
ಬೆಂಗಳೂರು (ಅ.23): ವೈದ್ಯಕೀಯ ಲೋಕದಲ್ಲಿ ಸಂಚಲನ ಮೂಡಿಸಿದ್ದ ಮಾರತಹಳ್ಳಿ ವೈದ್ಯೆ ಡಾ. ಕೃತಿಕಾ ಎಂ. ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ಆರೋಪಿ ಪತಿ ಡಾ. ಮಹೇಂದ್ರ ರೆಡ್ಡಿ ಪೊಲೀಸರ ಮುಂದೆ ಆಘಾತಕಾರಿ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ. ಕೊಲೆಗೆ 3 ಪ್ರಮುಖ ಕಾರಣಗಳಿದ್ದವು ಎಂದು ಮಹೇಂದ್ರ ಒಪ್ಪಿಕೊಂಡಿದ್ದು, ಆಸ್ತಿ, ಅನೈತಿಕ ಸಂಬಂಧ ಮತ್ತು ಕೃತಿಕಾಳ ಆರೋಗ್ಯ ಸಮಸ್ಯೆಗಳೇ ಕೊಲೆಗೆ ಪ್ರೇರಣೆಯಾಗಿವೆ ಎಂದು ತಿಳಿದುಬಂದಿದೆ.
ಪೊಲೀಸರ ತನಿಖೆಯ ವೇಳೆ, ಡಾ. ಮಹೇಂದ್ರ ರೆಡ್ಡಿ ಕೊಲೆಯನ್ನು ಪೂರ್ವನಿಯೋಜಿತವಾಗಿ (ಪ್ರೀ-ಪ್ಲಾನ್) ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆಸ್ತಿ ವಿವಾದವೇ ಕೊಲೆಗೆ ಮುಖ್ಯ ಕಾರಣ ಎಂದು ಆತ ಹೇಳಿದ್ದಾನೆ. ಕೃತಿಕಾಗೆ ವಿಚ್ಛೇದನ (ಡಿವೋರ್ಸ್) ನೀಡಿದರೆ, ಆಸ್ತಿಯಲ್ಲಿ ನನಗೆ ಪಾಲು ಸಿಗುತ್ತಿರಲಿಲ್ಲ. ಹಾಗಾಗಿ ನಾನು ಡಿವೋರ್ಸ್ ನೀಡಲಿಲ್ಲ. ವಿಚ್ಛೇದನ ನೀಡಿದರೆ ಸಮಾಜದಲ್ಲಿ ಮರ್ಯಾದೆ ಕೂಡ ಹೋಗುತ್ತದೆ ಎಂಬ ಭಯವೂ ಇತ್ತು' ಎಂದು ಮಹೇಂದ್ರ ಪೊಲೀಸರಿಗೆ ತಿಳಿಸಿದ್ದಾನೆ.
ಮಹೇಂದ್ರನ ಹೇಳಿಕೆಯ ಪ್ರಕಾರ, ಕೃತಿಕಾಳ ಅನಾರೋಗ್ಯದ ಕಾರಣದಿಂದಲೂ ಆತ ಹಿಂಸೆ ಅನುಭವಿಸುತ್ತಿದ್ದ. 'ಡಾ. ಕೃತಿಕಾ ಎಂ. ರೆಡ್ಡಿ ಅವರ ಆರೋಗ್ಯ ಸರಿ ಇರಲಿಲ್ಲ. ದಿನಪೂರ್ತಿ ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿಕೊಂಡು ಬಂದ ಮೇಲೆ, ಸಂಜೆ ಮನೆಯಲ್ಲಿ ಇವಳನ್ನೂ ನೋಡಿಕೊಳ್ಳುವುದು ನನಗೆ ಹಿಂಸೆಯಾಗುತ್ತಿತ್ತು. ಕೃತಿಕಾಗೆ ಗ್ಯಾಸ್ಟ್ರಿಕ್ ಸಮಸ್ಯೆಯಿದ್ದ ವಿಷಯವನ್ನು ಆಕೆಯ ಕುಟುಂಬದವರು ಮದುವೆಯ ಸಮಯದಲ್ಲಿ ಮುಚ್ಚಿಟ್ಟಿದ್ದರು ಎಂದು ಮಹೇಂದ್ರ ಆರೋಪಿಸಿದ್ದಾನೆ. ಆಕೆಯ ಚಿಕಿತ್ಸೆಯ ಬಗ್ಗೆಯೂ ತನಗೆ ತಿಳಿದಿತ್ತು ಎಂದಿದ್ದಾನೆ.
ಕೊಲೆಗೆ ಆಸ್ತಿ ಮತ್ತು ಆರೋಗ್ಯದ ಸಮಸ್ಯೆಗಳ ಜೊತೆಗೆ ಆರೋಪಿ ಮಹೇಂದ್ರನಿಗೆ ಅನೈತಿಕ ಸಂಬಂಧ ಇರುವುದಾಗಿ ಕೂಡ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಆದರೂ, ಅನೈತಿಕ ಸಂಬಂಧಕ್ಕೋಸ್ಕರ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ತನಗೆ ಫೆಲೋಶಿಪ್ ರೂಪದಲ್ಲಿ ಪ್ರತಿ ತಿಂಗಳು ಸುಮಾರು 70 ರಿಂದ 80 ಸಾವಿರ ರೂ. ಆದಾಯ ಬರುತ್ತಿತ್ತು ಎಂದೂ ಮಾಹಿತಿ ನೀಡಿದ್ದಾನೆ.
ಕೊಲೆಯ ತನಿಖೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮಹೇಂದ್ರ, 'ಅನಸ್ತೇಷಿಯಾ (ಮಂಪರು ಮದ್ದು) ಕೊಟ್ಟು ಸಾಯಿಸಿದರೆ, ಪೊಲೀಸರ ತನಿಖೆಯಲ್ಲಿ ಗೊತ್ತಾಗುವುದಿಲ್ಲ, ಸಾವಿನ ನಿಖರ ಕಾರಣ ಹೊರಬರುವುದಿಲ್ಲ ಎಂದು ಭಾವಿಸಿದ್ದೆ. ಆದರೆ, ಪೊಲೀಸರು ಇಷ್ಟು ತಾಂತ್ರಿಕವಾಗಿ (ಟೆಕ್ನಿಕಲ್ ಆಗಿ) ಮತ್ತು ಆಳವಾಗಿ (ಡೀಪ್ ಆಗಿ) ತನಿಖೆ ನಡೆಸುತ್ತಾರೆ ಎಂದು ಗೊತ್ತಿರಲಿಲ್ಲ. ಈ ಮಟ್ಟದ ತನಿಖೆಯಾಗುತ್ತದೆ ಎಂದು ತಿಳಿದಿದ್ದರೆ ನಾನು ಕೊಲೆಯೇ ಮಾಡುತ್ತಿರಲಿಲ್ಲ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾನೆ. ಪೊಲೀಸರ ತಾಂತ್ರಿಕ ತನಿಖೆಯು ಆರೋಪಿಯನ್ನು ಕಂಬಿಗಳ ಹಿಂದೆ ತಳ್ಳಲು ಪ್ರಮುಖ ಪಾತ್ರ ವಹಿಸಿದೆ ಎಂದು ಸಾಬೀತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ