ಕೊರೋನಾ ಭೀತಿ ಮಧ್ಯೆ ಕಂಟೈನ್ಮೆಂಟ್‌ ಹೆಸರಲ್ಲಿ ಕೋಟ್ಯಂತರ ರು. ಅಕ್ರಮ?

By Kannadaprabha News  |  First Published Aug 16, 2020, 7:12 AM IST

ಸೋಂಕಿತರ ಮನೆ ಸೇರಿ 100 ಮೀಟರ್‌ ಪ್ರದೇಶ ಕಂಟೈನ್ಮೆಂಟ್‌ ಮಾಡಲು ದಿನವೊಂದಕ್ಕೆ ಸುಮಾರು 70000 ಬಾಡಿಗೆ ನಿಗದಿ|ನಾಲ್ಕೈದು ಕಂಬ ಹಾಕಿ, ಶೀಟ್‌ ಹೊಡೆಯಲು 14 ದಿನಕ್ಕೆ ಸುಮಾರು 8 ಲಕ್ಷ ವೆಚ್ಚ| ಇದು ಭಾರೀ ದುಬಾರಿ ಎಂಬ ಆರೋಪ| 


ಬೆಂಗಳೂರು(ಆ.16): ಕೊರೋನಾ ಸೋಂಕಿರ ಮನೆ ಕಂಟೈನ್ಮೆಂಟ್‌ ಮಾಡುವ ನೆಪದಲ್ಲಿ ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಕೋಟ್ಯಂತರ ರು. ಭ್ರಷ್ಟಾಚಾರ ನಡೆಸಿರುವ ಆರೋಪ ಕೇಳಿಬಂದಿದೆ.

"

Tap to resize

Latest Videos

ಸೋಂಕು ದೃಢಪಟ್ಟ ವ್ಯಕ್ತಿಯ ಮನೆ ಸೇರಿದಂತೆ ಸುಮಾರು 100 ಮೀಟರ್‌ ಪ್ರದೇಶವನ್ನು ಕಂಟೈನ್ಮೆಂಟ್‌ ಮಾಡಲಾಗುತ್ತಿದೆ. ಈ ವರೆಗೆ ಬೆಂಗಳೂರಿನಲ್ಲಿ ಸುಮಾರು 34 ಸಾವಿರ ಕಂಟೈನ್ಮೆಂಟ್‌ ವಲಯ ನಿರ್ಮಿಸಲಾಗಿದೆ. ಕಂಟೈನ್ಮೆಂಟ್‌ ವಲಯ ನಿರ್ಮಿಸಿವುದಕ್ಕೆ ಎರಡು ಅಥವಾ ಮೂರು ತಗಡಿನ (ಕಬ್ಬಿಣದ) ಶೀಟ್‌, ಮೂರ್ನಾಲ್ಕು ಕಂಬ ಹಾಕಿ, ಕಂಟೈನ್ಮೆಂಟ್‌ ವಲಯದ ಎಂದು ಫಲಕ ಹಾಕಿ ಸೀಲ್‌ ಮಾಡಲಾಗುತ್ತಿದೆ. ಪ್ರತಿ ಒಂದು ಕಂಟೈನ್ಮೆಂಟ್‌ ವಲಯಕ್ಕೆ ಬಿಬಿಎಂಪಿ ಎಂಜಿನಿಯರ್‌ಗಳಿಂದ ಡಿಸಿ ಬಿಲ್‌ (ಸಾದಿಲ್ವಾರು ಬಿಲ್‌) ಹೆಸರಿನಲ್ಲಿ ದಿನಕ್ಕೆ ಸುಮಾರು 70 ಸಾವಿರ ರು. ವರೆಗೆ ಬಾಡಿಗೆ ನಿಗದಿ ಪಡಿಸಲಾಗಿದೆ. ಈ ಮೂಲಕ ಪ್ರತಿ ಕಂಟೈನ್ಮೆಂಟ್‌ ಅವಧಿಗೆ ಮುಗಿಯುವ ವರೆಗೆ (14 ದಿನಕ್ಕೆ) ಸುಮಾರು 7ರಿಂದ 8 ಲಕ್ಷ ರು. ವರೆಗೆ ಹಣ ನೀಡಲಾಗುತ್ತಿದೆ.

14 ದಿನಕ್ಕೆ 7.26 ಲಕ್ಷ ಬಿಲ್‌:

ಪೂರ್ವ ವಲಯದ ಭಾರತೀನಗರ ವಾರ್ಡ್‌ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿಗೆ ಕೊರೋನಾ ಸೋಂಕು ಬಂದ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಂದ ಬಿಬಿಎಂಪಿ ಕಂಟೈನ್ಮೆಂಟ್‌ ವಲಯ ನಿರ್ಮಿಸುವುದಕ್ಕೆ ಕೊಟೇಷನ್‌ ಪಡೆದಿದೆ. ಈ ವೇಳೆ ಮೂವರು ಗುತ್ತಿಗೆದಾರರು ಕೊಟೇಷನ್‌ ನೀಡಿದ್ದಾರೆ. ಅತಿ ಕಡಿಮೆ 69,140 ರು. (ದಿನಕ್ಕೆ ಬಾಡಿಗೆ) ದರದಲ್ಲಿ ಕಂಟೈನ್ಮೆಂಟ್‌ ಮಾಡುವುದಾಗಿ ಕೊಟೇಷನ್‌ ನೀಡಿದ ಗುತ್ತಿಗೆದಾರರಿಗೆ ಅನುಮತಿ ನೀಡಲಾಗಿದೆ. ಈ ಮೂಲಕ 14 ದಿನದ ಕಂಟೈನ್ಮೆಂಟ್‌ಗೆ ಬಿಬಿಎಂಪಿ ಬರೋಬ್ಬರಿ 7,26,143 ರು. ಡಿಸಿ ಬಿಲ್‌ ಮೂಲಕ ಬಿಡುಗಡೆಗೆ ಶಿವಾಜಿನಗರದ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅನುಮೋದನೆ ನೀಡಿದ್ದಾರೆ.

'ಆತಂಕ ಪಡುವ ಅಗತ್ಯವಿಲ್ಲ : ಶೀಘ್ರ ಹತೋಟಿಗೆ ಬರಲಿದೆ ಕೊರೋನಾ'

2 ಸಾವಿರ ಕೋಟಿ?

ಬಿಬಿಎಂಪಿ ವ್ಯಾಪ್ತಿಯಲ್ಲಿ ಆ.14ರ ವರೆಗೆ ಒಟ್ಟು 33,041 ಕಂಟೈನ್ಮೆಂಟ್‌ ವಲಯ ನಿರ್ಮಿಸಲಾಗಿದೆ. ಈ ಪೈಕಿ 19,559 ಕಂಟೈನ್ಮೆಂಟ್‌ ಪ್ರದೇಶ ಸೋಂಕು ಮುಕ್ತವಾಗಿವೆ. ಇನ್ನು 13,482 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ. ಈ ಪ್ರಕಾರ ಕಂಟೈನ್ಮೆಂಟ್‌ ಪ್ರದೇಶಕ್ಕೆ ಬಿಬಿಎಂಪಿ ಸುಮಾರು 2,300 ಕೋಟಿ ರು. ಬಾಡಿಗೆ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ. ಇನ್ನು ಕೆಲವು ಪ್ರದೇಶದಲ್ಲಿ 14 ದಿನಕ್ಕಿಂತ ಹೆಚ್ಚಿನ ದಿನ ಕಂಟೈನ್ಮೆಂಟ್‌ ಮಾಡಲಾಗಿದೆ. ಹೀಗಾಗಿ, ಬಾಡಿಗೆ ಮೊತ್ತ ಇನ್ನಷ್ಟುಹೆಚ್ಚಾಗುವ ಸಾಧ್ಯತೆ ಇದೆ.

ಹಣ ಬಿಡುಗಡೆ ಮಾಡದಂತೆ ಸೂಚನೆ

ಈ ಕುರಿತು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಕಂಟೈನ್ಮೆಂಟ್‌ಗೆ ಅಧಿಕ ಮೊತ್ತದಲ್ಲಿ ಬಾಡಿಗೆ ನಿಗದಿ ಪಡಿಸಿರುವುದು ಗಮನಕ್ಕೆ ಬಂದಿದೆ. ಹಣ ಬಿಡುಗಡೆ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿರ್ದಿಷ್ಟ ಮೊತ್ತ ನಿಗದಿ ಪಡಿಸಲಾಗುವುದು. ಪ್ರತ್ಯೇಕ ಸೋಂಕು ಪ್ರಕರಣ ಪತ್ತೆಯಾದರೆ ಕಂಟೈನ್ಮೆಂಟ್‌ ಪ್ರದೇಶ ನಿರ್ಮಿಸುವುದನ್ನು ಕೈ ಬಿಡುವುದಕ್ಕೆ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
 

click me!