‘ಕಡಲೆಕಾಯಿ ಪರಿಷೆ’ಗೆ ಬಸವನಗುಡಿ ಸಜ್ಜು

By Web DeskFirst Published Dec 2, 2018, 11:27 AM IST
Highlights

ಐತಿಹಾಸಿಕ ‘ಕಡಲೆಕಾಯಿ ಪರಿಷೆ’ಗೆ ಬಸವನಗುಡಿ ಸಜ್ಜುಗೊಂಡಿದೆ. ಪರಿಷೆಗೆ ಕಾರ್ತಿಕ ಮಾಸದ ಕಡೆಯ ಸೋಮವಾರ ಡಿ.3ರಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ. ಎರಡು ದಿನಗಳು ನಡೆಯುವ ಪರಿಷೆಗೆ ಬಸವನಗುಡಿಯಾದ್ಯಂತ ಸಂಭ್ರಮ ಮನೆ ಮಾಡುತ್ತಿದೆ.

ಬೆಂಗಳೂರು[ಡಿ.02]: ಎತ್ತ ಕಣ್ಣಾಡಿಸಿದರೂ ರಾಶಿ ರಾಶಿ ಬಡವರ ಬಾದಾಮಿ, ವ್ಯಾಪಾರಕ್ಕೆ ಸಜ್ಜಾಗುತ್ತಿರುವ ವ್ಯಾಪಾರಿಗಳು, ಅಲಂಕಾರಗೊಂಡು ಕಂಗೊಳಿಸುತ್ತಿರುವ ದೊಡ್ಡ ಗಣಪತಿ ದೇವಾಲಯ... ಎಲ್ಲೆಡೆಯೂ ಮನಸೂರೆಗೊಳ್ಳುವ ಗ್ರಾಮೀಣ ಜಾತ್ರೆಯ ಸಂಭ್ರಮ!

ಇದು ರಾಜಧಾನಿ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಯ ವಾತಾವರಣ. ಪರಿಷೆಗೆ ಕಾರ್ತಿಕ ಮಾಸದ ಕಡೆಯ ಸೋಮವಾರ ಡಿ.3ರಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ. ಎರಡು ದಿನಗಳು ನಡೆಯುವ ಪರಿಷೆಗೆ ಬಸವನಗುಡಿಯಾದ್ಯಂತ ಸಂಭ್ರಮ ಮನೆ ಮಾಡುತ್ತಿದೆ.

ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳೆಲ್ಲ ಕಡಲೆಕಾಯಿ ಪರಿಷೆಗೆ ಸಜ್ಜಗೊಂಡಿದ್ದು, ವ್ಯಾಪಾರಿಗಳಿಂದ ತುಂಬಿ ಹೋಗಿದೆ. ಇನ್ನು ಪರಿಷೆಗೆ ಆಗಮಿಸುವ ಜನರಿಗೆ ಯಾವುದೇ ತೊಂದರೆಯಾಗದಂತೆ ದೇವಸ್ಥಾನ ಮಂಡಳಿ ಹಾಗೂ ಮುಜರಾಯಿ ಇಲಾಖೆ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಪ್ರತಿ ವರ್ಷದಂತೆ ಕಡಲೆಕಾಯಿ ಪರಿಷೆ ಪ್ರಯುಕ್ತ ಬ್ಯೂಗಲ್‌ ರಾಕ್‌, ನರಸಿಂಹಸ್ವಾಮಿ ಉದ್ಯಾನದಲ್ಲಿ ಡಿ.3 ಹಾಗೂ 4 ರಂದು ಸಂಜೆ 6 ರಿಂದ 10ಗಂಟೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ದೇವಸ್ಥಾನದ ಸುತ್ತಮುತ್ತಲ ರಸ್ತೆಗಳಲ್ಲಿ ಈಗಾಗಲೇ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ. ಪಾದಚಾರಿ ಮಾರ್ಗಗಳು ಮಕ್ಕಳ ಆಟದ ಸಾಮಾಗ್ರಿಗಳು, ಅಲಂಕಾರಿಕ ವಸ್ತುಗಳು, ತಿಂಡಿ ತಿನಿಸುಗಳ ವ್ಯಾಪಾರಿಗಳು ಸೇರಿದಂತೆ ವಿವಿಧ ವ್ಯಾಪಾರಿಗಳ ತಾಣವಾಗಿ ಮಾರ್ಪಟ್ಟಿದೆ. ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ… ಸೇರಿದಂತೆ ತಮಿಳುನಾಡು, ಆಂಧ್ರ ಹೀಗೆ ನಾನಾ ಭಾಗಗಳ ರೈತರು ಮಳಿಗೆಗಳನ್ನು ಹಾಕಿದ್ದಾರೆ.

ಪರಿಷೆಯಲ್ಲಿ ಒಂದು ಸೇರು ಹಸಿ ಕಡಲೆಕಾಯಿ .25 ಹಾಗೂ ಹುರಿದ ಕಡಲೆಕಾಯಿಗೆ .30 ದರ ನಿಗದಿಪಡಿಸಲಾಗಿದೆ. ಇನ್ನು ಬೇಯಿಸಿದ, ಉಪ್ಪು ಹಚ್ಚಿದ, ಮಸಾಲೆ ಕಡಲೆಕಾಯಿ ದರ ಸ್ವಲ್ಪ ಹೆಚ್ಚಿದೆ.

ಪ್ಲಾಸ್ಟಿಕ್‌ ಕವರ್‌ ಬಳಕೆಗೆ ನಿಷೇಧ

ಬಿಬಿಎಂಪಿ ಅಧಿಕಾರಿಗಳು ಪರಿಷೆಯಲ್ಲಿ ಪ್ಲಾಸ್ಟಿಕ್‌ ಕವರ್‌ ಬಳಕೆ ಕಡ್ಡಾಯವಾಗಿ ನಿಷೇಧ ಹೇರಿದ್ದಾರೆ. ಅಲ್ಲದೆ ‘ಕಡಲೆಕಾಯಿ ಪರಿಷೆಗೆ ಬನ್ನಿ, ಕೈಚೀಲ ತನ್ನಿ’ ಅನ್ನೋ ಧ್ಯೇಯ ವಾಕ್ಯದಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ ಶಾಲಾ-ಕಾಲೇಜು, ಸಂಘ ಸಂಸ್ಥೆಗಳು ಕಾಗದ ಹಾಗೂ ಬಟ್ಟೆಬ್ಯಾಗ್‌ಗಳನ್ನು ವಿತರಿಸುತ್ತಿದ್ದಾರೆ.

ಪರಿಷೆಗೆ ಮೂರು ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾ, ಸೂಕ್ತ ಭದ್ರತೆ ಕಲ್ಪಿಸಲು ಪೊಲೀಸ್‌ ಇಲಾಖೆ ಕೂಡ ಎಚ್ಚರಿಕೆ ವಹಿಸಿದೆ. ಇನ್ನು ಪೊಲೀಸ್‌ ಸಿಬ್ಬಂದಿಗೆ ಶನಿವಾರದಿಂದ ಬುಧವಾರದವರೆಗೂ ದೇವಸ್ಥಾನ ಆಡಳಿತ ಮಂಡಳಿ ಊಟ, ಉಪಾಹಾರದ ವ್ಯವಸ್ಥೆ ಮಾಡಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಇ-ಶೌಚಾಲಯ ಕಲ್ಪಿಸಲಾಗಿದೆ. ಭಕ್ತಾದಿಗಳು ಸುಗಮವಾಗಿ ದೇವರ ದರ್ಶನ ಪಡೆಯಲು ಅನುವಾಗುವಂತೆ ಬ್ಯಾರಿಕೇಡ್‌ ಹಾಕುವ ಮೂಲಕ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ವಾಹನ ಸಂಚಾರ ಸ್ಥಗಿತ

ರಾಮಕೃಷ್ಣ ಆಶ್ರಮ ವೃತ್ತದಿಂದ ಎನ್‌.ಆರ್‌.ಕಾಲೋನಿ, ಗಣೇಶ್‌ಭವನದವರೆಗೂ ವ್ಯಾಪಾರಿಗಳು ಮಳಿಗೆ ಹಾಕುತ್ತಾರೆ. ಈ ಹಿನ್ನೆಲೆ ರಾಮಕೃಷ್ಣ ಆಶ್ರಮ ಸರ್ಕಲ್‌ನಿಂದ ಬಸವನಗುಡಿ ರಸ್ತೆಯ ಕಡೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಆ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ಎಲ್ಲ ವಾಹನಗಳು ಹನುಮಂತನಗರದ ಮೂಲಕ ಸಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಪರಿಷೆಗೆ ಆಗಮಿಸುವವರಿಗೆ ಎಪಿಎಸ್‌ ಕಾಲೇಜು, ಕೋಹಿನೂರು ಮೈದಾನ ಹಾಗೂ ಉದಯಭಾನು ಮೈದಾನದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇದೆ.

ವಿಶೇಷ ಪೂಜಾ ಕೈಂಕರ್ಯಗಳು

ಡಿ.3ರ ಸೋಮವಾರ ಬೆಳಗ್ಗೆ 6ರಿಂದ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಹೂವಿನ ಅಲಂಕಾರ, ಎಣ್ಣೆ ಮರ್ಜನ ಹಾಗೂ 5 ಮೂಟೆ ಕಡಲೆಕಾಯಿ ಅಭಿಷೇಕ ನಡೆಯಲಿದೆ. ನಂತರ ಬೆಳಗ್ಗೆ 10ಕ್ಕೆ ಕಡಲೆಕಾಯಿ ಪರಿಷೆಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಅಂದು ಸುಮಾರು 40 ಕೆ.ಜಿ ತೂಕದ ಬಸವಣ್ಣನ ಮೂರ್ತಿಯೊಂದಿಗೆ ಕಡಲೆಕಾಯಿಯ ತುಲಾಭಾರ ನೆರವೇರಲಿದೆ. ಭಕ್ತಾದಿಗಳು ಬೆಳಗ್ಗೆ 6ರಿಂದ ರಾತ್ರಿ 11ರವರೆಗೆ ದೇವರ ದರ್ಶನ ಪಡೆಯಬಹುದು.

ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಅಳತೆಯಲ್ಲಿ ಮೋಸ ಮಾಡುವವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಹಾಗೇನಾದರೂ ವ್ಯಾಪಾರದಲ್ಲಿ ಮೋಸ ಕಂಡುಬಂದಲ್ಲಿ ಸಾರ್ವಜನಿಕರು ಮೊ.ನಂ.95353 05458 ದೂರು ನೀಡಬಹುದು.

ಫೋಟೋ ಕೃಪೆ: ಶ್ರೀನಿಧಿ ಶ್ರೀಕರ್

click me!