
ಬೆಂಗಳೂರು (ಡಿ.02): ಬೆಂಗಳೂರು ನಗರದಲ್ಲಿ ಮತ್ತೆ ಬಾಂಬ್ ಬೆದರಿಕೆ ಆತಂಕ ಸೃಷ್ಟಿಸಿದೆ. ನಗರದ ಆಯುಕ್ತರ ಇ-ಮೇಲ್ ವಿಳಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬರು 'ಜೈಷ್-ಇ-ಮೊಹಮ್ಮದ್' (Jaish-e-Mohammed) ಹೆಸರನ್ನು ಬಳಸಿಕೊಂಡು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಕಳುಹಿಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಹಾಗೂ ನಗರದ ಆಯ್ದ ಪ್ರಮುಖ ಶಾಪಿಂಗ್ ಮಾಲ್‌ಗಳನ್ನೇ ಗುರಿಯಾಗಿಸಿಕೊಂಡು ಈ ಬೆದರಿಕೆ ಸಂದೇಶ ರವಾನೆಯಾಗಿದೆ.
ನವೆಂಬರ್ 30, 2025 ರಂದು ಬೆಳಿಗ್ಗೆ 11.53 ಕ್ಕೆ ಈ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಅನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರ (COMPOL Bengaluru City) ಅಧಿಕೃತ ಇ-ಮೇಲ್‌ಗೆ ಕಳುಹಿಸಲಾಗಿದೆ.
ಬೆದರಿಕೆದಾರನು ತನ್ನನ್ನು 'ಜೈಷ್-ಇ-ಮೊಹಮ್ಮದ್ ವೈಟ್ ಕಾಲರ್ ಟೆರರ್ ಟೀಮ್' (Jaish-e-Mohammed White collar terror team) ಎಂದು ಪರಿಚಯಿಸಿಕೊಂಡು, ಇಂಗ್ಲಿಷ್‌ನಲ್ಲಿ ಸಂದೇಶ ಬರೆದಿದ್ದಾನೆ.
ಜೈಷ್-ಇ-ಮೊಹಮ್ಮದ್ ವೈಟ್ ಕಾಲರ್ ಟೆರರ್ ಟೀಮ್‌ನಿಂದ ಇದೊಂದು ಎಚ್ಚರಿಕೆ. ನಾವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು, ಒರಿಯನ್ ಮಾಲ್ (Orion Mall), ಲುಲು ಮಾಲ್ (Lulu Mall), ಫೋರಂ ಸೌತ್ ಮಾಲ್ (Forum South mall), ಮಂತ್ರಿ ಸ್ಕ್ವೇರ್ ಮಾಲ್ (Mantri Square Mall) ಗಳನ್ನು ಗುರಿಯಾಗಿಸಿಕೊಂಡಿದ್ದೇವೆ. ಸಂಜೆ 7 ಗಂಟೆಯ ನಂತರ ಬಾಂಬ್ ಸ್ಫೋಟಗೊಳ್ಳಲಿದೆ. ನಮ್ಮ ಅಲ್ಲಾ ಮತ್ತು ನಮ್ಮ ಮಾಸ್ಟರ್ ಮೋಹಿತ್ ಅವರಿಗೆ ಧನ್ಯವಾದಗಳು. ಅಲ್ಲದೆ, 'ಇದು ಸಂಭವಿಸದಿರಲು ಬಯಸಿದರೆ ನೀವು +91 936***8077 ಸಂಖ್ಯೆಗೆ ಕರೆ ಮಾಡಿ, ಹಣವನ್ನು ಪಾವತಿ ಮಾಡಿ ಎಂದು ಹಣಕ್ಕೆ ಬೇಡಿಕೆ ಇಡುವ ಪ್ರಯತ್ನವನ್ನೂ ಮಾಡಲಾಗಿದೆ.
ಈ ಬೆದರಿಕೆ ಇ-ಮೇಲ್ ಅನ್ನು mohitkumar.er989799@gmail.com ಎಂಬ ಇಮೇಲ್ ಐಡಿ ಮೂಲಕ ರವಾನಿಸಲಾಗಿದೆ. ಸಂದೇಶವು ಬಂದ ತಕ್ಷಣವೇ ಎಚ್ಚೆತ್ತ ಪೊಲೀಸರು, ವಿಮಾನ ನಿಲ್ದಾಣ ಮತ್ತು ಹೆಸರಿಸಲಾದ ಮಾಲ್‌ಗಳ ಸುತ್ತಮುತ್ತ ತೀವ್ರ ಭದ್ರತಾ ತಪಾಸಣೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳಗಳು ಸ್ಥಳಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ.
ಈ ಸಂಬಂಧ ಬೆಂಗಳೂರಿನ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ (FIR) ದಾಖಲಿಸಲಾಗಿದೆ. ಇ-ಮೇಲ್ ಐಡಿಯಲ್ಲಿ ಉಲ್ಲೇಖಿಸಲಾದ 'ಮೋಹಿತ್ ಕುಮಾರ್' ಎಂಬಾತನೇ ಆರೋಪಿ ಅಥವಾ ಬೇರೆ ಯಾರೋ ಈ ಐಡಿ ಬಳಸಿದ್ದಾರೆ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಭಯೋತ್ಪಾದಕ ಸಂಘಟನೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ಬೆದರಿಕೆ ಹಾಕಿರುವ ಆರೋಪಿಯ ಪತ್ತೆಗೆ ಪೊಲೀಸರು ಸೈಬರ್ ತಂತ್ರಜ್ಞಾನದ ನೆರವು ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ