ತ್ತರನ್ನಡ ಜಿಲ್ಲೆಯ ಬಹುವರ್ಷದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಮಾತುಗಳನ್ನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಹುದಿನಗಳ ಬೇಡಿಕೆ ಇನ್ನಾದ್ರು ಈಡೇರಲಿದ್ಯಾ?
ಬೆಂಗಳೂರು/ ಕಾರವಾರ, (ಸೆಪ್ಟೆಂಬರ್ 15): ಉತ್ತರನ್ನಡ ಜಿಲ್ಲೆಯ ಬಹುವರ್ಷದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಕನಸಿಗೆ ಮತ್ತೆ ರಾಜ್ಯ ಸರ್ಕಾರ ತಣ್ಣೀರೆರಚಿದೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮಂಜೂರಾತಿಗೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ.
ಆದ್ರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ ಸೂಚಿಸಿದ್ದಾರಂತೆ. ಈ ಬಗ್ಗೆ ನಿನ್ನೆ (ಸೆಪ್ಟೆಂಬರ್.16) ವಿಧಾನಸೌಧದಲ್ಲಿ ಕಾಲಪ ಮುಗಿದ ಮೇಲೆ ಪ್ರತ್ಯೇಕವಾಗಿ ಸಿಎಂ ಬೊಮ್ಮಾಯಿ ಅವರನ್ನು ಶಾಸಕಿ ರೂಪಾಲಿ ನಾಯ್ಕ್ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಗೆ ಸಿಎಂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ರೂಪಾಲಿ ನಾಯ್ಕ್ ತಿಳಿಸಿದ್ದಾರೆ.
Uttara Kannada; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಗೆ ಬ್ರೇಕ್, ಜನರ ಕೆಂಗಣ್ಣಿಗೆ ಸರಕಾರ!
ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಬೇಕು ಎಂದು ರೂಪಾಲಿ ನಾಯ್ಕ್ ಅವರು ಸಿಎಂ ಬಳಿ ಮತ್ತೆ ಮನವಿ ಇಟ್ಟಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಆರ್ಥಿಕ ಇಲಾಖೆಯ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸದನದಲ್ಲಿ ಇದರ ಬಗ್ಗೆ ಮುಖ್ಯಮಂತ್ರಿಗಳು ಅಧಿಕೃತವಾಗಿ ಘೊಷಿಸುವ ಸಾಧ್ಯತೆ ಇದೆ.
ಈ ಹಿಂದೆ ಸದನದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿಲ್ಲ ಎಂದು ಸುಧಾಕರ್ ಅನುಪಸ್ಥಿತಿಯಲ್ಲೂ ಅವರು ಅಧಿವೇಶನಕ್ಕೆ ಲಿಖಿತ ರೂಪದಲ್ಲಿಉತ್ತರ ಕಳುಹಿಸಿದ್ದರು. ಈಗ ಸಿಎಂ ಆಸ್ಪತ್ರೆ ಮಂಜೂರು ಮಾಡಿಕೊಡುವ ಭರವಸೆಯಿಂದ ಉತ್ತರ ಕನ್ನಡ ಜಿಲ್ಲೆಯ ಬಹುದಿನಗಳ ಬೇಡಿಕೆ ಇನ್ನಾದ್ರು ಈಡೇರಲಿದ್ಯಾ? ಎನ್ನುವುದನ್ನು ಕಾದುನೋಡಬೇಕಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವೀರೋಧ
ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಸೌಲಭ್ಯಕ್ಕಾಗಿ ಅಗತ್ಯವಿರುವ ಜಾಗ, ಸಿಬ್ಬಂದಿ, ಉಪಕರಣ ಹಾಗೂ ಇತ್ಯಾದಿ ಮೂಲ ಸೌಲಭ್ಯಗಳು ಹಾಗೂ ಅದಕ್ಕೆ ತಗಲುವ ಆರ್ಥಿಕ ಹೊರೆಯ ವಿವರಗಳ ಪ್ರಸ್ತಾವನೆ ಪಡೆದಿದ್ದ ರಾಜ್ಯ ಸರ್ಕಾರ ಆರ್ಥಿಕ ಇಲಾಖೆಗೆ ಸಲ್ಲಿಕೆ ಮಾಡಿತ್ತು. ಆದರೆ ಆರ್ಥಿಕ ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ ಎಂದು ಗುರುವಾರ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಅಧಿವೇಶನದಲ್ಲಿ ಲಿಖಿತ ರೂಪದ ಉತ್ತರ ನೀಡಿದ್ದಾರೆ. ಆದರೆ ಇದಕ್ಕೆ ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವೀರೋಧ ವ್ಯಕ್ತವಾಗತೊಡಗಿದೆ.
ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿರುವ ಉತ್ತರಕನ್ನಡದಲ್ಲಿ ಸೂಕ್ತ ಆಸ್ಪತ್ರೆಗಳಿಲ್ಲ. ಕಳೆದ ಹಲವು ದಶಕಗಳಿಂದ ಸುಸಜ್ಜಿತ ಆಸ್ಪತ್ರೆಗಾಗಿ ಹೋರಾಟ ನಡೆಸಿದರೂ ಜಿಲ್ಲೆಯ ಜನರ ಮನವಿಗಳನ್ನು ಮತ್ತೆ ಮತ್ತೆ ತಳ್ಳಿಹಾಕಲಾಗುತ್ತಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಟ್ವಿಟ್ಟರ್ ಅಭಿಯಾನ, ಪ್ರಧಾನಿಗೆ ರಕ್ತದಲ್ಲಿ ಪತ್ರ, ಮೆರವಣಿಗೆ ಸೇರಿದಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ದೊಡ್ಡ ಹೋರಾಟ ನಡೆಸಲಾಗಿತ್ತು.