
ಬೆಂಗಳೂರು/ಜೈಪುರ (ಜೂ.14): ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯನ್ನು ಬಂಧಿಸಲು ರಾಜಸ್ಥಾನಕ್ಕೆ ತೆರಳಿದ್ದ ಬೆಂಗಳೂರಿನ ಎಚ್‌ಎಎಲ್ (HAL) ಪೊಲೀಸ್ ಠಾಣೆಯ ಸಿಬ್ಬಂದಿಗಳು ಈಗ ಅಲ್ಲಿನ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಅಧಿಕಾರಿಗಳ ಅತಿಥಿಗಳಾಗಿದ್ದಾರೆ. ಆರೋಪಿಯನ್ನು ಬಿಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮಹಿಳಾ ಪಿಎಸ್‌ಐ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಗಳು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವೊಂದರ ತನಿಖೆಗಾಗಿ ಪಿಎಸ್‌ಐ ಅನಿತಾ, ಹೆಡ್ ಕಾನ್‌ಸ್ಟೇಬಲ್ ಉಳುವಪ್ಪ ಮತ್ತು ಕಾನ್‌ಸ್ಟೇಬಲ್ ಯತೀಶ್ ಕಳೆದ ಶುಕ್ರವಾರ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದರು. ಅಲ್ಲಿ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು, ಆತನನ್ನು ಬಂಧಿಸದಿರಲು ಅಥವಾ ಕೇಸ್‌ನಿಂದ ರಕ್ಷಿಸಲು ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಆರೋಪಿಯ ಬಳಿ ಬೆಂಗಳೂರು ಪೊಲೀಸರು ಒಟ್ಟು 2 ಲಕ್ಷ ರೂಪಾಯಿ ಹಣ ನೀಡುವಂತೆ ಪೀಡಿಸಿದ್ದರು. ಈ ಸಂಬಂಧ ಸಂತ್ರಸ್ತ ವ್ಯಕ್ತಿ ಜೈಪುರದ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಯೋಜನೆಯಂತೆ, ಮೊದಲ ಕಂತಾಗಿ 40 ಸಾವಿರ ರೂಪಾಯಿ ಹಣವನ್ನು ಪಡೆಯುತ್ತಿದ್ದಾಗ ಜೈಪುರ ಎಸಿಬಿ ಎಎಸ್‌ಪಿ ಭೂಪೇಂದ್ರ ಚೌದರಿ ನೇತೃತ್ವದ ತಂಡ ದಾಳಿ ನಡೆಸಿದೆ. ಹಣದ ಸಮೇತ ಪಿಎಸ್‌ಐ ಅನಿತಾ ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತಮ್ಮದೇ ಇಲಾಖೆಯ ಸಿಬ್ಬಂದಿಗಳು ಪರರಾಜ್ಯದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವುದು ಬೆಂಗಳೂರು ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ಈ ಬಗ್ಗೆ ಜೈಪುರ ಎಸಿಬಿ ಅಧಿಕಾರಿಗಳು ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅಧಿಕೃತ ಮಾಹಿತಿ ರವಾನಿಸಿದ್ದಾರೆ. ಸದ್ಯ ಮೂವರನ್ನು ಬಂಧಿಸಿರುವ ರಾಜಸ್ಥಾನ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕರ್ತವ್ಯದ ಹೆಸರಿನಲ್ಲಿ ಪರರಾಜ್ಯಕ್ಕೆ ಹೋಗಿ ಭ್ರಷ್ಟಾಚಾರ ನಡೆಸಿದ ಈ ಪೊಲೀಸರ ವಿರುದ್ಧ ಇಲಾಖಾ ತನಿಖೆಯೂ ನಡೆಯುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ