ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಸರ್ಕಾರ ಅಸ್ತು!

By Kannadaprabha News  |  First Published Mar 21, 2020, 7:40 AM IST

ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಸರ್ಕಾರ ಅಸ್ತು| ತಡೆ ನೀಡಿದ್ದ ವನ್ಯಜೀವಿ ಮಂಡಳಿಯಿಂದಲೇ ಈಗ ಹಸಿರು ನಿಶಾನೆ| ಪಶ್ಚಿಮಘಟ್ಟದಲ್ಲಿ 2 ಲಕ್ಷ ಮರ ಕಡಿತ: ಪರಿಸರಪ್ರಿಯರ ವಿರೋಧ


ಬೆಂಗಳೂರು(ಮಾ.21): ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ಜನರ ಬೇಡಿಕೆಗೆ ಮಣಿದಿರುವ ರಾಜ್ಯ ಸರ್ಕಾರ, ವನ್ಯಜೀವಿ ಮಂಡಳಿ ಸದಸ್ಯರ ವಿರೋಧದ ನಡುವೆಯೂ ಹುಬ್ಬಳ್ಳಿ-ಅಂಕೋಲ ರೈಲ್ವೆ ಯೋಜನೆಗೆ ಹಸಿರು ನಿಶಾನೆ ತೋರಿದೆ. ಈ ನಿರ್ಧಾರದಿಂದಾಗಿ ರೈಲ್ವೆ ಮಾರ್ಗದ ಅನುಕೂಲ ಪಡೆಯುವವರಿಗೆ ಸಂತಸವಾಗಿದ್ದರೆ, ಪರಿಸರಪ್ರಿಯರು ಪಶ್ಚಿಮಘಟ್ಟದ ದಟ್ಟಕಾನನದಲ್ಲಿ ಎರಡು ಲಕ್ಷ ಮರಗಳ ಹನನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸೋಮವಾರ ನಡೆದ ಹದಿನಾಲ್ಕನೇ ವನ್ಯಜೀವಿ ಮಂಡಳಿ ಸಭೆಯಲ್ಲಿ ಯೋಜನೆ ಜಾರಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Tap to resize

Latest Videos

ಹುಬ್ಬಳ್ಳಿ-ಅಂಕೋಲ ರೈಲ್ವೆ ಯೋಜನೆಗೆ ಮರಗಳನ್ನು ಕಡಿಯುವುದರಿಂದ ಪರಿಸರ ವೈಪರೀತ್ಯಗಳು ಉಂಟಾಗಲಿವೆ. ಈ ರೀತಿಯ ಬೆಳವಣಿಗೆಯಿಂದ ಕೊಡಗು ಮತ್ತು ಕೇರಳ ರಾಜ್ಯದಲ್ಲಿ ಪ್ರವಾಹ ಉಂಟಾಗಿತ್ತು. ಈ ಯೋಜನೆಗೆ ಎರಡು ಲಕ್ಷಕ್ಕೂ ಹೆಚ್ಚು ಮರ ಕಡಿಯಬೇಕಾಗುತ್ತದೆ. ಕೇಂದ್ರ ಸರ್ಕಾರವೂ ಈ ಯೋಜನೆ ಜಾರಿಗೊಳಿಸುವುದು ಸರಿಯಲ್ಲ ಎಂದು ಹೇಳಿದೆ. ಜೊತೆಗೆ, ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ಈ ಯೋಜನೆ ಜಾರಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಆದ್ದರಿಂದ ಯೋಜನೆ ಕೈಬಿಡಬೇಕು ಎಂದು ಮಂಡಳಿ ಸದಸ್ಯರಾದ ಸಂಜಯ್‌ ಗುಬ್ಬಿ, ಮಲ್ಲೇಶಪ್ಪ ಮತ್ತು ಶಿವಪ್ರಕಾಶ್‌ ಆಗ್ರಹಿಸಿದರು. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೂ ದನಿಗೂಡಿಸಿದರು.

ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಕರಾವಳಿ-ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳಾದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಕಾಂಗ್ರೆಸ್‌ ಮುಖಂಡ ಆರ್‌.ವಿ. ದೇಶಪಾಂಡೆ ಮತ್ತು ಸಚಿವ ಶಿವರಾಮ ಹೆಬ್ಬಾರ್‌, ಯೋಜನೆ ಜಾರಿಯಾಗಲೇಬೇಕು. ಇಲ್ಲವಾದಲ್ಲಿ ಈ ಭಾಗದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದರು.

ಹುಬ್ಬಳ್ಳಿ-ಅಂಕೋಲ ರೈಲ್ವೆ ಯೋಜನೆ ಜಾರಿ ಮಾಡಿದಲ್ಲಿ ಈ ಭಾಗದಲ್ಲಿ ಕೈಗಾರಿಕೆಗಳು ಪ್ರಾರಂಭವಾಗಲಿವೆ. ಅದರಿಂದ ಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಜೊತೆಗೆ, ಕರಾವಳಿ ಭಾಗಕ್ಕೆ ರೈಲ್ವೆ ಸಂಪರ್ಕ ಹೆಚ್ಚುತ್ತದೆ. ಆದ್ದರಿಂದ ಯೋಜನೆ ಜಾರಿ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

ಜೊತೆಗೆ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ರಾಜ್ಯದಲ್ಲಿ ಪ್ರಮುಖ ರೈಲು ಯೋಜನೆ. ಹೀಗಾಗಿ ಈ ಯೋಜನೆಯನ್ನು ಕೈಬಿಡುವುದು ಸೂಕ್ತವಲ್ಲ. ಯೋಜನೆ ಜಾರಿ ಮಾಡಿದಲ್ಲಿ ಉತ್ತರ ಕರ್ನಾಟಕದಿಂದ ಕರಾವಳಿ ಭಾಗಕ್ಕೆ ಸಂಪರ್ಕ ಹೆಚ್ಚಾಗಲಿದೆ. ಜನರ ಪ್ರಯಾಣಕ್ಕೆ ಅನುಕೂಲವಾಗುವುದರ ಜೊತೆ ಈ ಭಾಗದ ಅಭಿವೃದ್ಧಿಗೆ ಸಹಾಯವಾಗುತ್ತದೆ. ಆದ್ದರಿಂದ ಯೋಜನೆ ಜಾರಿ ಮಾಡುವುದು ಉತ್ತಮ ಎಂದರು.

ಇದಕ್ಕೆ ಸಭೆಯಲ್ಲಿ ಹಾಜರಿದ್ದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್‌ನಾಯಕ್‌ ಬೆಂಬಲ ವ್ಯಕ್ತಪಡಿಸಿದರು.

ರಾಜಕೀಯ ಮುಖಂಡರು, ಅಧಿಕಾರಿಗಳ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿಗಳು ಯೋಜನೆ ಜಾರಿಮಾಡಲು ಒಪ್ಪಿಗೆ ಸೂಚಿಸಿದರು ಎಂದು ತಿಳಿದುಬಂದಿದೆ.

3 ಬಾರಿ ಕೈಬಿಟ್ಟಯೋಜನೆ

ಹುಬ್ಬಳ್ಳಿ-ಅಂಕೋಲ ರೈಲ್ವೆ ಯೋಜನೆ ಜಾರಿ ಮಾಡುವ ಸಂಬಂಧ ಈ ಹಿಂದೆ ನಡೆದಿದ್ದ ವನ್ಯಜೀವಿ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಮಂಡಳಿ ಸಭೆಯ ಸದಸ್ಯರ ವಿರೋಧದಿಂದಾಗಿ ಮೂರು ಬಾರಿ ಕೈ ಬಿಡಲಾಗಿತ್ತು. ಆದರೆ, ಉತ್ತರ ಕರ್ನಾಟಕದ ಜನ ಪ್ರತಿನಿಧಿಗಳ ಒತ್ತಾಯದಿಂದ ಮತ್ತೆ ಸಭೆ ಕರೆದು ಒಪ್ಪಿಗೆ ಸೂಚಿಸಲಾಗಿದೆ.

2 ದಶಕದಿಂದ ಜಾರಿಯಾಗದೆ ಬಾಕಿ

ಎರಡು ದಶಕಗಳ ಹಿಂದೆ (1997-98) ಕೇಂದ್ರ ಸರ್ಕಾರ ರಾಜ್ಯದ ಉತ್ತರ ಮತ್ತು ಮಧ್ಯ ಭಾಗವನ್ನು ಕರಾವಳಿಗೆ ಸಂಪರ್ಕಿಸುವಂತಹ ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗ ಯೋಜನೆಗೆ ಒಪ್ಪಿಗೆ ನೀಡಿತ್ತು. 164 ಕಿ.ಮೀ. ಉದ್ದದ ಈ ರೈಲು ಯೋಜನೆಗೆ 2000ರಲ್ಲಿ ಆಗಿನ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಶಂಕುಸ್ಥಾಪನೆ ನೆರವೇರಿಸಿದ್ದರು. ಹುಬ್ಬಳ್ಳಿಯಿಂದ ಯಲ್ಲಾಪುರದವರೆಗಿನ ಸುಮಾರು 75 ಕಿ.ಮೀ. ಸಮತಟ್ಟು ಪ್ರದೇಶವಾಗಿದ್ದು, ಯಲ್ಲಾಪುರದಿಂದ ಸುಂಕಸಾಲದವರೆಗಿನ ಮಾರ್ಗ ಘಟ್ಟಪ್ರದೇಶವಿದೆ. ಈ ಮಾರ್ಗದಲ್ಲಿ ಪಶ್ಚಿಮ ಘಟ್ಟವನ್ನು ಹಾದು ಹೋಗಬೇಕಾಗುತ್ತದೆ.

ಉಳಿದಂತೆ ಸುಂಕಸಾಲದಿಂದ ಅಂಕೋಲವರೆಗಿನ ಮಾರ್ಗದ ಅಲ್ಲಲ್ಲಿ ಬೆಟ್ಟಗಳು ಎದುರಾಗುತ್ತವೆ. ಒಟ್ಟಾರೆ ಯೋಜನೆಯ ಶೇ.80 ಭಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾರಿಯಾಗುವುದರಿಂದ ಕಾಡು ಕಡಿಯುವುದು ಅನಿವಾರ್ಯ. ಈ ಯೋಜನೆಗೆ ಕಾರವಾರ, ಯಲ್ಲಾಪುರ ಮತ್ತು ಧಾರವಾಡ ಅರಣ್ಯ ಪ್ರದೇಶದಲ್ಲಿ 595.64 ಹೆಕ್ಟೇರನ್ನು ಬಳಕೆ ಮಾಡಬೇಕಾಗುತ್ತದೆ. ಈಗಾಗಲೇ ಬೇರೆ ಬೇರೆ ಯೋಜನೆಗಳಿಂದ ಕಾಡು ಕಳೆದುಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಇನ್ನಷ್ಟುಕಾಡು ರೈಲ್ವೆ ಯೋಜನೆಯಿಂದ ನಾಶವಾಗುತ್ತದೆ ಎಂದು ಶಿರಸಿಯ ಪರಿಸರ ಸಂರಕ್ಷಣಾ ಕೇಂದ್ರ ಮತ್ತು ಬೆಂಗಳೂರಿನ ‘ಉತ್ತರ ಕನ್ನಡ ವೈಲ್ಡರ್‌ನೆಸ್‌ ಕ್ಲಬ್‌’ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದವು. ನಂತರ ಹಸಿರು ನ್ಯಾಯಮಂಡಳಿ ಒಂದು ಬಾರಿ ಯೋಜನೆಗೆ ತಡೆ ನೀಡಿತ್ತು.

click me!