ಪೊಲೀಸ್ ಠಾಣೆಗೆ ಎಂದಿನಂತೆ ಕರ್ತವ್ಯಕ್ಕೆ ಬಂದ ಪೊಲೀಸ್ ಪೇದೆಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಬೆಳಗಾವಿ (ಜು.03): ಪೊಲೀಸ್ ಠಾಣೆಗೆ ಎಂದಿನಂತೆ ಬೆಳಗ್ಗೆ ಕರ್ತವ್ಯಕ್ಕೆ ಬಂದ ಪೊಲೀಸ್ ಪೇದೆ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು, ಸಾವನ್ನಪ್ಪಿರುವ ಘಟನೆ ಬೆಳಗಾವಿ ಮಹಾನಗರದ ಕಾಕತಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದ 29 ವರ್ಷ ವಯಸ್ಸಿನ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ಪೊಲೀಸ್ ಪೇದೆಯನ್ನು ಮೆಹಬೂಬ್ ರಾಜಮಹ್ಮದ್ ರೇಶ್ಮಿ (29) ಆಗಿದ್ದಾರೆ. ಎಂದಿನಂತೆ ಸೋಮವಾರ ಬೆಳಗ್ಗೆಯೂ ಕರ್ತವ್ಯ ನಿರ್ವಹಿಸಲು ಕಾಕತಿ ಪೊಲೀಸ್ ಠಾಣೆಗೆ ಬಂದಿದ್ದ ಮೆಹಬೂಬ್ ರೇಶ್ಮಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಮನೆಗೆ ತೆರಳಿ ಕೆಲಹೊತ್ತು ವಿಶ್ರಾಂತಿ ಪಡೆದಿದ್ದಾರೆ. ಇನ್ನು ತಾನು 29 ವರ್ಷದ ಯುವಕನಾಗಿದ್ದರಿಂದ ಹೃದಯಾಘಾತ ಸಂಭವಿಸುತ್ತಿದೆ ಎಂಬ ಅರಿವೂ ಇರಲಿಲ್ಲ. ಆದರೆ, ಮನೆಯಲ್ಲಿ ವಿಶ್ರಾಂತಿ ಪಡೆದರೂ ನೋವು ಕಡಿಮೆ ಆಗಿಲಿಲ್ಲ. ಅದರ ಬದಲಾಗಿ, ಎದೆ ನೋವು ಹೆಚ್ಚಾಗಿದೆ.
ಜುಲೈ 18ರಿಂದ ಸಿಇಟಿ ದಾಖಲಾತಿ ಪರಿಶೀಲನೆ: ಈ ದಾಖಲೆ ತರುವುದು ಕಡ್ಡಾಯ
ಆಸ್ಪತ್ರೆಗೆ ದಾಖಲಿಸುವ ಮಾರ್ಗದಲ್ಲೇ ಸಾವು: ಇನ್ನು ಎದೆನೋವು ಹೆಚ್ಚಾದ ಕುಟುಂಬ ಸದಸ್ಯರು ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣವೇ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಪೇದೆ ಸಾವನ್ನಪ್ಪಿದ್ದಾರೆ. ಇವರ ಪತ್ನಿ ಕೂಡ ಕಾಕತಿ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರರೊಂದಿಗೆ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದ ಪೊಲೀಸ್ ಕುಟುಂಬಕ್ಕೆ ಗಂಡನ ಅಗಲಿಕೆಯಿಂದ ಬರಸಿಡಿಲು ಬಡಿದಂತಾಗಿದೆ. ಮೆಹಬೂಬ್ ನಿಧನಕ್ಕೆ ಡಿಸಿಪಿ, ಎಸಿಪಿಗಳು ಸೇರಿ ಮಹಾನಗರ ಪೊಲೀಸರ ಕಂಬನಿ ಮಿಡಿದಿದ್ದಾರೆ.
ಕುಡಿದ ಮತ್ತಿನಲ್ಲಿ ಲಾರಿಗೆ ಗುದ್ದಿದ ಬೈಕ್: ಮೂವರಿಗೆ ಗಂಭೀರ ಗಾಯ: ಬೆಳಗಾವಿ (ಜು.03): ಬೈಕ್ ಹಾಗೂ ಈಚರ್ ಲಾರಿ ನಡುವೆ ಅಪಘಾತ ಸಂಭವಿಸಿ ಬೈಕ್ ಮೇಲಿದ್ದ ಮೂವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ಬೈಕ್ ಸವಾರರು ಐಚರ್ ಲಾರಿಗೆ ಗುದ್ದಿದ್ದಾರೆ. ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಬೆಳಕೂಡ ಗೇಟ್ ಬಳಿ ಘಟನೆ ನಡೆದಿದೆ. ನಿಪ್ಪಾಣಿ- ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಬೈಕ್ ಮೇಲಿದ್ದ ಮೂವರಿಗೂ ಗಂಭೀರ ಗಾಯಗಳಾಗಿವೆ. ಕುತುಬು ಮುಲ್ತಾನಿ, ದಸ್ತಗೀರ್ ಮುಲ್ತಾನಿ ಹಾಗೂ ಶ್ರೀಕಾಂತ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.
BENGALURU: ಡ್ಯಾನ್ಸ್ ವಿಚಾರಕ್ಕೆ ಕಾಲೇಜಿನಲ್ಲಿ ಗಲಾಟೆ: ಪಿಯು ವಿದ್ಯಾರ್ಥಿಯ ಬರ್ಬರ ಕೊಲೆ
ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನೆ: ಇನ್ನು ಗಾಯಾಳುಗಳನ್ನು ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳಿ ನಿವಾಸಿಗಳು ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಗಾಯಾಳುಗಳನ್ನು ಕೂಡಲೇ ಸ್ಥಳೀಯರು ಚಿಕ್ಕೋಡಿ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.