
ಬೆಂಗಳೂರು(ಫೆ.14): ಫೆ.17 ರಂದು ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರದಲ್ಲಿ ‘ವಿಶ್ವಗುರು ಬಸವಣ್ಣ- ಸಾಂಸ್ಕೃತಿಕ ನಾಯಕ’ ಎಂಬ ಘೋಷವಾಕ್ಯ ಹೆಸರಿಸಿ ಅನಾವರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕರಾದ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣ ಮಾಡಿ ಅವರು ಮಾತನಾಡಿದರು.
ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸಬೇಕು ಎಂದು ಈ ಹಿಂದೆ ಆದೇಶ ಹೊರಡಿಸಲಾಗಿತ್ತು. ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದರಿಂದ ಫೆ.17 ರಂದು ಸರ್ಕಾರಿ ಕಚೇರಿಗಳಲ್ಲಿರುವ ಬಸವಣ್ಣನವರ ಭಾವಚಿತ್ರಗಳಲ್ಲಿ ‘ವಿಶ್ವಗುರು ಬಸವಣ್ಣ- ಸಾಂಸ್ಕೃತಿಕ ನಾಯಕ’ ಎಂಬ ಘೋಷವಾಕ್ಯ ರಾರಾಜಿಸಲಿದೆ ಎಂದು ವಿವರಿಸಿದರು.
ಗದಗನಲ್ಲಿ ಗಮನ ಸೆಳೆದ ಫಲಪುಷ್ಪ ಪ್ರದರ್ಶನ: ಹೂವಿನ ಚಿತ್ತಾರದಲ್ಲಿ ಅರಳಿದ ಸಾಂಸ್ಕೃತಿಕ ರಾಯಭಾರಿ ಬಸವಣ್ಣ..!
ಬಸವಣ್ಣನವರು ನುಡಿದಂತೆ ನಡೆದರು. ವರ್ಗರಹಿತ, ಜಾತಿರಹಿತ, ಮೌಢ್ಯಗಳಿಲ್ಲದ ವೈಚಾರಿಕ ಸಮಾಜ ಸ್ಥಾಪನೆಯ ಆಶಯದಿಂದ ಕನ್ನಡದಲ್ಲೇ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ವಚನಗಳನ್ನು ರಚಿಸಿ ಜಾಗೃತಿ ಮೂಡಿಸಿದರು. ಕಾಯಕ, ದಾಸೋಹವನ್ನು ಬೋಧಿಸಿದ ಬಸವಣ್ಣನವರು ಯಾರೂ ಕುಳಿತು ತಿನ್ನದೇ ಕಾಯಕದಲ್ಲಿ ತೊಡಗಬೇಕೆಂದು ಪ್ರತಿಪಾದಿಸಿದರು. ಎಲ್ಲರಿಗೂ ಸಮಪಾಲು, ಸಮಬಾಳು ಎಂದು ಬಸವಾದಿ ಶರಣರು, ಅಂಬೇಡ್ಕರ್ ಹೇಳಿದ್ದರು ಎಂದು ತಿಳಿಸಿದರು.
ಕರ್ಮ ಸಿದ್ಧಾಂತ ತಿರಸ್ಕರಿಸಿ:
ಬಸವಣ್ಣನವರ ಕಾರ್ಯಕ್ರಮಗಳಿಗೆ ಅನುದಾನದ ಕೊರತೆಯ ಮಾತೇ ಇಲ್ಲ. ಬಸವಣ್ಣನವರ ತತ್ವ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಬಸವಾದಿ ಶರಣರು ಕರ್ಮ ಸಿದ್ಧಾಂತ ತಿರಸ್ಕರಿಸಿದ್ದರು. ಹಿಂದಿನ ಜನ್ಮವೂ ಇಲ್ಲ, ಮುಂದಿನ ಜನ್ಮವೂ ಇಲ್ಲ ಎಂದು ಪ್ರತಿಪಾದಿಸಿದ್ದರು. ಆದರೆ ಕೆಲವರು ಹಣೆ ಬರಹ, ಕರ್ಮ ಎಂದು ಹೇಳಿ ಹೇಳಿ ಜನರಲ್ಲಿ ಮೌಢ್ಯ, ಕೀಳರಿಮೆ ಬಿತ್ತುತ್ತಿದ್ದಾರೆ. ಸ್ವಾರ್ಥಿಗಳು ಹೇಳುವ ಇಂತಹ ಮಾತುಗಳನ್ನು ನಂಬಬೇಡಿ ಎಂದು ಕರೆ ನೀಡಿದರು.
‘ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನ್ನು...’ ಎಂಬ ಬಸವಣ್ಣನವರ ವಚನದಂತೆ ಎಲ್ಲರೂ ಹಂಚಿ ತಿನ್ನಬೇಕು. ಸಂಪತ್ತು ಸಮನಾಗಿ ಹಂಚಿಕೆಯಾಗಬೇಕು. ಕೆಲವೇ ಜನರಲ್ಲಿ ಸಂಪತ್ತು ಕ್ರೋಢೀಕರಣ ಆಗಬಾರದು ಎಂಬ ಆಶಯ ಬಸವಾದಿ ಶರಣರದಾಗಿತ್ತು. ಅನುಭವ ಮಂಟಪದ ಮೂಲಕ ಬಸವಣ್ಣವರು ಅಂದೇ ಅಂತರ್ಜಾತಿ ವಿವಾಹ ಮಾಡಿಸಿ ಮೇಲ್ಪಂಕ್ತಿ ಹಾಕಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವಣ್ಣ, ಸಾಂಸ್ಕೃತಿಕ ನಾಯಕನೆಂದು ಬರೆಸುವಂತೆ ಸುತ್ತೋಲೆ: ಸಿಎಂ ಸಿದ್ದರಾಮಯ್ಯ
ವಿಧಾನ ಪರಿಷತ್ ಸಭಾಪತಿ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ವಿ.ಮುನಿಯಪ್ಪ, ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ಶಿವರಾಜ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಾಹಿತಿ ಗೊ.ರು.ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕರಾದ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು. ವಿಧಾನ ಪರಿಷತ್ ಸಭಾಪತಿ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ವಿ.ಮುನಿಯಪ್ಪ, ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ಶಿವರಾಜ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್, ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ