ನಕ್ಷೆ ಉಲ್ಲಂಘಿಸಿದ ಕಟ್ಟಡ ಮಾಲೀಕರಿಗೆ ಕಂಟಕ ಹೊಸ ಮಸೂದೆ ಪಾಸ್!

By Kannadaprabha NewsFirst Published Mar 21, 2020, 10:47 AM IST
Highlights

ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿಗೆ ದಂಡ: ಮಸೂದೆ ಅಂಗೀಕಾರ| ನಿಯಮ ಪಾಲಿಸದ ಕಟ್ಟಡಗಳಿಗೆ ದುಪ್ಪಟ್ಟು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ| ಸಿಎಂ ಬಿಎಸ್‌ವೈ ಪರವಾಗಿ ಸಚಿವ ಬೊಮ್ಮಾಯಿ ಮಂಡನೆ, ಧ್ವನಿಮತದ ಅಂಗೀಕಾರ| ಫೈಬರ್‌ ಕೇಬಲ್‌ಗೆ ಬಾಡಿಗೆ

ವಿಧಾನಸಭೆ(ಮಾ.21): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ನಿಯಮ ಮತ್ತು ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳಿಗೆ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸುವ ‘ಕರ್ನಾಟಕ ನಗರಪಾಲಿಕೆಗಳ (ತಿದ್ದಪಡಿ) ವಿಧೇಯಕ 2020’ ಅನ್ನು ವಿಧಾನಸಭೆಯಲ್ಲಿ ಧ್ವನಿಮತದ ಅಂಗೀಕಾರ ದೊರೆತಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧೇಯಕ ಕುರಿತು ವಿವರಿಸಿದರು. ಈಗಾಗಲೇ ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇತರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸುವ ನಿಯಮ ಇದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಇರಲಿಲ್ಲ. ಇದೀಗ ಈ ನಿಯಮವನ್ನು ಬೆಂಗಳೂರಿಗೂ ಅನ್ವಯಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಆದಾಯ ಬರಲಿದೆ ಎಂದು ಮಾಹಿತಿ ನೀಡಿದರು.

ಕಟ್ಟಡ ನಿಯಮಾವಳಿ, ನಕ್ಷೆ ಉಲ್ಲಂಘಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಟ್ಟಡಗಳ ನಿರ್ಮಾಣವನ್ನು ನಿಯಂತ್ರಿಸುವ ದೃಷ್ಟಿಯಿಂದ ವಿಧೇಯಕ ಜಾರಿ ಮಾಡಲಾಗುತ್ತಿದೆ. ನಿಯಮ ಉಲ್ಲಂಘನೆ ಮಾಡಿರುವ ಕಟ್ಟಡಗಳ ತೆರವುಗೊಳಿಸುವವರೆಗೆ ದಂಡ ಅನ್ವಯವಾಗಲಿದೆ. ಇದಲ್ಲದೇ, ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಕಲಾದ ಆಪ್ಟಿಕಲ್‌ ಫೈಬರ್‌ ಕೇಬಲ್‌ಗಳ ಮೇಲಿನ ಶುಲ್ಕ ಮತ್ತು ವಾರ್ಷಿಕ ಬಾಡಿಗೆಯನ್ನು ಈ ವಿಧೇಯಕದ ಅನ್ವಯ ವಿಧಿಸಲಾಗುತ್ತದೆ. ಈ ಮೊದಲು ವರ್ಷಕ್ಕೊಮ್ಮೆ ಅಥವಾ ತಿಂಗಳ ಬಾಡಿಗೆ ಎಂದು ಇದ್ದ ನಿಯಮವನ್ನು ವರ್ಷಕ್ಕೊಮ್ಮೆ ಮತ್ತು ತಿಂಗಳ ಬಾಡಿಗೆ ಪಾವತಿಸಬೇಕು ಎಂದು ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಸದಸ್ಯ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 75 ಸಾವಿರ ಕಿ.ಮೀ. ಆಪ್ಟಿಕಲ್‌ ಫೈಬರ್‌ ಕೇಬಲ್‌ ಇದೆ. ಇದನ್ನು ನೆಲದಡಿ ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

click me!