ಜಾತಿಗಣತಿ ವಿರೋಧಕ್ಕೆ ಡಿಕೆಶಿ ಸಹಿ ಏಕೆ?: ರಾಯರೆಡ್ಡಿ ಕಿಡಿ

By Kannadaprabha NewsFirst Published Nov 23, 2023, 9:16 AM IST
Highlights

ಶಾಸಕರು ಬೇಕಿದ್ದರೆ ಸಹಿ ಹಾಕಲಿ. ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರು ಸಹಿ ಹಾಕಿರುವುದಕ್ಕೂ ನನ್ನ ಆಕ್ಷೇಪವಿಲ್ಲ. ಯಾಕೆಂದರೆ ಅವರು ವೀರಶೈವ ಲಿಂಗಾಯತ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರು. ಆದರೆ ವರದಿಯನ್ನು ಸ್ವೀಕರಿಸಬೇಕಾಗಿರುವ ಸರ್ಕಾರದ ಅಂಗವಾಗಿರುವ ಸಚಿವರೇ ವರದಿ ತಿರಸ್ಕರಿಸುವುದಕ್ಕೆ ಸಹಿ ಹಾಕುವುದು ಸರಿಯಲ್ಲ: ಮಾಜಿ ಸಚಿವ ಬಸವರಾಜ ರಾಯರೆಡ್ಡಿ

ಬೆಂಗಳೂರು(ನ.23):  ‘ಜಾತಿ ಗಣತಿ ವರದಿ ತಿರಸ್ಕರಿಸುವ ಒಕ್ಕಲಿಗರ ಸಂಘದ ಮನವಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಕೃಷಿ ಸಚಿವ ಚೆಲುವರಾಯಸ್ವಾಮಿ ಸಹಿ ಹಾಕಿರುವುದಕ್ಕೆ ನನ್ನ ಆಕ್ಷೇಪವಿದೆ. ಸಚಿವರು ಸರ್ಕಾರದ ಒಂದು ಭಾಗ. ಅವರೇ ಸರ್ಕಾರದ ನಿರ್ಧಾರಕ್ಕೆ ವಿರುದ್ಧವಾಗಿ ಸಹಿ ಹಾಕಿದರೆ ಹೇಗೆ?’ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಬೇಕಿದ್ದರೆ ಸಹಿ ಹಾಕಲಿ. ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರು ಸಹಿ ಹಾಕಿರುವುದಕ್ಕೂ ನನ್ನ ಆಕ್ಷೇಪವಿಲ್ಲ. ಯಾಕೆಂದರೆ ಅವರು ವೀರಶೈವ ಲಿಂಗಾಯತ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರು. ಆದರೆ ವರದಿಯನ್ನು ಸ್ವೀಕರಿಸಬೇಕಾಗಿರುವ ಸರ್ಕಾರದ ಅಂಗವಾಗಿರುವ ಸಚಿವರೇ ವರದಿ ತಿರಸ್ಕರಿಸುವುದಕ್ಕೆ ಸಹಿ ಹಾಕುವುದು ಸರಿಯಲ್ಲ ಎಂದರು.

Latest Videos

ಜಾತಿಗಣತಿ ವರದಿಯಲ್ಲಿ ಏನಿದೆ ಯಾರಿಗೂ ಗೊತ್ತಿಲ್ಲ: ಇದಕ್ಕೆ ವಿರೋಧವೇಕೆ ಎಂದ ಸಿದ್ದರಾಮಯ್ಯ?

ಜಾತಿಗಣತಿಯನ್ನು ರಾಜಕೀಯವಾಗಿ ಬಳಸಬಾರದು. ಅಸಮಾನತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಗಳ ಬಗ್ಗೆ ಜಾತಿವಾರು ಸಮೀಕ್ಷೆ ನಡೆಸಲಾಗಿದೆ. ಲಿಂಗಾಯತ ಹಾಗೂ ಒಕ್ಕಲಿಗ ಬಲಿಷ್ಠ ಜಾತಿಗಳು. ಅವರಿಗೆ ಕೆಲವು ಸಂದೇಹಗಳು ಬಂದಿರಬಹುದು. ಅವರ ಜತೆ ಮುಖ್ಯಮಂತ್ರಿಯವರು ಮಾತನಾಡಲಿ ಎಂದು ಸಲಹೆ ನೀಡಿದರು.

ನಿಗಮ-ಮಂಡಳಿ ಬೇಡ:

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಅವರ ಜತೆಗಿನ ಸಭೆ ಬಗ್ಗೆ ಮಾತನಾಡಿದ ಅವರು, ಸುರ್ಜೇವಾಲ ಅವರು ಕರೆದು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನಿಗಮ-ಮಂಡಳಿ ಬಗ್ಗೆ ಆಸಕ್ತಿ ಇದೆಯೇ ಎಂದು ಕೇಳಿದರು. ನನಗೆ ನಿಗಮ-ಮಂಡಳಿ ಆಸಕ್ತಿ ಇಲ್ಲ. ನಾನು ಈಗ ಇರುವುದರಲ್ಲೇ ಖುಷಿಯಾಗಿದ್ದೇನೆ. ರಾಯರೆಡ್ಡಿಗೆ ಏನು ಮಾಡಬೇಕು ಎಂದು ನನಗೆ ಗೊತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜನರಿಗೆ ಅನುಕೂಲವಾಗುವ ಬೇರೆ ಯಾವ ಕೆಲಸವಾದರೂ ಮಾಡುವುದಾಗಿ ತಿಳಿಸಿದ್ದೇನೆ ಎಂದರು.

click me!