ಬೆಂಗಳೂರು ಯುಜಿಸಿ ಕಚೇರಿ ಸದ್ದಿಲ್ಲದೆ ದಿಲ್ಲಿಗೆ: ಪ್ರಮುಖ ಉನ್ನತ ಶಿಕ್ಷಣ ಕಚೇರಿ ನಷ್ಟ

By Kannadaprabha NewsFirst Published Jan 20, 2023, 6:42 AM IST
Highlights

ರಾಜ್ಯ ರಾಜಧಾನಿಯಲ್ಲಿದ್ದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಪ್ರಾದೇಶಿಕ ಕಚೇರಿಯನ್ನು ಸದ್ದಿಲ್ಲದೆ ದೆಹಲಿಗೆ ಸ್ಥಳಾಂತರಿಸಲಾಗಿದೆ. ಬೆಂಗಳೂರು ಮಾತ್ರವಲ್ಲದೆ ದೇಶದ ಬೇರೆ ರಾಜ್ಯಗಳಲ್ಲಿದ್ದ ಆರು ಪ್ರಾದೇಶಿಕ ಕಚೇರಿಗಳನ್ನು ಯುಜಿಸಿ ದೆಹಲಿಗೆ ವರ್ಗಾಯಿಸಿಕೊಂಡಿದೆ.

ಬೆಂಗಳೂರು (ಜ.20): ರಾಜ್ಯ ರಾಜಧಾನಿಯಲ್ಲಿದ್ದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಪ್ರಾದೇಶಿಕ ಕಚೇರಿಯನ್ನು ಸದ್ದಿಲ್ಲದೆ ದೆಹಲಿಗೆ ಸ್ಥಳಾಂತರಿಸಲಾಗಿದೆ. ಬೆಂಗಳೂರು ಮಾತ್ರವಲ್ಲದೆ ದೇಶದ ಬೇರೆ ರಾಜ್ಯಗಳಲ್ಲಿದ್ದ ಆರು ಪ್ರಾದೇಶಿಕ ಕಚೇರಿಗಳನ್ನು ಯುಜಿಸಿ ದೆಹಲಿಗೆ ವರ್ಗಾಯಿಸಿಕೊಂಡಿದೆ. ರಾಜ್ಯದಲ್ಲಿ ಬೆಂಗಳೂರು ವಿವಿಯ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿದ್ದ ಯುಜಿಸಿ ಕಚೇರಿಯನ್ನು ಮುಚ್ಚಿ ಕೆಲ ದಿನಗಳ ಹಿಂದೆಯೇ ದೆಹಲಿಗೆ ಸ್ಥಳಾಂತರಿಸಿದೆ. ತನ್ಮೂಲಕ ರಾಜ್ಯವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಮುಖ ಕಚೇರಿಯೊಂದನ್ನು ಕಳೆದುಕೊಂಡಂತಾಗಿದೆ. 

ಇದರಿಂದ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಹೊಸ ಮಾನ್ಯತೆ, ಮಾನ್ಯತೆ ನವೀಕರಣ, ಅನುದಾನ ಸೇರಿದಂತೆ ಪ್ರತಿಯೊಂದು ವಿಚಾರಗಳಿಗೂ ದೆಹಲಿಯ ಕೇಂದ್ರ ಕಚೇರಿಯನ್ನೇ ಸಂಪರ್ಕಿಸುವುದು ಅನಿವಾರ್ಯವಾಗಿದೆ. ಜತೆಗೆ ಯುಜಿಸಿ ಪ್ರಾದೇಶಿಕ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಯುಜಿಸಿ ಕಚೇರಿ ಸ್ಥಳಾಂತರಕ್ಕೆ ಒಂದು ತಿಂಗಳು ಮೊದಲೇ ನೋಟಿಸ್‌ ನೀಡಿ ಆ ಎಲ್ಲ ನೌಕರರನ್ನು ಉದ್ಯೋಗದಿಂದ ಬಿಡುಗಡೆಗೊಳಿಸಲಾಗಿದೆ.

SSC Exam In Kannada: 11,400 ಕೇಂದ್ರ ಸರ್ಕಾರಿ ಹುದ್ದೆಗೆ ಕನ್ನಡದಲ್ಲೂ ಪರೀಕ್ಷೆ

ಯುಜಿಸಿ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ಯುಜಿಸಿಯು ತನ್ನ ಎಲ್ಲಾ ಕಾರ್ಯಚಟುವಟಿಕೆಯನ್ನೂ ಆನ್‌ಲೈನ್‌ ಮೂಲಕವೇ ಕಾಲಮಿತಿಯಲ್ಲಿ ಸರಾಗವಾಗಿ ನಡೆಸುತ್ತಿದೆ. ಹಾಗಾಗಿ ಪ್ರಾದೇಶಿಕ ಕಚೇರಿಗಳ ಅಗತ್ಯವಿಲ್ಲ ಎಂಬುದನ್ನು ಮನಗಂಡು, ಜತೆಗೆ ಅನಗತ್ಯ ವೆಚ್ಚ ಕಡಿಮೆ ಮಾಡುವ ಉದ್ದೇಶಿದಂದ ಎಲ್ಲ ಪ್ರಾದೇಶಿಕ ಕಚೇರಿಗಳನ್ನು ದೆಹಲಿಗೆ ಸ್ಥಳಾಂತರಿಸಲಾಗಿದೆ.

ಯುಜಿಸಿ ಕಚೇರಿ ಎತ್ತಂಗಡಿಗೆ ಸಿದ್ದು ಆಕ್ರೋಶ: ‘ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್‌ ಶಾ ಕರ್ನಾಟಕಕ್ಕೆ ಬಂದ ಪ್ರತಿ ಸಾರಿಯೂ ಕನ್ನಡಿಗರಿಗೆ ಆಘಾತ ಮಾಡಿಯೇ ಬರುತ್ತಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿದ್ದ ಯುಜಿಸಿ ಪ್ರಾದೇಶಿಕ ಕಚೇರಿಯನ್ನು ಸ್ಥಳಾಂತರ ಮಾಡಿ ಕನ್ನಡಿಗರ ಮತ್ತೊಂದು ಹಕ್ಕು ಕಸಿದಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಈ ಬಗ್ಗೆ ಪ್ರತಿಕಾ ಹೇಳಿಕೆ ನೀಡಿರುವ ಅವರು, ‘ಬೆಂಗಳೂರಿನಲ್ಲಿದ್ದ ಯುಜಿಸಿ ಕಚೇರಿಯನ್ನು ದೆಹಲಿಗೆ ಸ್ಥಳಾಂತರಿಸಲಾಗುತ್ತಿದೆ. 

ಇದರಿಂದ ರಾಜ್ಯದ ಮಕ್ಕಳು, ಅಧ್ಯಾಪಕರು, ಕಾಲೇಜು, ವಿವಿಗಳ ಆಡಳಿತ ಮಂಡಳಿಗಳವರು ಸಣ್ಣ-ಪುಟ್ಟಸಮಸ್ಯೆಗಳಿಗೂ ದೆಹಲಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗದ (ಯುಜಿಸಿ) ಕಚೇರಿ ಬೆಂಗಳೂರು ಬಿಟ್ಟು ದೆಹಲಿಗೆ ಹೋಗುತ್ತಿದ್ದರೂ ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಲಿ, ಮುಖ್ಯಮಂತ್ರಿಗಳಾಗಲಿ ಸಣ್ಣ ಪ್ರತಿಭಟನೆಯನ್ನೂ ದಾಖಲಿಸಿಲ್ಲ. ಗುಜರಾತ್‌ ಮೂಲದ ಈ ಜೋಡಿ ರಾಜ್ಯದ ಪ್ರತಿಯೊಂದನ್ನೂ ಕಿತ್ತುಕೊಳ್ಳುತ್ತಿದೆ. 

ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಬಿಜೆಪಿ ಸರ್ಕಾರವು ರಾಜ್ಯದ ಸ್ವಾಭಿಮಾನವನ್ನೇ ದರೋಡೆ ಮಾಡುತ್ತಿದ್ದರೂ ಉಸಿರು ಎತ್ತದೆ ರಾಜ್ಯದ 7 ಕೋಟಿ ಕನ್ನಡಿಗರಿಗೆ ಅವಮಾನ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಅಮಿತ್‌ ಶಾ ಮತ್ತು ನರೇಂದ್ರ ಮೋದಿಯವರಿಗೆ ಕರ್ನಾಟಕ ಎಂಬುದೊಂದು ರಾಜ್ಯವಿದೆ ಎಂದು ನೆನಪಾಗುವುದು ಚುನಾವಣೆಗಳು ಬಂದಾಗ ಅಥವಾ ಕರ್ನಾಟಕದಲ್ಲಿ ಸಂಪತ್ತಿದೆ, ಅದನ್ನು ಲೂಟಿ ಮಾಡುವುದು ಹೇಗೆ ಎಂಬ ಯೋಚನೆ ಬಂದಾಗ ಮಾತ್ರ.

ಸ್ವಿಜರ್‌ಲ್ಯಾಂಡ್‌ ರೀತಿ ಕೊಡಗು, ಚಿಕ್ಕಮಗ್ಳೂರು ಅಭಿವೃದ್ಧಿ: ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ರೈತರು ಬೆಳೆದ ಅಡಿಕೆ, ತೆಂಗು, ಕಬ್ಬು, ಮೆಣಸು, ಕಾಫಿ, ಭತ್ತ ಮುಂತಾದ ಬೆಳೆಗಳಿಗೆ ಬೆಲೆಗಳಿಲ್ಲ. ತೊಗರಿಗೆ ನೆಟೆ ರೋಗ ಬಂದಿದೆ. ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಬಂದು 30000ಕ್ಕೂ ಹೆಚ್ಚು ಜಾನುವಾರುಗಳು ಮರಣ ಹೊಂದಿವೆ. ಸುಮಾರು 18 ಲಕ್ಷ ಲೀಟರ್‌ ಹಾಲು ಉತ್ಪಾದನೆ ಕಡಿಮೆಯಾಗಿದೆ. ಪ್ರತಿ ದಿನ ರೈತರಿಗೆ 6.66 ಕೋಟಿಗಳಷ್ಟು ಆದಾಯ ನಷ್ಟವಾಗುತ್ತಿದೆ. ಮಲೆನಾಡಿನ ಅಡಿಕೆ, ಕಾಫಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟಾದರೂ ಕರ್ನಾಟಕ ಎಂಬ ರಾಜ್ಯ ಇದೆ ಎಂಬ ನೆನಪು ಬಂದಿತ್ತೇ ಎಂದು ಪ್ರಶ್ನಿಸಿದ್ದಾರೆ.

click me!