ಮಹಿಳೆಯರು ತಮ್ಮ ಪತಿಯಿಂದ ವಿವಿಧ ರೀತಿಯ ಹಲ್ಲೆಗೆ ಒಳಪಡುತ್ತಿದ್ದಾರೆ. ಇದರಲ್ಲಿ ಶೇ. 7ರಷ್ಟು ಮಹಿಳೆಯರಿಗೆ ಕಣ್ಣಿನ ಗಾಯ, ಕೈ ಕಾಲು ಮುರಿತ, ಬರೆಯಂತಹ ಹಲ್ಲೆಗೊಳಗಾಗಿದ್ದಾರೆ. ಶೇ. 6ರಷ್ಟು ಮಹಿಳೆಯರಿಗೆ ತೀವ್ರ ಥರದ ಗಾಯ, ಮೂಳೆ ಮುರಿತ, ಹಲ್ಲು ಮುರಿತಕ್ಕೆ ಒಳಗಾಗಿದ್ದಾರೆ.
ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಮೇ.12): ನಿಜಕ್ಕೂ ಇದು ಗಂಭೀರವಾಗಿ ಯೋಚಿಸಲೇಬೇಕಾದ ವಿಚಾರ. ಯಾಕಂದ್ರೆ ಈ ವಿಷಯ ಕರ್ನಾಟಕದ ಪಾಲಿಗೆ ಇದು ಕುಖ್ಯಾತಿ. ವಿಷಯ ಏನಪ್ಪಾ ಅಂದ್ರೆ ಹೆಂಡತಿ (Wife) ಮೇಲೆ ಹಲ್ಲೆ (Beating) ನಡೆಸೋ ವಿಚಾರದಲ್ಲಿ ಕರ್ನಾಟಕ ನಂಬರ್ 1 ಸ್ಥಾನ ಅಲಂಕರಿಸಿದೆ. ಇದನ್ನ ನಾವು ಹೇಳ್ತಿಲ್ಲ. NFHS ಅಂದರೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯಲ್ಲಿ (National Family Health Survey) ಈ ಕರಾಳ ಸತ್ಯ ಹೊರಬಿದ್ದಿದೆ. ಬಿಹಾರವನ್ನು (Bihar) ಹಿಂದಿಕ್ಕಿ ಕರ್ನಾಟಕ (Karnataka) ನಂಬರ್ 1 ಸ್ಥಾನ ಪಡೆದಿದೆ. ಹತ್ತು ರಾಜ್ಯಗಳು ರಾಷ್ಟ್ರೀಯ ಸರಾಸರಿ ಶೇ. 32 ಕ್ಕಿಂತ ಹೆಚ್ಚಿವೆ.
NFHS ಕೊಟ್ಟ ವರದಲ್ಲಿ ಏನಿದೆ..?: ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ 2019 ರಿಂದ 2021 ರ ತನಕ ನಡೆಸಲಾಗಿದೆ. ಈ ಸರ್ವೇಯಲ್ಲಿ 18 ರಿಂದ 49 ವರ್ಷ ಮಹಿಳೆಯರನ್ನ ಬಳಸಿಕೊಳ್ಳಲಾಗಿದೆ. ಈ ಸರ್ವೇ ಪ್ರಕಾರ ರಾಜ್ಯದ ಶೇ. 48 ರಷ್ಟು ಮಹಿಳೆಯರು ತಮ್ಮ ಪತಿಯಿಂದಲೇ ಹಿಂಸೆಗೆ ಒಳಪಟ್ಟಿರುವ ಅಂಶ ಬಯಲಾಗಿದೆ. ಬಿಹಾರಕ್ಕಿಂತ ರಾಜ್ಯದಲ್ಲಿ ಸಂಗಾತಿ ಹಿಂಸೆ ಅಧಿಕವಾಗಿರೋದು ಪತ್ತೆಯಾಗಿದೆ. ಬಿಹಾರದಲ್ಲಿ ಶೇ. 43ರಷ್ಟು ಮಹಿಳೆಯರು ಸಂಗಾತಿ ಹಿಂಸೆ ಅನುಭವಿಸಿದ್ದಾರೆ. ಮಾನಸಿಕ, ದೈಹಿಕ ಹಾಗೂ ಲೈಂಗಿಕ ಹಿಂಸೆಗೆ ಒಳಗಾಗ್ತಿರುವ ಬಗ್ಗೆ ಸರ್ವೇಯಲ್ಲಿ ಮಹಿಳೆಯರು ಹೇಳಿಕೊಂಡಿದ್ದಾರೆ. ಕೆಲವೊಮ್ಮೆ ಚಿತ್ರಹಿಂಸೆಗೂ ಒಳಪಡುತ್ತಿರುವುದು, ಪತಿಯಿಂದಲೇ ದೈಹಿಕ ಹಲ್ಲೆಗಳು ನಡೆಯುತ್ತಿರುವ ಬಗ್ಗೆ ವರದಿ ಬೆಳಕು ಚೆಲ್ಲಿದೆ. ಸಂಗಾತಿ ಹಿಂಸೆಯಿಂದಾಗಿ ಗಾಯಗಳಿಗೆ ತುತ್ತಾಗುತ್ತಿರುವುದು ಪತ್ತೆಯಾಗಿದೆ.
ಯಾವ ರೀತಿಯ ಹಲ್ಲೆ ನಡೆಯುತ್ತಿದೆ?: ಮಹಿಳೆಯರು ತಮ್ಮ ಪತಿಯಿಂದ ವಿವಿಧ ರೀತಿಯ ಹಲ್ಲೆಗೆ ಒಳಪಡುತ್ತಿದ್ದಾರೆ. ಇದರಲ್ಲಿ ಶೇ. 7ರಷ್ಟು ಮಹಿಳೆಯರಿಗೆ ಕಣ್ಣಿನ ಗಾಯ, ಕೈ ಕಾಲು ಮುರಿತ, ಬರೆಯಂತಹ ಹಲ್ಲೆಗೊಳಗಾಗಿದ್ದಾರೆ. ಶೇ. 6ರಷ್ಟು ಮಹಿಳೆಯರಿಗೆ ತೀವ್ರ ಥರದ ಗಾಯ, ಮೂಳೆ ಮುರಿತ, ಹಲ್ಲು ಮುರಿತಕ್ಕೆ ಒಳಗಾಗಿದ್ದಾರೆ. ಶೇ. 3ರಷ್ಟು ಮಹಿಳೆಯರಿಗೆ ಬೆಂಕಿಯಿಂದ ಸುಡುವ ಚಿತ್ರಹಿಂಸೆ ಕೂಡ ನಡೆದಿದೆ ಎಂದು ಸರ್ವೇ ಇಂದ ಬಯಲಾಗಿದೆ.
ಮೌನಕ್ಕೆ ಶರಣಾದ ಮಹಿಳೆಯರೆಷ್ಟು? ಸಹಾಯ ಪಡೆದವರೆಷ್ಟು?: ಪತಿಯಿಂದ ಹಿಂಸೆಗೆ ಒಳಪಡುವ ಭಾಗಶಃ ಮಹಿಳೆಯರು ಸಮಾಜಕ್ಕೆ ಹೆದರಿ ಮೌನ ವಹಿಸಿದ್ದಾರೆಂದು ವರದಿ ಹೇಳುತ್ತಿದೆ. ಶೇ. 58ರಷ್ಟು ಮಹಿಳೆಯರು ತವರು ಮನೆಯವರಿಂದ ಸಹಾಯ ಪಡೆಯಲು ಮುಂದಾಗಿರುವುದು ಪತ್ತೆಯಾಗಿದೆ. ಶೇ. 27ರಷ್ಟು ಮಹಿಳೆಯರು ಅತ್ತೆ, ಮಾವನ ಮನೆಯವರಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ. ಶೇ. 9ರಷ್ಟು ಮಹಿಳೆಯರು ಸಂಸ್ಥೆಗಳಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ. ಶೇ. 2ರಷ್ಟು ಮಹಿಳೆಯರು ಧಾರ್ಮಿಕ ಸಂಸ್ಥೆಗಳಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ. ಕೇವಲ ಶೇ. 1 ರಷ್ಟು ಮಹಿಳೆಯರು ಮಾತ್ರ ಪೊಲೀಸ್ ಹಾಗೂ ವಕೀಲರಿಂದ ಸಹಾಯ ಪಡೆಯಲು ಮುಂದಾಗಿರುವುದು ಸರ್ವೇಯಲ್ಲಿ ತಿಳಿದುಬಂದಿದೆ.
ಸಂಗಾತಿ ಹಲ್ಲೆಯ ಟಾಪ್ 10 ರಾಜ್ಯಗಳು
ರಾಜ್ಯ ಹಲ್ಲೆ ಶೇಕಡವಾರು
ಕರ್ನಾಟಕ 48%
ಬಿಹಾರ 43%
ತೆಲಂಗಾಣ 41%
ಮಣಿಪುರ 40%
ತಮಿಳುನಾಡು 40%
ಉತ್ತರ ಪ್ರದೇಶ 39%
ಆಂಧ್ರ ಪ್ರದೇಶ 34%
ಅಸ್ಸಾಂ 34%
ಝಾರ್ಖಂಡ್ 34%
ಒಡಿಸ್ಸಾ 33%