
ಎಲ್.ಎಸ್. ಶ್ರೀಕಾಂತ್
ಮೈಸೂರು (ಮಾ.20) ನಗರದ ರೇಲ್ವೆ ಮ್ಯೂಸಿಯಂನಲ್ಲಿ ಭಾರಿ ಗಾತ್ರದ ಕೊಂಬೆಗಳು ಬಿದ್ದಿದ್ದು, ಅದೃಷ್ಟಾವಶಾತ್ ಸ್ವಲ್ಪದರಲ್ಲೆ ಪ್ರವಾಸಿಗರು, ಮಕ್ಕಳು ಪಾರಾಗಿದ್ದು, ನಿಟ್ಟಿಸಿರು ಬಿಟ್ಟಿದ್ದಾರೆ.
ಮೈಸೂರಿನ ಪ್ರವಾಸಿ ಆಕರ್ಷಕ ತಾಣಗಳಲ್ಲಿ ರೇಲ್ವೆ ಮ್ಯೂಸಿಯಂ ಸಹ ಒಂದಾಗಿದ್ದು, ಇಲ್ಲಿ ದಿನನಿತ್ಯ ಸಾವಿರಾರು ಪ್ರವಾಸಿಗರು, ಸ್ಥಳೀಯರು, ಶಾಲಾ ಮಕ್ಕಳು ಭೇಟಿ ನೀಡಿ, ವೀಕ್ಷಿಸಿ ಸಂಭ್ರಮಿಸಿ ತೆರಳುತ್ತಾರೆ.ಮ್ಯೂಸಿಯಂನಲ್ಲಿ ಮುಖ್ಯ ಆಕರ್ಷಣೆಯಾಗಿರುವ ಅದರಲ್ಲೂ ಮಕ್ಕಳು ಇಷ್ಟ ಪಡುವ ಟಾಯ್‌ಟ್ರೈನ್‌ಮೇಲೆ ಭಾನುವಾರ ಒಣಗಿದ ಮರದಿಂದ ದೊಡ್ಡ ಕೊಂಬೆಗಳು ಬಿದ್ದಿತು. ಸ್ವಲ್ಪ ಸಮಯದಲ್ಲೆ ಟಾಯ್ ಟ್ರೈನ್ ನಿಂದ ಪ್ರವಾಸಿಗರು ಇಳಿದು ಹೋಗಿದ್ದು, ಎರಡು ನಿಮಿಷ ತಡವಾಗಿದ್ದರೂ ಸಹ ಭಾರಿ ಗಾತ್ರದ ಕೊಂಬೆಗಳು ಪ್ರವಾಸಿಗರು ಮತ್ತು ಮಕ್ಕಳ ಮೇಲೆ ಬಿದ್ದು, ಸಾವು ನೋವು ನೋವು ಸಂಭವಿಸುತ್ತಿತ್ತು, ಅದೃಷ್ಟವಶಾತ್ ಭಾರಿ ಅನಾಹುತದಿಂದ ಪ್ರವಾಸಿಗರು ಪಾರಾದರು ಎಂದು ಹೇಳಲಾಗಿದೆ.
ರೇಲ್ವೆ ಮ್ಯೂಸಿಯಂ ಆವರಣದಲ್ಲಿ ಭಾರಿ ಗಾತ್ರದ ಹಳೆಯ ಮರಗಳು ಹೆಚ್ಚಾಗಿದ್ದು, ಹಲವಾರು ವರ್ಷಗಳಿಂದ ಈ ಮರಗಳು ಒಣಗಿ ನಿಂತಿದ್ದರೂ ಸಹ ರೇಲ್ವೆ ಇಲಾಖೆ ಮತ್ತು ಗುತ್ತಿಗೆದಾರ ಅವುಗಳನ್ನು ಕಡಿಸುವ ಗೋಜಿಗೆ ಹೋಗಿಲ್ಲ. ಇಲ್ಲಿನ ಸಿಬ್ಬಂದಿಗಳು ಸಹ ಭಯದ ವಾತಾವರಣದಲ್ಲೆ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ADR Report: ಡಿಕೆ ಶಿವಕುಮಾರ್ ದೇಶದ ನಂ.2 ಶ್ರೀಮಂತ ಶಾಸಕ; ಟಾಪ್ - 10 ರಲ್ಲಿ ರಾಜ್ಯದ ನಾಲ್ವರು ಶಾಸಕರು!
ಶಾಲಾ ಮಕ್ಕಳು ಭೇಟಿ:
ಮೈಸೂರಿನಲ್ಲಿರುವ ವಿವಿಧ ಶಾಲೆಗಳಿಂದ ವರ್ಷಪೂರ್ತಿ ಪುಟ್ಟ ಮಕ್ಕಳನ್ನು ಈ ರೇಲ್ವೆ ಮ್ಯೂಸಿಯಂಗೆ ಒಂದು ದಿನ ಪ್ರವಾಸಕ್ಕೆ ಶಾಲಾ ಶಿಕ್ಷಕರು ಕರೆ ತರುತ್ತಾರೆ. ಅಂತಹ ಸಂದರ್ಭದಲ್ಲಿ ಇಂತಹ ಕೊಂಬೆಗಳು ಮಕ್ಕಳ ಮೇಲೆ ಬಿದ್ದರೆ ಗತಿ ಏನು ಎಂದು ಮ್ಯೂಸಿಯಂಗೆ ಭೇಟಿ ನೀಡಿದ್ದ ಪ್ರವಾಸಿಗರು ಪ್ರಶ್ನಿಸಿದರು. ಗುತ್ತಿಗೆದಾರನ ಬೇಜವಾಬ್ದಾರಿರೇಲ್ವೆ ಇಲಾಖೆಯ ವತಿಯಿಂದ ಈ ರೇಲ್ವೆ ಮ್ಯೂಸಿಯಂನ್ನು ಹೊರ ಗುತ್ತಿಗೆಗೆ ವಹಿಸಿದ್ದಾರೆ.
ಇಲಾಖೆಯ ಒಬ್ಬರನ್ನು ಮೇಲುಸ್ತುವಾರಿ ವಹಿಸಿರುತ್ತಾರೆ. ಗುತ್ತಿಗೆ ವಹಿಸಿಕೊಂಡವರು ಪ್ರತಿನಿತ್ಯ ಬರುವ ಪ್ರವಾಸಿಗರಿಗೆ ಸೌಲಭ್ಯ ನೀಡಿ, ಪ್ರವಾಸಿಗರ ಸುರಕ್ಷತೆಯನ್ನು ನೋಡಿಕೊಳ್ಳಬೇಕು. ಆದರೆ ಗುತ್ತಿಗೆದಾರ ಹಾಗೂ ರೇಲ್ವೆ ಇಲಾಖೆಯ ಮೇಲುಸ್ತುವಾರಿ ವಹಿಸಿಕೊಂಡವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಸೋಮವಾರ ಈ ಅನಾಹುತ ಸಂಭವಿಸಿದರೂ ಕೂಡ ಮರಗಳನ್ನು ಕಡಿಸಿ ಮುಂದೆ ಇಂತಹ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಿತ್ತು. ಆದರೆ ಇದುವರೆಗೂ ಸಹ ಕ್ರಮಕೈಗೊಂಡಿಲ್ಲ. ಮುಂದೆ ಇಂತಹ ಘಟನೆ ಮರುಕಳಿಸಿ ಯಾವುದೇ ಸಾವು, ನೋವು ಸಂಭವಿಸಿದರೆ ರೇಲ್ವೆ ಇಲಾಖೆ ಜವಾಬ್ದಾರಿಯಾಗುತ್ತದೆ. ಪ್ರಾಣದ ಜೊತೆ ಚೆಲ್ಲಾಟವಾಡಬೇಡಿ ಮುಂದಿನ ದಿನಗಳಲ್ಲಿ ಭಾರಿ ಗಾಳಿ, ಮಳೆ ಬೀಳುವ ಸಂಭವವಿರುವುದರಿಂದ ರೇಲ್ವೆ ಇಲಾಖೆ ಹಾಗೂ ಮ್ಯೂಸಿಯಂ ಗುತ್ತಿಗೆದಾರ ಕೂಡಲೇ ಒಣಗಿದ ಮರಗಳನ್ನು ಕಡಿಸಿ, ಪ್ರವಾಸಿಗರು, ಮಕ್ಕಳು ಹಾಗೂ ಸ್ಥಳೀಯ ನೌಕರರ ಜತೆ ಪ್ರಾಣ ಚೆಲ್ಲಾಟವಾಡದೆ ಮುನ್ನೇಚ್ಚರಿಕೆ ವಹಿಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸುವಂತೆ ಪ್ರವಾಸಿಗರು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ