
ಬೆಳಗಾವಿ (ಡಿ.11): ಯತೀಂದ್ರ ಸಿದ್ದರಾಮಯ್ಯ ಅವರು ರಾಜ್ಯದ ನಾಯಕತ್ವದಲ್ಲಿ (ಸಿಎಂ ಸ್ಥಾನ) ಯಾವುದೇ ಬದಲಾವಣೆ ಇಲ್ಲ, ಹೈಕಮಾಂಡ್ ಕ್ಲಿಯರ್ ಆಗಿ ಹೇಳಿದೆ ಎಂದಿದ್ದಾರೆ. ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 'ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯೆ ಕೊಡಲಿ' ಎಂದು ಹೇಳುವ ಮೂಲಕ ಸಿಎಂ ಪುತ್ರನ ಹೇಳಿಕೆಗೆ ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಯತೀಂದ್ರ ಸಿದ್ದರಾಮಯ್ಯ, 'ರಾಜ್ಯದಲ್ಲಿ ನಾಯಕತ್ವದ ವಿಚಾರದಲ್ಲಿ ಯಾವುದೇ ಜಗಳ ಇಲ್ಲ. ಸಿಎಂ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಕ್ಲಿಯರ್ ಆಗಿ ಹೇಳಿದೆ' ಎಂದು ಘೋಷಿಸುವ ಮೂಲಕ ನಾಯಕತ್ವದ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಅಧಿವೇಶನ ಆರಂಭವಾದಾಗಿನಿಂದ ಇದು ಮೂರನೇ ಬಾರಿ ಯತೀಂದ್ರ ಅವರು ತಮ್ಮ ತಂದೆ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುವುದನ್ನು ಖಚಿತಪಡಿಸುತ್ತಿದ್ದಾರೆ. ಹಿಂದಿನ ಎರಡು ಬಾರಿಯ ಹೇಳಿಕೆಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿ.ಕೆ.ಶಿ) ಅವರು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಈ ಬಾರಿ ಡಿ.ಕೆ. ಶಿವಕುಮಾರ್ ಅವರು ಮೌನ ಮುರಿದಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ, ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸುದ್ದಿಗೋಷ್ಠಿಯ ನಂತರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಅಧಿಕಾರ ಹಂಚಿಕೆ ಕುರಿತು ಚರ್ಚೆ ಇಲ್ಲ ಎಂಬ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ 'ಈ ಕುರಿತು ಸಿಎಂ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯೆ ಕೊಡಲಿ' ಎಂದು ಹೇಳುವ ಮೂಲಕ ಯತೀಂದ್ರ ಅವರ ಹೇಳಿಕೆಯಿಂದ ದೂರ ಉಳಿದರು. ಮತ್ತೆ ಯಾವ ಪ್ರಶ್ನೆಗಳಿಗೂ ಉತ್ತರಿಸದೇ ಮಾಧ್ಯಮಗಳ ಕ್ಯಾಮೆರಾದಿಂದ ಸಿಟ್ಟಿನಿಂದಲೇ ಹೊರನಡೆದರು. ರಾಜ್ಯದ ರಾಜಕಾರಣದಲ್ಲಿ ಅಧಿಕಾರ ಹಂಚಿಕೆಯ ಸೂಕ್ಷ್ಮತೆಯನ್ನು ಕಾಯ್ದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಯತೀಂದ್ರ ಅವರ ಪುನರಾವರ್ತಿತ ಹೇಳಿಕೆಗಳು ಡಿ.ಕೆ.ಶಿ ಬಣದಲ್ಲಿ ಅಸಮಾಧಾನವನ್ನು ಹೆಚ್ಚುವಂತೆ ಮಾಡಿದೆ.
ಇದೇ ವಿಚಾರವಾಗಿ ಸುವರ್ಣಸೌಧದಲ್ಲಿ ಮಾತನಾಡಿದ ಸಚಿವ ಬೈರತಿ ಸುರೇಶ್ ಅವರು, ನಾಯಕತ್ವದ ಗೊಂದಲವನ್ನು ತಳ್ಳಿಹಾಕಿದರು. 'ಯಾವ ಚರ್ಚೆನೂ ಇಲ್ಲ. ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ಏನು ಹೇಳುತ್ತೋ ಅದನ್ನು ಫಾಲೋ ಮಾಡುತ್ತೇವೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಸಿಎಂ ಕೂಡ ಹೇಳಿದ್ದಾರೆ' ಎಂದು ತಿಳಿಸಿದರು. ಇದು ಗಾಂಧಿ ಕುಟುಂಬದ ನಿರ್ಧಾರವೇ ಅಂತಿಮ ಎಂಬುದನ್ನು ಸೂಚಿಸುತ್ತದೆ.
ಆದರೆ, ಸಿಎಂ ಬಣದ ಹೇಳಿಕೆಗಳ ಬಗ್ಗೆ ಡಿಸಿಎಂ ಡಿ.ಕೆ.ಶಿ ಬಣದ ಶಾಸಕ ಇಕ್ಬಾಲ್ ಹುಸೇನ್ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯತೀಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಯತೀಂದ್ರ ಹೇಳಿಕೆ ಬಗ್ಗೆ ಗೊತ್ತಿಲ್ಲ, ನೋಡ್ತೀನಿ. ನಾವು ಏನು ಮಾತಾಡಿದರೂ ನೋಟಿಸ್ ಕೊಡುತ್ತಾರೆ. ನಾವು ಮಾತಾಡಿದರೆ ಬಲಾತ್ಕಾರ, ಅವರು ಮಾತಾಡಿದರೆ ಚಮತ್ಕಾರ' ಎಂದು ಹೇಳುವ ಮೂಲಕ ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ. 'ನಮ್ಮ ವರಿಷ್ಠರು ಅಷ್ಟು ವೀಕ್ ಇಲ್ಲ, ಬಲಿಷ್ಠವಾಗಿದ್ದಾರೆ. ಹೈಕಮಾಂಡ್ ಎಲ್ಲದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಯತೀಂದ್ರ ಹೇಳಿಕೆ ಹಿಂದೆ ಯಾರಿದ್ದಾರೆ ಗೊತ್ತಿಲ್ಲ. ಅವರು ಪದೇ ಪದೇ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ನಮಗೆ ಹೇಳಿಕೆ ಕೊಡಬೇಡಿ ಅಂತಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ ಎಂದು ಸಿಎಂ ಪುತ್ರ ಯತೀಂದ್ರ ಪದೇ ಪದೇ ಹೇಳುತ್ತಿರುವುದು ಮತ್ತು ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವುದು, ಹಾಗೂ ಶಾಸಕರು ಅಸಮಾಧಾನ ಹೊರಹಾಕಿರುವುದು, ಬೆಳಗಾವಿ ಅಧಿವೇಶನದ ನಡುವೆಯೂ ಅಧಿಕಾರ ಹಂಚಿಕೆ ಮತ್ತು ನಾಯಕತ್ವದ ಕುರಿತಾದ ಆಂತರಿಕ ಗೊಂದಲ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನು ಸಾಬೀತುಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ