
ಬೆಂಗಳೂರು(ಆ.22): ನಗರದಲ್ಲಿ ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಏಕ ಗವಾಕ್ಷಿ ವ್ಯವಸ್ಥೆ, ಗರಿಷ್ಠ ಮೂರು ದಿನಕ್ಕೆ ಗಣೇಶಮೂರ್ತಿ ವಿಸರ್ಜನೆ ಮಾಡಬೇಕು ಎಂಬುದು ಸೇರಿದಂತೆ ಹೊಸ ಮಾರ್ಗಸೂಚಿಯನ್ನು ಬಿಬಿಎಂಪಿ ಪ್ರಕಟಿಸಿದೆ.
"
ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಈ ಬಾರಿ ಸರಳ ಹಾಗೂ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ ಸಂಬಂಧ ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದು, ಈಗ ಹೊಸ ಸೂಚನೆಗಳನ್ನು ನೀಡಿದೆ.
ಇಲಾಖಾವಾರು ನೀಡಲಾಗುವ ಅನುಮತಿ ಪಡೆಯಲು ಬಿಬಿಎಂಪಿ, ಪೊಲೀಸ್ ಹಾಗೂ ಅಗ್ನಿಶಾಮಕ ಅಧಿಕಾರಿಗಳ ಸಮಿತಿ ರಚಿಸಿ, ಏಕಗವಾಕ್ಷಿ ಪದ್ಧತಿಯಲ್ಲಿ ಅನುಮತಿ ನೀಡುವುದಾಗಿ ಸೂಚಿಸಲಾಗಿದೆ.
ಕೊರೋನಾ ಆತಂಕದ ಮಧ್ಯೆ ಗಣೇಶೋತ್ಸವ: ಮಾರ್ಗಸೂಚಿ ಮತ್ತೊಮ್ಮೆ ಪರಿಶೀಲಿಸಲು ಮನವಿ
ಮೂರೇ ದಿನಕ್ಕೆ ವಿಸರ್ಜಿಸಬೇಕು:
ಪಾಲಿಕೆಯ ಪ್ರತಿ ವಾರ್ಡ್‌ನಲ್ಲಿ ಗರಿಷ್ಠ 4 ಅಡಿ ಎತ್ತರದ ಗಣೇಶಮೂರ್ತಿ ಪ್ರತಿಷ್ಠಾಪಿಸಬಹುದು. ಪಾಲಿಕೆಯ ಆಯಾ ವಲಯ ಜಂಟಿ ಆಯುಕ್ತ ಹಾಗೂ ಪೊಲೀಸ್ ಆಯುಕ್ತರೊಂದಿಗೆ ಸಮಾಲೋಚಿಸಿ ಸ್ಥಳ ನಿಗದಿ ಮಾಡಿ ಬಳಿಕ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಿದ್ದಾರೆ. ವಾರ್ಡ್‌ಗಳಲ್ಲಿ ಪ್ರತಿಷ್ಠಾಪಿಸುವ ಗಣೇಶಮೂರ್ತಿಗಳನ್ನು ಗರಿಷ್ಠ ಮೂರು ದಿನದ ಬಳಿಕ ವಿಸರ್ಜಿಸಬೇಕು. ಅಂದರೆ, ಆ.22ರಿಂದ 24ರ ವರೆಗೆ ಮಾತ್ರ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡಲಾಗುತ್ತದೆ. ಮನೆಗಳಲ್ಲಿ ಪರಿಸರ ಸ್ನೇಹಿ ಹಾಗೂ ರಾಸಾಯನಿಕ ಬಣ್ಣ ರಹಿತ ಗಣೇಶಮೂರ್ತಿ ಪ್ರತಿಷ್ಠಾಪಿಸಿ, ಮನೆಯಲ್ಲೇ ವಿಸರ್ಜಿಸಬೇಕು. ಈ ಬಾರಿ ಪಾಲಿಕೆ ವ್ಯಾಪ್ತಿಯ ಕೆರೆ, ಕಲ್ಯಾಣಿಗಳಲ್ಲಿ ಗಣೇಶಮೂರ್ತಿ ವಿಸರ್ಜನೆಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಸಂಚಾರಿ ವಾಹನದಲ್ಲೇ ವಿಸರ್ಜಿಸಿ:
ಗಣೇಶಮೂರ್ತಿ ವಿಸರ್ಜನೆ ವೇಳೆ ಮೆರವಣಿಗೆ ಅವಕಾಶವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶಮೂರ್ತಿಗಳನ್ನು ಪಾಲಿಕೆ ನಿಯೋಜಿಸುವ ಸಂಚಾರಿ ವಾಹನದಲ್ಲಿಯೇ ವಿಸರ್ಜಿಸಬೇಕು. ಯಾವುದೇ ರೀತಿಯ ಸಾಂಸ್ಕೃತಿಕ, ಸಂಗಿತ, ನೃತ್ಯ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ. ವಾರ್ಡ್‌ಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವವರು ಕಡ್ಡಾಯವಾಗಿ ರಾಜ್ಯ ಸರ್ಕಾರ, ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.
ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಖಚಿತ
ಗಣೇಶೋತ್ಸವ ಆಚರಣೆ ಸಂಬಂಧ ರಾಜ್ಯ ಸರ್ಕಾರದ ಆದೇಶ ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, ಐಪಿಸಿ ಸೆಕ್ಷನ್ 188ರ ಅಡಿ ಕಾನೂನು ಕ್ರಮ ಜರುಗಿಸಲಾಗುವುದು. ಆಚರಣೆ ವೇಳೆ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಆಯುಕ್ತರು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ