Ballari: ಅಸೆಂಬ್ಲಿಯಲ್ಲಿ ಬಳ್ಳಾರಿ ವಿಮ್ಸ್‌ ಗದ್ದಲ

By Kannadaprabha NewsFirst Published Sep 16, 2022, 5:25 AM IST
Highlights
  • ಅಸೆಂಬ್ಲಿಯಲ್ಲಿ ಬಳ್ಳಾರಿ ವಿಮ್ಸ್‌ ಗದ್ದಲ
  •  3 ರೋಗಿಗಳ ಸಾವು ಸರ್ಕಾರಿ ಪ್ರಾಯೋಜಿತ ಕೊಲೆ: ಕಾಂಗ್ರೆಸ್‌
  • ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಕ್ಕೆ ಸರ್ಕಾರ ಗರಂ
  • ತೀವ್ರ ವಾಗ್ವಾದ

ವಿಧಾನಸಭೆ (ಸೆ.16) : ಬಳ್ಳಾರಿ ಜಿಲ್ಲೆಯ ವಿಮ್ಸ್‌ ಆಸ್ಪತ್ರೆಯಲ್ಲಿ ವಿದ್ಯುತ್‌ ಕಡಿತವಾದಾಗ ವೆಂಟಿಲೇಟರ್‌ನಲ್ಲಿದ್ದ ಮೂರು ಮಂದಿ ರೋಗಿಗಳು ಮೃತಪಟ್ಟಿರುವುದಕ್ಕೆ ‘ಸರ್ಕಾರವೇ ಕಾರಣ, ಇದು ಸರ್ಕಾರದ ಪ್ರಾಯೋಜಿತ ಕೊಲೆ’ ಎಂದು ಪ್ರತಿಪಕ್ಷ ಕಾಂಗ್ರೆಸ್‌ ತಾನು ನೀಡಿದ್ದ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದು, ಸದನದಲ್ಲಿ ಗುರುವಾರ ಆಡಳಿತ ಹಾಗೂ ವಿರೋಧಪಕ್ಷದ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

 

ಬಳ್ಳಾರಿ: ವಿಮ್ಸ್‌ನಲ್ಲಿ ಕರೆಂಟ್‌ ಪ್ರಾಬ್ಲಮ್‌ಗೆ ಎರಡು ಜೀವಗಳು ಬಲಿ, ಈ ಸಾವಿಗೆ ಹೊಣೆ ಯಾರು?

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah), ಬಳ್ಳಾರಿ ವಿಮ್ಸ್‌ ಆಸ್ಪತ್ರೆ(Ballari VIMS Hospital)ಯಲ್ಲಿ ವಿದ್ಯುತ್‌ ಕೈಕೊಟ್ಟು, ಜನರೇಟರ್‌ಗಳು ಕೆಲಸ ಮಾಡದ ಹಿನ್ನೆಲೆಯಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಮೃತರಿಗೆ ತಲಾ 25 ಲಕ್ಷ ರು. ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ, ‘ಸಿದ್ದರಾಮಯ್ಯ ಅವರೇ ಸರ್ಕಾರದ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ, ಪರವಾಗಿಲ್ಲ. ಆದರೆ, ಸ್ಪೀಕರ್‌ಗೆ ನೀಡಿರುವ ನೋಟಿಸ್‌ನಲ್ಲಿ ‘ಸರ್ಕಾರದ ಪ್ರಾಯೋಜಿತ ಕೊಲೆ’ ಎಂದು ಆರೋಪಿಸಲಾಗಿದೆ. ಇದು ಹಿರಿಯ ಹಾಗೂ ಅನುಭವಿಗಳಾದ ನೀವು ಬಳಸುವ ಭಾಷೆಯಲ್ಲ. ನಿಮ್ಮ ಸಿಬ್ಬಂದಿ ಎಡವಟ್ಟಿನಿಂದ ಆಗಿದ್ದರೆ ಅದನ್ನು ಒಪ್ಪಿಕೊಂಡು ಹೇಳಿಕೆ ಹಿಂಪಡೆಯಿರಿ’ ಎಂದು ಆಗ್ರಹಿಸಿದರು. ಇದಕ್ಕೆ ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ಕೂಡ ದನಿಗೂಡಿಸಿದರು.

ಸಿದ್ದರಾಮಯ್ಯ, ಕೆ.ಜೆ. ಜಾಜ್‌ರ್‍, ಜಮೀರ್‌ ಅಹಮದ್‌ಖಾನ್‌ ಸೇರಿದಂತೆ ಕಾಂಗ್ರೆಸ್‌ನ ಸದಸ್ಯರು ಎದ್ದು ನಿಂತು ಇದು ಸರ್ಕಾರದ ನಿರ್ಲಕ್ಷ್ಯದಿಂದಲೇ ಆಗಿರುವುದು. ಹೀಗಾಗಿ ನೋಟಿಸ್‌ನಲ್ಲಿ ಏನೂ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜೆ.ಸಿ. ಮಾಧುಸ್ವಾಮಿ, ನಿಮ್ಮ ಅವಧಿಯಲ್ಲಿ ಆಗಿರುವ ಸಾವುಗಳು ನೀವು ಮಾಡಿದ ಕೊಲೆಗಳು ಎಂದು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ಉಂಟಾಯಿತು.

ವೆಂಟಿಲೇಟರ್‌ ವೈಫಲ್ಯದಿಂದ ಸಾವಾಗಿಲ್ಲ- ಶ್ರೀರಾಮುಲು:

ಸ್ಪಷ್ಟನೆ ನೀಡಿದ ಸಚಿವ ಶ್ರೀರಾಮುಲು, ವೆಂಟಿಲೇಟರ್‌ ವೈಫಲ್ಯದಿಂದ ಈ ಸಾವುಗಳು ಆಗಿಲ್ಲ. ಒಬ್ಬರು ತೀವ್ರ ಕಿಡ್ನಿ ವೈಫಲ್ಯದಿಂದ ಮೃತಪಟ್ಟರೆ, ಮತ್ತೊಬ್ಬರು ಹಾವು ಕಚ್ಚಿ ಮೃತಪಟ್ಟಿದ್ದಾರೆ. ಮತ್ತೊಬ್ಬರು 55 ವರ್ಷದ ಮಹಿಳೆ ಉಸಿರಾಟ ತೊಂದರೆಯಿಂದ ಸಾವನ್ನಪ್ಪಿದ್ದಾರೆ. ವಿದ್ಯುತ್‌ ಕಡಿತ ಉಂಟಾಗಿದ್ದಾಗ ಜನರೇಟರ್‌ ವ್ಯವಸ್ಥೆ ಇತ್ತು. ಜತೆಗೆ ಯುಪಿಎಸ್‌ ವ್ಯವಸ್ಥೆಯೂ ಇತ್ತು. ಹೀಗಾಗಿ ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣವಲ್ಲ ಎಂದು ಸಮರ್ಥಿಸಿಕೊಂಡರು.

ಸರ್ಕಾರವೇ ಹೊಣೆ- ಸಿದ್ದು:

ಸಿದ್ದರಾಮಯ್ಯ ಮಾತನಾಡಿ, ಶ್ರೀರಾಮುಲು ಅವರೇ ನೀವು ವೈದ್ಯಕೀಯ ಅಧೀಕ್ಷಕರು ಹೇಳಿದ್ದನ್ನು ಹೇಳಬೇಡಿ. ವಿದ್ಯುತ್‌ ಕಡಿತದಿಂದ ವೆಂಟಿಲೇಟರ್‌ ವಿಫಲವಾಗಿಯೇ ಮೃತಪಟ್ಟಿದ್ದಾರೆ. ಈ ವೇಳೆ ಜನರೇಟರ್‌ ಕೂಡ ಕೆಲಸ ಮಾಡಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಜತೆಗೆ ಕೂಡಲೇ ಮೃತರಿಗೆ ಪರಿಹಾರ ನೀಡಿ ಎಂದು ಒತ್ತಾಯ ಮಾಡಿದರು.

 

ಬಳ್ಳಾರಿ: ತುತ್ತಿನ ಚೀಲ ತುಂಬಿಸಿಕೊಳ್ಳಲು ಹೋದವರು ಜಲಸಮಾಧಿ

ನಿರ್ಲಕ್ಷ್ಯವಿದ್ದರೆ ಪರಿಹಾರ- ಮಾಧುಸ್ವಾಮಿ:

ಈ ವೇಳೆ ಸಚಿವ ಮಾಧುಸ್ವಾಮಿ ಮಾತನಾಡಿ, ಈ ಬಗ್ಗೆ ತನಿಖೆ ನಡೆಸುತ್ತೇವೆ. ಒಂದು ವೇಳೆ ಅಧಿಕಾರಿಗಳ ನಿರ್ಲಕ್ಷ್ಯ, ಅಜಾಗರೂಕತೆಯಿಂದ ಸಾವಾಗಿದ್ದರೆ ಪರಿಹಾರ ನೀಡಲೂ ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿ ಚರ್ಚೆಗೆ ತೆರೆ ಎಳೆದರು.

click me!