ಪೊಲೀಸರಿಂದ 11 ದಿನಗಳ ಕಾಲ ಕಣ್ತಪ್ಪಿಸಿಕೊಂಡಿದ್ದ ಅಭಿನವ ಹಾಲಶ್ರೀ ಬಂಧನದ ಬೆನ್ನಲ್ಲೇ ಮಧ್ಯಂತರ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿದೆ.
ಬೆಂಗಳೂರು (ಸೆ.20): ಉಡುಪಿಯ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚನೆ ಮಾಡಿದ ಚೈತ್ರಾ ಕುಂದಾಪುರ ಗ್ಯಾಂಗ್‌ನ ಎ3 ಆರೋಪಿ ಅಭಿನವ ಹಾಲವೀರಪ್ಪ ಸ್ವಾಮೀಜಿಗೆ ನ್ಯಾಯಾಲಯವು ಜಾಮೀನು ನೀಡುವುದಕ್ಕೆ ನಿರಾಕರಣೆ ಮಾಡಿದೆ. ಇದು ಗಂಭೀರ ಪ್ರಕರಣವಾಗಿದ್ದು, ತನಿಖಾ ವಿಚಾರಣೆ ವೇಳೆ ಜಾಮೀನು ಕೊಡಲಾಗಲ್ಲವೆಂದು 10 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ 3.5 ಕೋಟಿ ರೂ. ಹಾಗೂ ಅಭಿನವ ಹಾಲಶ್ರೀ ಸ್ವಾಮೀಜಿ 1.5 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಚೈತ್ರಾ ಕುಂದಾಪುರ ಅವರು ಬಂಧನವಾದ ವೇಳೆ ಸ್ವಾಮೀಜಿ ಬಂಧನವಾದರೆ ದೊಡ್ಡ ದೊಡ್ಡವರ ಹೆಸರು ಬಯಲಿಗೆ ಬರಲಿದೆ ಎಂದು ಹೇಳಿದ್ದರು. ಇನ್ನು ಟಿಕೆಟ್ ವಂಚನೆ ದೂರು ದಾಖಲಾಗುತ್ತಿದ್ದಂತೆ ಪರಾರಿ ಆಗಿದ್ದ ಅಭಿನವ ಹಾಲಶ್ರೀ ತಮ್ಮ ಹಾಲಸ್ವಾಮಿ ಮಠವನ್ನು ತೊರೆದು ಪೊಲೀಸರ ಕಣ್ತಪ್ಪಿಸಿ 11 ದಿನಗಳ ಕಾಲ ಪರಾರಿ ಆಗಿದ್ದರು. ನಿನ್ನೆ ಮಂಗಳವಾರ ಒಡಿಶಾದ ಕಟಕ್‌ನಲ್ಲಿ ಪೊಲೀಸರು ಬಂಧಿಸಿದ್ದರು. ಅವರನ್ನು ಬೆಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
undefined
ಅಭಿನವ ಹಾಲಶ್ರೀ ಸ್ವಾಮೀಜಿ ರೋಚಕ ಟ್ರಾವೆಲ್ ಹಿಸ್ಟರಿ: 4 ಹೊಸ ಮೊಬೈಲ್, 4 ಸಿಮ್ ಕಾರ್ಡ್, 50 ಲಕ್ಷ ರೂ. ಸಮೇತ ಪರಾರಿ
ಬೆಂಗಳೂರಿನ 19 ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರಾದ ಅಭಿನವ ಹಾಲಶ್ರೀ ಸ್ವಾಮೀಜಿಗೆ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ದೊಡ್ಡ ಪ್ರಕರಣದ ವಿಚಾರಣೆ ವೇಳೆ ಜಾಮೀನು ನೀಡುವುದು ಸೂಕ್ತವಲ್ಲವೆಂದು ತೀರ್ಮಾನಿಸಿದ ನ್ಯಾಯಾಲಯ ಜಾಮೀನು ನೀಡಲೊಪ್ಪದೇ ಸೆ.29ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಜೊತೆಗೆ, ಸ್ವಾಮೀಜಿ ಪರ ವಕೀಲರು ಸಲ್ಲಿಕೆ ಮಾಡಿದ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನೂ ಕೂಡ ಸೆ.29ಕ್ಕೆ ಮುಂದೂಡಿತು.
ಹಾಲಶ್ರೀ - ಚೈತ್ರಾ ಕುಂದಾಪುರ ಮುಖಾಮುಖಿ ವಿಚಾರಣೆ?: ನ್ಯಾಯಾಲಯದಲ್ಲಿ ವಿಚಾರಣೆ ನಡೆದ ನಂತರ ಸಿಸಿಬಿ ಪೊಲೀಸರು ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ವಶಕ್ಕೆ ಪಡೆದುಕೊಂಡು ಸಿಸಿಬಿ ಕಚೇರಿಗೆ ಕರೆದೊಯ್ದರು. ಇಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿ ಅವರನ್ನು ಎಸಿಪಿ ರೀನಾ ಸುವರ್ಣ ಅವರು ವಿಚಾರಣೆ ಮಾಡಲಿದ್ದಾರೆ. ಇನ್ನು ಸ್ವಾಮೀಜಿ ಸಿಕ್ಕಿಬಿದ್ದರೆ ದೊಡ್ಡ ದೊಡ್ಡವರ ಹೆಸರು ಬಯಲಿಗೆ ಬರಲಿದೆ ಎಂದು ಹೇಳಿದ್ದ ಚೈತ್ರಾ ಕುಂದಾಪುರ ಹಾಗೂ ಅಭಿನವ ಹಾಲಶ್ರೀ ಸ್ವಾಮೀಜಿ ಅವರನ್ನು ಮುಖಾಮುಖಿ ಕೂರಿಸಿ ವಿಚಾರಣೆ ಮಾಡುವ ಸಾಧ್ಯತೆಯಿದೆ.