ತಮ ಪ್ರಯಾಣದ ಅನುಭವವನ್ನು ನೀಡಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ