ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದ ಗುಣ ನಿಯಂತ್ರಣ ಲ್ಯಾಬ್‌ನ ಬೆಂಕಿ ಅವಘಡದ ಬಗ್ಗೆ ಪ್ರತ್ಯೇಕ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಬೆಂಗಳೂರು (ಆ.12): ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದ ಗುಣ ನಿಯಂತ್ರಣ ಲ್ಯಾಬ್‌ನ (Quality Control Lab) ಬೆಂಕಿ ಅವಘಡದ ಬಗ್ಗೆ ಪ್ರತ್ಯೇಕ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಶುಕ್ರವಾರ ರಾತ್ರಿ ಬೆಳಗಾವಿಯಿಂದ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದಂತೆ ಅಲ್ಲಿಂದ ನೇರವಾಗಿ ಗಾಯಾಳುಗಳನ್ನು ದಾಖಲಿಸಿದ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಸುಟ್ಟು ಗಾಯಗೊಂಡವರ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಕ್ಟೋರಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಟ್ರಾಮಾ ಸೆಂಟರ್‌ಗೆ ಎಲ್ಲರನ್ನೂ ಸ್ಥಳಾಂತರ ಮಾಡಿ ಉತ್ತಮ ಚಿಕಿತ್ಸೆ ನೀಡಲು ಸೂಚಿಸಿದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದ ಸಿದ್ದರಾಮಯ್ಯ, ಬೆಂಕಿ ಅವಘಡದ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಿದ್ದಾರೆ.
undefined
ಬಿಬಿಎಂಪಿ ಲ್ಯಾಬ್‌ಗೆ ಬೆಂಕಿ: ಮುಖ್ಯ ಎಂಜಿನಿಯರ್ ಸೇರಿ 9 ಮಂದಿ ಗಂಭೀರ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವಘಡ ನಡೆದ ಸ್ಥಳದ ಮೇಲ್ಭಾಗದಲ್ಲಿ ಅಧಿಕಾರಿಗಳು ಸಭೆ ನಡೆಸುತ್ತಿದ್ದರು. ಅಪರೇಟರ್‌ಗಳಾದ ಸುರೇಶ್ ಮತ್ತು ಆನಂದ್ ಪರೀಕ್ಷೆ ನಡೆಸುವಾಗ ಬೆಂಕಿ ಹತ್ತಿಕೊಂಡಿದೆ. ತಕ್ಷಣ ಸುರೇಶ್ ಮತ್ತು ಆನಂದ್ ಹೊರ ಓಡಿ ಬಂದಿದ್ದು, ಅವರಿಗೆ ಯಾವುದೇ ತೊಂದರೆ ಆಗಿಲ್ಲ. ಇನ್ನು ಮೇಲ್ಭಾಗದಲ್ಲಿ ಸಭೆ ನಡೆಸುತ್ತಿದ್ದ ಅಧಿಕಾರಿ ಸಿಬ್ಬಂದಿಗೆ ಹೊಗೆಯಿಂದ ಉಸಿರಾಟ ಸಮಸ್ಯೆ ಆಗಿದೆ. ಹೊರ ಬರುವುದಕ್ಕೆ ಪ್ರಯತ್ನಿಸಿದಾಗ ಬೆಂಕಿಯಿಂದ ಸುಟ್ಟು ಗಾಯಗಳಾಗಿವೆ ಎಂದು ವಿವರಿಸಿದರು.
ಕೆಲವರಿಗೆ ಶೇ.35ರಷ್ಟು, ಮತ್ತಷ್ಟುಮಂದಿಗೆ ಶೇ.25ರಷ್ಟುಸುಟ್ಟಿದೆ. ಮುಂದಿನ 48 ಗಂಟೆಯ ವರೆಗೆ ರೋಗಿಯ ಆರೋಗ್ಯ ಸ್ಥಿತಿ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸಾಮಾನ್ಯವಾಗಿ ಶೇ.35ಕ್ಕಿಂತ ಕಡಿಮೆ ಸುಟ್ಟಗಾಯಗಳಾದರೆ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಎಲ್ಲರನ್ನೂ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡುವಂತೆ ವೈದ್ಯರಿಗೆ ಸೂಚಿಸಿ ಉತ್ತಮ ಚಿಕಿತ್ಸೆ ಕೊಡುವಂತೆ ನಿರ್ದೇಶಿಸಲಾಗಿದೆ. ಕಣ್ಣುಗಳಿಗೆ ಯಾವುದೇ ಸಮಸ್ಯೆ ಆಗಿಲ್ಲ. ಮುಖ ಮತ್ತು ಕೈಗಳು ಸುಟ್ಟಿದೆ. ಎಲ್ಲರೂ ಪ್ರಾಣಾಪಾಯದಿಂದ ಹೊರ ಬರಲಿದ್ದಾರೆ ಎಂಬ ನಂಬಿಕೆ ಇದೆ. ಅದಷ್ಟುಬೇಗ ಎಲ್ಲರೂ ಗುಣಮುಖರಾಗಲಿ ಎಂದರು.
ಬೆಂಕಿ ಅವಘಡದಲ್ಲಿ ಸುಟ್ಟಿಗಾಯವಾಗಿರುವ ಅಧಿಕಾರಿ, ಸಿಬ್ಬಂದಿಗೆ ಅತ್ಯುತ್ತಮ ಚಿಕಿತ್ಸೆ ನೀಡುವುದು ನಮ್ಮ ಮೊದಲ ಆದ್ಯತೆ ಆಗಿದೆ. ಉಳಿದಂತೆ ಮೂರು ವಿಧವಾದ ತನಿಖೆ ಪ್ರತ್ಯೇಕವಾಗಿ ನಡೆಯಲಿದೆ.
-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಕಮಿಷನ್ ಆರೋಪ ಬೆನ್ನಲ್ಲೇ ಬಿಬಿಎಂಪಿ ಅಗ್ನಿ ದುರಂತ, ಬಿಜೆಪಿ VS ಕಾಂಗ್ರೆಸ್ ಜಟಾಪಟಿ ಶುರು
ಘಟನಾ ಸ್ಥಳಕ್ಕೆ ಭೇಟಿ: ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಗುಣ ನಿಯಂತ್ರಣ ಲ್ಯಾಬ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ ಸ್ಥಳಕ್ಕೆ ತಡರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅವಘಡದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಅವಘಡ ಸ್ಥಳಕ್ಕೆ ಸಚಿವರ ಭೇಟಿ: ಬಿಬಿಎಂಪಿಯ ಕೇಂದ್ರ ಕಚೇರಿಯ ಆವರಣದಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಡ ಸ್ಥಳಕ್ಕೆ ಇಂಧನ ಸಚಿವ ಕೆ.ಜೆ.ಜಾಜ್‌ರ್ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಸಚಿವ ಕೆ.ಜೆ.ಜಾಜ್‌ರ್, ಬಿಬಿಎಂಪಿಯ ಕಾಮಗಾರಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದೀಗ ಗುಣ ನಿಯಂತ್ರಣ ಕೊಠಡಿಗೆ ಬೆಂಕಿ ಬಿದ್ದಿರುವ ಬಗ್ಗೆ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ವರದಿ ಬಂದ ಮೇಲೆ ನಿಜಾಂಶ ತಿಳಿಯಲಿದೆ. ಅಲ್ಲಿಯವರೆಗೆ ಕಾದು ನೋಡಬೇಕಾಗಲಿದೆ ಎಂದರು.
30-40% ಸುಟ್ಟಗಾಯ: ಅವಘಡದಲ್ಲಿ 9 ಮಂದಿಗೂ ಸುಮಾರು 30ರಿಂದ 40 ರಷ್ಟುದೇಹದ ಭಾಗ ಸುಟ್ಟಿದೆ. ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪರಿಸ್ಥಿತಿಯ ಬಗ್ಗೆ ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ರಮೇಶ್ ಕೃಷ್ಣ ಮಾಹಿತಿ ನೀಡಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟಗಾಯಕ್ಕೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯ ಬಿದ್ದರೆ ಹೆಚ್ಚಿನ ಚಿಕಿತ್ಸೆ ಹೊರ ರಾಜ್ಯ ಅಥವಾ ಹೊರ ರಾಜ್ಯಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಸರ್ಕಾರ ಸಿದ್ಧವಾಗಿದೆ.
-ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ.
ಬೆಂಕಿ ಅವಘಡಕ್ಕೆ ಕಾರಣ ಏನು ಎಂಬುವುದರ ಬಗ್ಗೆ ತನಿಖೆ ನಡೆಯಲಿದೆ. ಈಗಲೇ ಏನು ಹೇಳುವುದಕ್ಕೆ ಸಾಧ್ಯವಿಲ್ಲ. ಸುಟ್ಟು ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸುವುದು ನಮ್ಮ ಮೊದಲ ಪ್ರಾಶಸ್ತ್ಯ.
-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿ
ಪಾಲಿಕೆಯಲ್ಲಿ ಹಿಂದೆ ನಡೆದ ಅಗ್ನಿ ಅವಘಡ: 2011ರ ನವೆಂಬರ್ 19ರಂದು ಪಾಲಿಕೆಯ ಕೇಂದ್ರ ಕಚೇರಿಯ ಅನೆಕ್ಸ್ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಸಾವಿರಾರು ಕೋಟಿ ಹಗರಣದ ಮಹತ್ವದ ದಾಖಲೆಗಳೆಲ್ಲ ಸುಟ್ಟು ಭಸ್ಮವಾಗಿತ್ತು.
*2022ರ ಏಪ್ರಿಲ್ 5ರಂದು ಯಲಹಂಕ ವಲಯದ ಬ್ಯಾಟರಾನಯನಪುರದಲ್ಲಿ ಇರುವ ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಪೀಠೋಪಕರಣಗಳು ಸುಟ್ಟು ಭಸ್ಮವಾಗಿತ್ತು ಆದರೆ, ಕಡತಗಳಿಗೆ ಯಾವುದೇ ಹಾನಿಯಾಗಿರಲಿಲ್ಲ.