ಪೋಷಕರೇ, ಮಕ್ಕಳ ಬಗ್ಗೆ ಎಚ್ಚರ ವಹಿಸಿ, ಕಳೆದೊಂದು ತಿಂಗಳಲ್ಲಿ ಶಾಕಿಂಗ್ ಬೆಳವಣಿಗೆ!

By Kannadaprabha NewsFirst Published Aug 10, 2020, 6:04 PM IST
Highlights

ಪೋಷಕರೇ, ಮಕ್ಕಳ ಆರೋಗ್ಯ ಬಗ್ಗೆ ಎಚ್ಚರ ವಹಿಸಿ!| ಕೊರೋನಾ ಸೋಂಕಿತ 10 ವರ್ಷದೊಳಗಿನ ಮಕ್ಕಳ ಸಂಖ್ಯೆ ಕಳೆದೊಂದು ತಿಂಗಳಲ್ಲಿ ಭಾರೀ ಏರಿಕೆ| 15 ದಿನದಲ್ಲಿ 6 ಪುಟ್ಟಮಕ್ಕಳು ಕೊರೋನಾಗೆ ಬಲಿ| ತುಸು ಅನಾರೋಗ್ಯ ಇದ್ದರೂ ತಪಾಸಣೆಗೆ ಒಳಪಡಿಸಿ| 1382 ಕೇಸ್‌: ಜು.6ರವರೆಗೆ ಸೋಂಕು ತಗುಲಿದ 10 ವರ್ಷ ಒಳಗಿನ ಮಕ್ಕಳ ಸಂಖ್ಯೆ| 1 ಸಾವು: ಜು.6ರ ವರೆಗೆ ಕೊರೋನಾದಿಂದ ಸಾವನ್ನಪ್ಪಿದ 10 ವರ್ಷದೊಳಗಿನವರು| 

ಶ್ರೀಕಾಂತ್‌.ಎನ್‌.ಗೌಡಸಂದ್ರ

ಬೆಂಗಳೂರು(ಆ.10): ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಈಚೆಗೆ ಕೊರೋನಾ ಸೋಂಕಿಗೆ ಒಳಗಾದ 10 ವರ್ಷದೊಳಗಿನ ಮಕ್ಕಳ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. ಅಲ್ಲದೆ, ಕಳೆದ ಹದಿನೈದು ದಿನಗಳಲ್ಲಿ ಸೋಂಕಿನಿಂದಾಗಿ 10 ವರ್ಷದೊಳಗಿನ ಆರು ಪುಟ್ಟಕಂದಮ್ಮಗಳು ಬಲಿಯಾಗಿವೆ.

ಜುಲೈ 6ರ ವರೆಗೆ ರಾಜ್ಯದಲ್ಲಿ 10 ವರ್ಷದೊಳಗಿನ 1,382 (5 ವರ್ಷದೊಳಗಿನ 551 ಸೇರಿ) ಚಿಣ್ಣರಿಗೆ ಸೋಂಕು ಉಂಟಾಗಿತ್ತು. ಈ ಪೈಕಿ ಒಂದು ಮಗು ಮೃತಪಟ್ಟಿತ್ತು. ಇದೀಗ ಕಳೆದ ಒಂದು ತಿಂಗಳಲ್ಲಿ ಸೋಂಕಿತ ಪುಟ್ಟಮಕ್ಕಳ ಸಂಖ್ಯೆ 6,530ಕ್ಕೆ ಏರಿಕೆಯಾಗಿದೆ. ಈ ಪೈಕಿ 5,926 ಚಿಣ್ಣರು ಇನ್ನೂ ಸಕ್ರಿಯ ಸೋಂಕಿತರಾಗಿದ್ದಾರೆ. ರಾಜ್ಯದಲ್ಲಿನ ಒಟ್ಟು ಸೋಂಕಿತರಲ್ಲಿ ಶೇ.4.12ರಷ್ಟುಸೋಂಕು 10 ವರ್ಷದೊಳಗಿನ ಮಕ್ಕಳು. ಇನ್ನು ಕಳೆದ 15 ದಿನಗಳಲ್ಲಿ 10 ವರ್ಷದೊಳಗಿನ ಆರು ಕಂದಮ್ಮಗಳು ಬಲಿಯಾಗಿದ್ದು, ಒಟ್ಟು ಸಾವು 7ಕ್ಕೆ ಏರಿಕೆಯಾಗಿದೆ.

ಹೀಗಾಗಿ, ಪೋಷಕರು ಪುಟ್ಟಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಬಹುತೇಕ ಮಕ್ಕಳಿಗೆ ಸೋಂಕಿತ ಪೋಷಕರ ಸಂಪರ್ಕದಿಂದಲೇ ಸೋಂಕು ಹರಡುತ್ತಿದೆ. ಹೀಗಾಗಿ ಸೋಂಕು ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಪೋಷಕರು ಪ್ರತ್ಯೇಕವಾಗಿರಬೇಕು. ಯಾವುದೇ ಕಾರಣಕ್ಕೂ ಮಕ್ಕಳೊಂದಿಗೆ ಸಂಪರ್ಕಕ್ಕೆ ಬರಬಾರದು ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

ಬಹುತೇಕ ಮಕ್ಕಳಿಗೆ ಟ್ರಾವೆಲ್‌ ಹಿಸ್ಟರಿ ಇಲ್ಲ:

ಪ್ರಸ್ತುತ ಸಕ್ರಿಯ ಸೋಂಕಿತರಾಗಿ ಕೊರೋನಾ ಆರೈಕೆ ಕೇಂದ್ರಗಳಲ್ಲಿರುವ 5,926 ಮಂದಿ ಚಿಣ್ಣರಲ್ಲಿ ಬಹುತೇಕ ಮಕ್ಕಳಿಗೆ ಟ್ರಾವೆಲ್‌ ಹಿಸ್ಟರಿ ಇಲ್ಲ. ಸೋಂಕಿತ ಪೋಷಕರಿಂದಲೇ ಅವರಿಗೆ ಸೋಂಕು ಹರಡಿದೆ. ವಿಶೇಷವೆಂದರೆ, ಹಲವು ಪ್ರಕರಣಗಳಲ್ಲಿ ಪೋಷಕರು ರೋಗ ಲಕ್ಷಣಗಳಿಲ್ಲದ ಕಾರಣ ಮಕ್ಕಳೊಂದಿಗೆ ಬೆರೆತು ಸೋಂಕು ಹರಡಿರುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳೊಂದಿಗೆ ಜಾಗರೂಕತೆಯಿಂದ ನಡೆದುಕೊಳ್ಳಬೇಕು ಎಂದು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯರೊಬ್ಬರು ಸಲಹೆ ನೀಡಿದರು.

ಬಹುತೇಕ ಮಕ್ಕಳು ಡೆಂಘಿ, ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾದಾಗಲೇ ಸೋಂಕು ಬೆಳಕಿಗೆ ಬರುತ್ತಿದೆ. ಹೀಗಾಗಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಯಾವುದೇ ರೀತಿಯ ಸೋಂಕು ಲಕ್ಷಣಗಳು ಕಾಣಿಸಿಕೊಂಡರೂ ಕೂಡಲೇ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.

ಮಕ್ಕಳ ಚಿಕಿತ್ಸೆಗೂ ಸಮಸ್ಯೆ:

ಸಾಧಾರಣವಾಗಿ 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವೃದ್ಧರಿಗೆ ಸೋಂಕಿನ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಕೊರೋನಾ ಆಸ್ಪತ್ರೆಗಳಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ವಯಸ್ಕರಿಗೆ ನೀಡುವ ಔಷಧ ನೀಡಲಾಗುವುದಿಲ್ಲ. ಹೀಗಾಗಿ ಆಂಟಿ ಬಯೋಟಿಕ್‌ ಔಷಧಗಳೊಂದಿಗೆ ಸೋಂಕು ಲಕ್ಷಣಗಳನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಬಹುತೇಕ ಮಕ್ಕಳಿಗೆ ರೋಗ ಲಕ್ಷಣಗಳಿಲ್ಲದಿರುವುದು ಸಮಾಧಾನಕರ ಸಂಗತಿ. ಆದರೆ, ಡೆಂಘಿ, ಮಲೇರಿಯಾ, ಉಸಿರಾಟ ಸಮಸ್ಯೆಯಂತಹ ಬೇರೆ ಕಾಯಿಲೆ ಹಾಗೂ ದೀರ್ಘಕಾಲೀನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಸಮಸ್ಯೆಯಾಗಬಹುದು. ಹೀಗಾಗಿ ಎಚ್ಚರವಹಿಸಬೇಕು ಎಂದು ವೈದ್ಯರು ಹೇಳುತ್ತಾರೆ.

ಮಕ್ಕಳನ್ನು ಹೀಗೆ ನೋಡಿಕೊಳ್ಳಿ

- 10 ವರ್ಷದೊಳಗಿನ ಮಕ್ಕಳನ್ನು ಹೊರಗೆ ಕಳುಹಿಸಬೇಡಿ

- ಒಳಾಂಗಣ ಕ್ರೀಡೆ, ಮನರಂಜನಾ ಚಟುವಟಿಕೆ ಉತ್ತೇಜಿಸಿ

- ಹೊರಗಡೆ ಮಕ್ಕಳ ಆಡುವುದನ್ನು ಆದಷ್ಟುನಿಯಂತ್ರಿಸಿ

- ಪದೇಪದೇ ಕೈ ತೊಳೆವುದು ಸೇರಿ ಸುರಕ್ಷತಾ ಕ್ರಮ ರೂಢಿಸಿ

- ಹೊರ ಹೋಗುವ ಮಕ್ಕಳು ಕಡ್ಡಾಯವಾಗಿ ಮಾಸ್ಕ್‌ ಧರಿಸಲಿ

- ಸೋಂಕು ಲಕ್ಷಣ ಇದ್ದರೆ ಪೋಷಕರು ಮಕ್ಕಳಿಂದ ದೂರವಿರಿ

- ಮಕ್ಕಳು ಮುಟ್ಟುವ, ಆಡುವ ಪ್ರದೇಶ ಸದಾ ಸ್ವಚ್ಛವಾಗಿಡಿ

ಶಾಲೆಗೆ ಕಳಿಸಲು ಪೋಷಕರಿಗೆ ಈಗ ಮತ್ತಷ್ಟುಆತಂಕ

ಒಂದೆಡೆ ದಿನೇ ದಿನೇ ಕೊರೋನಾ ಕೇಸ್‌ಗಳು ಹೆಚ್ಚುತ್ತಲೇ ಸಾಗಿವೆ. ಮತ್ತೊಂದೆಡೆ, ವಿವಿಧ ಸರ್ಕಾರಗಳು ಸೆಪ್ಟೆಂಬರ್‌ ನಂತರ ಶಾಲೆ ಪುನಾರಂಭ ಮಾಡುವ ಚಿಂತನೆಯಲ್ಲಿವೆ. ಈ ನಡುವೆ, ಮಕ್ಕಳ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಪೋಷಕರನ್ನು ಮತ್ತಷ್ಟುಕಳವಳಕ್ಕೀಡು ಮಾಡಿವೆ. ಈಗಾಗಲೇ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿದಿರುವ ಪೋಷಕರು, ಈಗ ಇನ್ನೂ ಆತಂಕಕ್ಕೆ ಒಳಗಾಗಿದ್ದಾರೆ.

click me!