
ಬೆಂಗಳೂರು(ನ.23): ಉತ್ತರಕಾಶಿಯ ಸಿಲ್‌ಕ್ಯಾರಾ ಸುರಂಗ ಭೂಕುಸಿತದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಇದೀಗ ಬೆಂಗಳೂರು ಮೂಲದ ಡ್ರೋನ್ ಕಂಪನಿಯ ಆರು ಜನರ ತಂಡ ತೆರಳಿದೆ. ಇವರು ಸುರಂಗದ ಒಳಗಡೆ ರಂಧ್ರ ಕೊರೆಯಬಹುದಾದ ಗಟ್ಟಿ ಸ್ಥಳವನ್ನು ಡ್ರೋನ್ ಮೂಲಕ ಪತ್ತೆ ಮಾಡಿ ತಿಳಿಸುವ ಹೊಣೆ ಹೊತ್ತಿದ್ದು, ಕಾರ್ಯಾಚರಣೆ ಆರಂಭಿಸಿದ್ದಾರೆ.
ಸುರಂಗದ ಆಸುಪಾಸಲ್ಲಿ ಕಾರ್ಮಿಕರನ್ನು ಹೊರಕ್ಕೆ ಕರೆತರಲು ಎಲ್ಲೆಂದರಲ್ಲಿ ರಂದ್ರ ಕೊರೆಯುವಂತಿಲ್ಲ. ಇದರಿಂದ ಮತ್ತೆ ಭೂಕುಸಿತ ಉಂಟಾಗಿ ಪುನಃ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಖನಿಜ ಅನ್ವೇಷಣೆ, ಗಣಿಗಾರಿಕೆ, ಸುರಂಗಮಾರ್ಗ ನಿರ್ಮಾಣ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಏರಿಯಲ್ ಇಂಟೆಲಿಜೆನ್ಸ್‌ನಲ್ಲಿ ವಿಶೇಷ ತಜ್ಞ ಸಂಸ್ಥೆಯಾಗಿರುವ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥೆ ಸ್ಕ್ವಾಡ್ರೋನ್ ಇನ್ಫ್ರಾ ಅಂಡ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್‌ನ್ನು ರಕ್ಷಣಾ ಕಾರ್ಯಾಚರಣೆಯ ನಡೆಸುತ್ತಿರುವ ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ಕರೆಸಿಕೊಂಡಿದೆ.
ಆಕ್ಸಿಜನ್ ಮಾಸ್ಕ್ ಜೊತೆ ಸುರಂಗದೊಳ ಪ್ರವೇಶಿಸಿದ ರಕ್ಷಣಾ ತಂಡ, ಶೀಘ್ರದಲ್ಲೇ ಕಾರ್ಮಿಕರ ರಕ್ಷಣೆ!
ಕಾರ್ಯಾಚರಣೆ ನೇತೃತ್ವ ವಹಿಸಿರುವ ಬ್ರಿಗೇಡಿಯರ್ ವಿಶಾಲ್‌ವರ್ಮಾ ಅವರ ತುರ್ತು ಮನವಿ ಮೇರೆಗೆ ಕಂಪನಿಯ ಆರು ಜನರು ಅಲ್ಲಿಗೆ ತೆರಳಿದ್ದಾರೆ. ಈ ಕೌಶಲ್ಯಪೂರ್ಣ ಡ್ರೋನ್ ಪೈಲೆಟ್‌ಗಳು ಮತ್ತು ಭೂ ತಾಂತ್ರಿಕ ಪರಿಣತರ ತಂಡ ಎರಡು ಉನ್ನತ ತಂತ್ರಜ್ಞಾನದ ಡ್ರೋನ್‌ಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರ ಡ್ರೋನ್ ಸುರಂಗದ ಒಳಭಾಗವನ್ನು ಸ್ಕ್ಯಾನ್ ಮಾಡಿ ಗಟ್ಟಿಯಾದ ಸ್ಥಳವನ್ನು ಪತ್ತೆ ಮಾಡಿ ತಿಳಿಸಲಿದ್ದಾರೆ ಎಂದು ಕಂಪನಿ ಮುಖ್ಯಸ್ಥರು ತಿಳಿಸಿದರು.
ಜೊತೆಗೆ ತಂಡ ಸುರಂಗದ ಒಳಗಡೆ ಡ್ರೋನ್‌ಗಳನ್ನು ನಡೆಸುವ ಸಾಮರ್ಥ್ಯ ಹೊಂದಿದೆ. ಇವರು ಈ ಪ್ರದೇಶದ ನೀಲನಕ್ಷೆ ರಚಿಸಲು ನೆರವಾಗಲಿದ್ದಾರೆ. ಭೂಗತ ಉಪಯೋಗಗಳಿಗೆ ಮತ್ತು ಸುಲಭವಾಗಿ ಸಂಪರ್ಕ ಸಾಧ್ಯವಾಗದ ಸುರಂಗದ ದೂರದ ಸ್ಥಳಗಳಲ್ಲಿ ಮ್ಯಾಪ್‌ಗಳನ್ನು ರಚಿಸಲು ಅಗತ್ಯವಾದ ಡ್ರೋನ್ ತಂತ್ರಜ್ಞಾನವನ್ನು ಸ್ಕ್ವಾಡ್ರೋನ್ ಹೊಂದಿದೆ. ಸುರಂಗದ ಒಳನೋಟ ಖಾತ್ರಿ ಮಾಡಿಕೊಡುವುದು, ಭೂ ತಾಂತ್ರಿಕ ಮತ್ತು ರಕ್ಷಣಾ ಪರಿಹಾರ ತಂಡಗಳಿಗೆ ಕ್ಷಣ ಕ್ಷಣದ ಮಾಹಿತಿಯನ್ನು ಪೂರೈಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಕಂಪನಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ