
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ಹೇಳಿಕೊಂಡು ಜಮ್ಮು ಕಾಶ್ಮೀರದ ವೈದ್ಯರೊಬ್ಬರಿಗೆ ಜಮೀನು ಕೊಡಿಸುವುದಾಗಿ ನಂಬಿಸಿ 2.70 ಕೋಟಿ ರು. ವಂಚಿಸಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ವಿಜಯನಗರ ಠಾಣೆ ಪೊಲೀಸರು, ಆರೋಪಿ ಎಚ್.ಎನ್.ಸುಜಯೇಂದ್ರ ವಿರುದ್ಧ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದಾರೆ.
ವಿಜಯನಗರದ ಆರ್‌ಪಿಸಿ ಲೇಔಟ್ ನಿವಾಸಿ ಆಗಿರುವ ಆರೋಪಿ ಸುಜಯೇಂದ್ರ ಮಲ್ಲೇಶ್ವರ ಯದುಗಿರಿ ಯತಿರಾಜ ಮಠದ ಭಕ್ತನಾಗಿ ಬಳಿಕ ಮಠದ ಅಭಿವೃದ್ಧಿಗೆ ಧನಸಹಾಯ ಮಾಡುತ್ತಾ ಸ್ವಾಮೀಜಿ ನಂಬಿಕೆ ಗಿಟ್ಟಿಸಿದ್ದ. ಸ್ವಾಮೀಜಿ ಅವರು ದೇಶಾದ್ಯಂತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಈತನನ್ನು ಕರೆದೊಯ್ಯುತ್ತಿದ್ದರು.
ಈ ವೇಳೆ ಪ್ರಭಾವಿ ರಾಜಕಾರಣಿಗಳು, ಉನ್ನತ ಅಧಿಕಾರಿಗಳು, ಸಚಿವರು, ಪ್ರಭಾವಿ ವ್ಯಕ್ತಿಗಳ ಸಂಪರ್ಕ ಬೆಳೆಸುತ್ತಿದ್ದ. ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಇದನ್ನೇ ದಾಳವಾಗಿ ಮಾಡಿಕೊಂಡು ಮಠಕ್ಕೆ ಬರುವ ಭಕ್ತರಿಗೆ ನನಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕವಿದೆ ಎಂದು ಫೋಟೋ ತೋರಿಸಿ ತಾನೂ ಸಹ ಪ್ರಭಾವಿ ಎಂದು ಬಿಂಬಿಸಿಕೊಳ್ಳುತ್ತಿದ್ದ.
ಅದರಂತೆ 2021ನೇ ಸಾಲಿನಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಯದುಗಿರಿ ಯತಿರಾಜ ಮಠದ ಶಾಖೆಗೆ ಹೋಗಿದ್ದಾಗ ಮಠದ ಭಕ್ತ ವೈದ್ಯ ಡಾ.ರಾಜಾ ಲಂಗರ್ ಅವರನ್ನು ಪರಿಚಯಿಸಿಕೊಂಡಿದ್ದ. ಲಂಗರ್ ಅವರು ಕುಟುಂಬ ಸಮೇತ ಬೆಂಗಳೂರಿನ ಮಠಕ್ಕೂ ಬರುತ್ತಿದ್ದರು. ಈ ವೇಳೆ ಆರೋಪಿಯು ನಾನು ಮಠದ ಸೇವೆ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತೇನೆ. ನನಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕವಿದೆ ಎಂದು ಪುಸಲಾಯಿಸಿದ್ದ.
2023ನೇ ಸಾಲಿನಲ್ಲಿ ಡಾ.ರಾಜಾ ಲಂಗರ್ ಬೆಂಗಳೂರಿನ ಯತಿರಾಜ ಮಠಕ್ಕೆ ಬಂದಾಗ, ಮನೆಗೆ ಕೊರೆದೊಯ್ದಿದ್ದ ಆರೋಪಿಯು ಬೆಂಗಳೂರು ಏರ್‌ಪೋರ್ಟ್ ಸಮೀಪ ಮಲ್ಲೇಶ್ವರದ ಯದುಗಿರಿ ಯತಿರಾಜ ಮಠದ ಜಮೀನು ಇದ್ದು, ಆ ಜಮೀನನ್ನು ಹೆರಿಟೇಜ್ ಹೋಮ್ಸ್ ಆಗಿ ಅಭಿವೃದ್ಧಿಪಡಿಸಿ 1.50 ಕೋಟಿ ರು.ಗೆ ಮಾರಾಟ ಮಾಡುತ್ತೇನೆ. ಇದನ್ನು ಮುಂದೆ ಹೆಚ್ಚಿನ ಲಾಭಕ್ಕೆ ಮಾರಬಹುದು ಎಂದಿದ್ದ. ಹೀಗಾಗಿ ನೀವೇ ಖರೀದಿಸಿ ಎಂದು ಪುಸಲಾಯಿಸಿದ್ದ.
ಈತನ ಮಾತು ನಂಬಿದ್ದ ಡಾ.ರಾಜಾ ಲಂಗರ್ 40/60 ವಿಸ್ತೀರ್ಣದ ನಿವೇಶನ ಖರೀದಿಸಲು ನಿರ್ಧರಿಸಿದ್ದರು. ಅದರಂತೆ ಆರೋಪಿ ಮಾಲೀಕನಾಗಿರುವ ಶ್ರೀನಿವಾಸ ಕನ್‌ಸ್ಟ್ರಕ್ಷನ್ ಕಂಪನಿ ಬ್ಯಾಂಕ್ ಖಾತೆಗೆ ಡಾ.ರಾಜಾ ಲಂಗರ್ 1.50 ಕೋಟಿ ರು. ವರ್ಗಾವಣೆ ಮಾಡಿದ್ದರು. ಬಳಿಕ ಆರೋಪಿಯು ನಿವೇಶನ ಕೊಡಿಸದೆ ಸುಮ್ಮನಿದ್ದ. ಕೆಲ ದಿನಗಳ ಬಳಿಕ ಪ್ರಶ್ನೆ ಮಾಡಿದಾಗ ತಾಂತ್ರಿಕ ಕಾರಣಗಳಿಂದ ಸಮಸ್ಯೆಯಾಗಿದೆ ಎಂದು ಹೇಳಿದ್ದ. ಮತ್ತೆ ಕೇಳಿದಾಗ ಹೆಚ್ಚುರಿಯಾಗಿ 1.20 ಕೋಟಿ ರು. ಕೊಡುವಂತೆ ಕೇಳಿದ್ದ. ಇಲ್ಲವಾದರೆ, 1.50 ಕೋಟಿ ರು. ವಾಪಾಸ್ ನೀಡುವುದಿಲ್ಲ ಎಂದು ಹೆದರಿಸಿದ್ದ. ಹೀಗಾಗಿ ಅವರು ಆರೋಪಿ ಕಂಪನಿ ಖಾತೆಗೆ 1.20 ಕೋಟಿ ರು. ವರ್ಗಾಯಿಸಿದ್ದರು.
ಬಳಿಕ ಆರೋಪಿಯು ನಾನು ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಿದ್ದು, ನಿಮಗೆ ಮತ್ತು ನಿಮ್ಮ ತಂದೆ ಉನ್ನತ ಸ್ಥಾನಮಾನ ಕೊಡಿಸುವುದಾಗಿ ಡಾ.ರಾಜಾ ಲಂಗರ್‌ಗೆ ನಂಬಿಸಿದ್ದ. ಕೆಲ ದಿನಗಳ ಬಳಿಕ ನಿವೇಶನ ನೋಂದಣಿ ಮಾಡಿಕೊಡವಂತೆ ಕೇಳಿದಾಗ ನಿವೇಶನ ನೀಡಲು ಸಾಧ್ಯವಿಲ್ಲ. ಹೀಗಾಗಿ ಹಣ ವಾಪಾಸ್ ಕೊಡುವುದಾಗಿ ಹೇಳಿ ಕಾಲ ದೂಡುತ್ತಿದ್ದ. ಇದರಿಂದ ಗಾಬರಿಗೊಂಡ ಡಾ.ರಾಜಾ ಲಂಗರ್, ಮಠದ ಸ್ವಾಮೀಜಿ ಮತ್ತು ಆಡಳಿತಾಧಿಕಾರಿಯನ್ನು ಭೇಟಿಯಾಗಿ ಕೇಳಿದಾಗ, ಅವರು ನಮಗೇನು ಗೊತ್ತಿಲ್ಲ ಎಂದಿದ್ದರು. ಆಗ ರಾಜಾ ಲಂಗರ್ ಈ ಬಗ್ಗೆ ದೂರು ನೀಡುವುದಾಗಿ ಹೇಳಿದಾಗ, ಆರೋಪಿ ಸುಜಯೇಂದ್ರ 2.70 ಕೋಟಿ ರು.ಗೆ 5 ಚೆಕ್ ನೀಡಿದ್ದ. ಬಳಿಕ ಆ ಚೆಕ್‌ಗಳು ಬೌನ್ಸ್ ಆಗಿದ್ದವು. ಬಳಿಕ ರಾಜಾ ಲಂಗರ್ ಅವರು ಆರೋಪಿ ಸುಜಯೇಂದ್ರ, ಮಠದ ಸ್ವಾಮೀಜಿ ಹಾಗೂ ಆಡಳಿತಾಧಿಕಾರಿ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಜಾರ್ಜ್‌ಶಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ಸುಜಯೇಂದ್ರ ವಂಚಿಸುವ ಉದ್ದೇಶದಿಂದಲೇ ಡಾ.ರಾಜಾ ಲಂಗರ್ ಅವರಿಂದ ಹಣ ಪಡೆದಿದ್ದ. ಆರೋಪಿಯು ಯತಿರಾಜಮಠದ ಟ್ರಸ್ಟಿಯಾದ ಬಳಿಕ ಕೇಂದ್ರ ಗೃಹ ಸಚಿವಾಲಯದ ಸೀಲುಗಳು, ರಾಜ್ಯ ಸರ್ಕಾರ ಸೀಲುಗಳನ್ನು ನಕಲು ಮಾಡಿ, ಸರ್ಕಾರದ ಉನ್ನತಾಧಿ ಕಾರಿಯಂತೆ ನಕಲಿ ಲೆಟರ್ ಹೆಡ್‌ಗಳನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಯತಿರಾಜ ಮಠದ ಹೆಸರಿನಲ್ಲಿ ಮಠದ ನಿವೇಶನ ಮತ್ತು ಜಮೀನು ಅಭಿವೃದ್ಧಿಪಡಿಸಿ ಮಾರಾಟ ಮಾಡುವುದಾಗಿ ನಂಬಿಸಿ ಹಲವರಿಗೆ ವಂಚನೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ