
ಬೆಂಗಳೂರು (ಜುಲೈ 26): ಜಾಗತಿಕ ಮಟ್ಟದಲ್ಲಿ ಐಟಿ ಹಬ್ ಹಾಗೂ ಶಾಂತಿನೆಲೆವೀಡು ಎಂದೆಲ್ಲ ಪ್ರಖ್ಯಾತಿ ಹೊಂದಿರುವ ಬೆಂಗಳೂರು ಈಗ ದೇಶದ ಆಂತರಿಕ ಭದ್ರತೆಗೆ ಅಪಾಯ ತಂದೊಡ್ಡಿರುವ ಭಯೋತ್ಪಾದಕ ಸಂಘಟನೆಗಳ ಸ್ಲಿಪರ್ ಸೆಲ್ ಕೇಂದ್ರವಾಗಿದೆ ಎಂಬ ಆತಂಕ ವ್ಯಕ್ತವಾಗಿದೆ. ಇದಕ್ಕೆ ಎರಡು ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಮೂವರು ಶಂಕಿತ ಉಗ್ರರು ಒಂದೆಡೆ ಕಾರಣವಾದರೆ ಮತ್ತೊಂದೆಡೆ ಪದೇ ಪದೇ ರಾಜಧಾನಿಯಲ್ಲಿ ಉಗ್ರರ ಬಂಧಿತರಾಗುತ್ತಿದ್ದರೂ ನಗರದಲ್ಲಿ ಬೇರು ಬಿಟ್ಟಿರುವ ಭಯೋತ್ಪಾದಕ ಸಂಘಟನೆಗಳ ಜಾಲ ಪತ್ತೆಗೆ ಕಾರ್ಯನ್ಮುಖರಾಗದ ಪೊಲೀಸರ ಉದಾಸೀತನೆ ಆತಂಕ ಹೆಚ್ಚಿಸಿದೆ. ಉಗ್ರರು ಸ್ವಚ್ಛಂದವಾಗಿ ಓಡಾಡಿಕೊಂಡು ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಲು ಬೆಂಗಳೂರು ಪ್ರಾಶಸ್ತ್ಯ ಸ್ಥಳವಾಗಿದೆ. ಇದಕ್ಕೆ ಸೋಮವಾರ ಸಿಸಿಬಿ ಪೊಲೀಸರು ನಗರದಲ್ಲಿ ಬಂಧಿಸಿರುವ ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಸೇರಿದಂತೆ ಕಳೆದ ಎರಡು ತಿಂಗಳಲ್ಲಿ ಸಿಕ್ಕಿಬಿದ್ದಿರುವ ಮೂವರು ಶಂಕಿತ ಉಗ್ರರ ಪ್ರಕರಣಗಳೇ ಸ್ಪಷ್ಟನಿದರ್ಶನವಾಗಿದೆ. ಉತ್ತರ ಭಾರತದ ಕಣಿವೆ ಪ್ರದೇಶಗಳಲ್ಲಿ ಅಡಗಿ ಕುಳಿತು ವಿಧ್ವಂಸಕ ಕೃತ್ಯಗಳಿಗೆ ಮಾಸ್ಟರ್ ಪ್ಲಾನ್ ಮಾಡುತ್ತಿದ್ದ ಉಗ್ರರು, ಇದೀಗ ದಕ್ಷಿಣ ಭಾರತದತ್ತ ಮುಖ ಮಾಡಿದ್ದಾರೆ. ಅದರಲ್ಲೂ ದೇಶದ ಸಿಲಿಕಾನ್ ವ್ಯಾಲಿಯಾಗಿರುವ ಬೆಂಗಳೂರು ಉಗ್ರರ ಸ್ಲೀಪರ್ ಸೆಲ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯ ಪೊಲೀಸರ ಕಾರ್ಯವೇನು?: ಸುಮಾರು ಒಂದೂವರೆ ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಂತಹ ಮಹಾನಗರದ ಹೃದಯ ಭಾಗದಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಉಗ್ರರು ಸ್ಥಳೀಯರೇ ಆಗಿದ್ದಾರೆ. ಚಾಲಕ, ಫುಡ್ ಡೆಲಿವರಿ ಸೇರಿದಂತೆ ಹಲವು ಕೆಲಸ ಮಾಡಿಕೊಂಡು ದೇಶದ್ರೋಹಿ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದಾರೆ. ರಾಜ್ಯ ಪೊಲೀಸ್ ಇಲಾಖೆ, ಗುಪ್ತಚರ ವಿಭಾಗ, ಭಯೋತ್ಪಾದನೆ ನಿಗ್ರಹ ದಳದ ಕಣ್ಣಿಗೆ ಬೀಳದಂತೆ ಉಗ್ರರು ರಾಜಧಾನಿಯಲ್ಲಿ ನೆಲೆಯೂರಿದ್ದಾರೆ. ಸಾವಿರಾರು ಕಿ.ಮೀ. ದೂರದ ಜಮ್ಮು-ಕಾಶ್ಮೀರ, ಕೋಲ್ಕತ್ತ ಸೇರಿದಂತೆ ಹೊರರಾಜ್ಯದ ಪೊಲೀಸರು ರಾಜಧಾನಿಯಲ್ಲಿ ಉಗ್ರರ ಜಾಡು ಹಿಡಿದು ಪತ್ತೆಹಚ್ಚಿ ಬಂಧಿಸಿ ಕರೆದೊಯ್ಯುತ್ತಿದ್ದಾರೆ. ಆದರೆ, ಸ್ಥಳೀಯ ಪೊಲೀಸರು, ಭಯೋತ್ಪಾದನೆ ನಿಗ್ರಹ ದಳದ ಕಾರ್ಯವೇನು ಎಂಬ ಪ್ರಶ್ನೆ ಉದ್ಭವಾಗಿದೆ.
ರಾಜ್ಯದ ಎಟಿಎಸ್ ನಿಷ್ಕ್ರೀಯ: ಬೆಂಗಳೂರಿನಲ್ಲಿ ಎರಡು ವರ್ಷದ ಹಿಂದೆ ಸಿಸಿಬಿ ಅಡಿಯಲ್ಲಿ ಭಯೋತ್ಪಾದನೆ ನಿಗ್ರಹಗಳ ದಳ(ಎಟಿಎಸ್) ರಚಿಸಲಾಗಿದೆ. ಈ ವಿಭಾಗ ಏನು ಕೆಲಸ ಮಾಡುತ್ತಿದೆ ಎಂಬುದು ನಿಗೂಢವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಎಟಿಎಸ್ ಯಾವುದೇ ಮಹತ್ವದ ಕಾರ್ಯಚರಣೆ ಮಾಡಿಲ್ಲ. ಒಬ್ಬನ್ನೇ ಒಬ್ಬ ಉಗ್ರನನ್ನು ಪತ್ತೆಹಚ್ಚಿ ಬಂಧಿಸಿರುವ ದಾಖಲೆ ಲಭ್ಯವಿಲ್ಲ. ನೆರೆಯ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳಕ್ಕೆ ಹೋಲಿಕೆ ಮಾಡಿದರೆ, ನಗರದ ಎಟಿಎಸ್ ಘಟಕ ಸಂಪೂರ್ಣ ನಿಷ್ಕ್ರೀಯವಾಗಿದೆ. ನೆರೆಯ ರಾಜ್ಯದ ಪೊಲೀಸರು ನಗರಕ್ಕೆ ಬಂದಾಗ ಉಗ್ರರ ಬಂಧನ ಕಾರ್ಯಾಚರಣೆಗೆ ನೆರವು ನೀಡುವುದಕಷ್ಟೇ ಸೀಮಿತವಾಗಿದೆ ಎಂದು ಆರೋಪ ಕೇಳಿಬಂದಿದೆ.
ಉಗ್ರರ ಟಾರ್ಗೆಟ್ ಲೀಸ್ಟಲ್ಲಿ ನಗರ: ನಗರದಲ್ಲಿ ಈವರೆಗೆ ಐಐಎಸ್ಸಿ ಬಾಂಬ್ ಸ್ಫೋಟ, ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್ ಸ್ಫೋಟ, ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣ ನಡೆದಿವೆ. ಇವು ಬೆಂಗಳೂರು ನಗರ ಉಗ್ರರ ಟಾರ್ಗೆಟ್ ಲಿಸ್ಟ್‌ನಲ್ಲಿ ಇರುವುದಕ್ಕೆ ನಿದರ್ಶನವಾಗಿದೆ. ಹೀಗಿದ್ದರೂ ನಗರದಲ್ಲಿ ಉಗ್ರರನ್ನು ನಿಗ್ರಹಿಸುವ ನಿಟ್ಟಿನಲ್ಲಿ ಯಾವುದೇ ಮಹತ್ವದ ಕಾರ್ಯಗಳು ನಡೆಯುತ್ತಿಲ್ಲ. ನೆರೆ ರಾಜ್ಯದ ಪೊಲೀಸರು, ಕೇಂದ್ರದ ತನಿಖಾ ಸಂಸ್ಥೆಗಳು ನಗರಕ್ಕೆ ಬಂದು ಉಗ್ರರನ್ನು ಬಂಧಿಸಿ ಕರೆದೊಯ್ಯುತ್ತಿವೆ. ರಾಜ್ಯ ಗೃಹ ಇಲಾಖೆ ಈಗಲೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ಭಾರೀ ಬೆಲೆ ತೆತ್ತಬೇಕಾಗುತ್ತದೆ.
ಅಲ್‌ಖೈದಾ ಜೊತೆ ಅಖ್ತರ್ ಹುಸೇನ್‌ಗೆ ಲಿಂಕ್, ಬೆಂಗಳೂರು ಗಲಭೆಗೆ ಮಾಸ್ಟರ್ ಪ್ಲ್ಯಾನ್!
ಜೂ.5ಕ್ಕೆ ಶ್ರೀರಾಂಪುರದಲ್ಲಿ ಶಂಕಿತ ಉಗ್ರನ ಬಂಧನ: ಕಾಶ್ಮೀರದಲ್ಲಿ ಹಿಂದುಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಹತ್ಯೆ ಮಾಡಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಎ ದರ್ಜೆ ಉಗ್ರ ತಾಲಿಬ್ ಹುಸೈನ್, 2019ರಿಂದಲೂ ನಗರದ ಶ್ರೀರಾಂಪುರದಲ್ಲಿ ಅಡಗಿದ್ದ. ಜಮ್ಮು-ಕಾಶ್ಮೀರ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ ಜಂಟಿ ಕಾರ್ಯಾಚರಣೆ ನಡೆಸಿ ಜೂನ್ 5ರಂದು ಶ್ರೀರಾಂಪುರದಲ್ಲಿ ತಾಲಿಬ್ ಹುಸೈನ್‌ನನ್ನು ಬಂಧಿಸಿ ಜಮ್ಮು-ಕಾಶ್ಮೀರಕ್ಕೆ ಕರೆದೊಯ್ದಿದ್ದರು. ಶಂಕಿತ ಉಗ್ರ ತಾಲಿಬ್ ನಗರದಲ್ಲಿ ರೈಲು ನಿಲ್ದಾಣದಲ್ಲಿ ಗೂಡ್‌್ಸ ಗಾಡಿ ಚಾಲಕನಾಗಿದ್ದ.
ಬೆಂಗಳೂರಿನಲ್ಲಿ ಶಂಕಿತ ಉಗ್ರನ ವಶಕ್ಕೆ ಪಡೆದ ಸಿಸಿಬಿ ಪೊಲೀಸರು
ಜು.1ಕ್ಕೆ ಬೊಮ್ಮನಹಳ್ಳಿಯಲ್ಲಿ ಶಂಕಿತ ಉಗ್ರನ ಬಂಧನ: ಬಾಂಗ್ಲಾದೇಶದಲ್ಲಿ ವಿಜ್ಞಾನ ಬರಹಗಾರ ಅನಂತ್ ವಿಜಯ ದಾಸ್ ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಅಲ್‌ಖೈದಾ ಉಗ್ರ ಫೈಜಲ್ ಅಹಮದ್ ಎಂಬಾತನನ್ನು ಜು.1ರಂದು ಕೋಲ್ಕತಾ ಪೊಲೀಸರು ಕಾರ್ಯಾಚರಣೆ ನಡೆಸಿ, ಬೊಮ್ಮನಹಳ್ಳಿಯಲ್ಲಿ ಬಂಧಿಸಿದ್ದರು. ಬಳಿಕ ಬಾಂಗ್ಲಾ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಬೊಮ್ಮನಹಳ್ಳಿಯಲ್ಲಿ ಎರಡು ವರ್ಷಗಳಿಂದ ನೆಲೆಸಿದ್ದ ಫೈಜಲ್, ಕ್ಯಾಬ್ ಚಾಲಕನಾಗಿ ಜೀವನ ನಡೆಸುತ್ತಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ