
ಬೆಂಗಳೂರು(ನ.19): ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳು ಹಾಗೂ ವಿವಾದಾತ್ಮಕ ಪುಸ್ತಕ 'ಬಸವ ಮಂಟಪ' ವಿಚಾರವಾಗಿ ಇದೀಗ ಕರ್ನಾಟಕದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.
ಅಮೆರಿಕದಲ್ಲಿ ನೆಲೆಸಿರುವ, ದಾವಣಗೆರೆ ಮೂಲದ ಲೇಖಕ ರವಿ ಹಂಜ್(Ravi Hanj) ಅವರು ಬರೆದಿರುವ 'ಬಸವ ಮಂಟಪ' ಕೃತಿಯಲ್ಲಿನ ಕೆಲವು ಬರಹಗಳು ಮತ್ತು ಸಂದರ್ಶನದಲ್ಲಿ ನೀಡಿರುವ ಹೇಳಿಕೆಗಳಲ್ಲಿ ಬಸವಣ್ಣನವರು ಮತ್ತು ಲಿಂಗಾಯತ ಸಮುದಾಯವನ್ನು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಂದು ಚಾಲುಕ್ಯ ಸರ್ಕಲ್ ನಲ್ಲಿರುವ ಬಸವ ಮಂಟಪದಲ್ಲಿ ಇದೇ ವಿಚಾರವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಎಂ.ಬಿ. ಪಾಟೀಲ್, ಶರಣ ಪ್ರಕಾಶ ಪಾಟೀಲ್, ಆಳಂದ ಶಾಸಕ ಶ್ರೀ ಬಿ.ಆರ್. ಪಾಟೀಲ್, ಬಸವ ಸಮಿತಿಯ ಅರವಿಂದ ಜತ್ತಿ, ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ ಮಾಜಿ ಉಪಮೇಯರ್ , ಸಿ ಎಸ್ ಪುಟ್ಟರಾಜು ಭಾಗಿಯಾಗಿ ಲೇಖಕ ರವಿ ಹಂಜ್ ವಿರುದ್ಧ ಕಿಡಿಕಾರಿದ್ದು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ರವಿ ಹಂಜ್ ಎಂಬ ಓರ್ವ ವ್ಯಕ್ತಿ ಬಸವಣ್ಣವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬಸವಣ್ಣನವರು ಜಗತ್ತಿಗೆ ಮೊಟ್ಟ ಮೊದಲು ಪಾರ್ಲಿಮೆಂಟ್ ಕೊಟ್ಟವರು, ಕನ್ನಡದಲ್ಲಿ ವಚನ ಬರೆದವರು, ಆ ಮೂಲಕ ಜನರನ್ನು ಸಮಾಜವನ್ನು ತಿದ್ದುವ ಕೆಲಸ ಮಾಡಿದವರು. ಮಹಿಳೆಯರಿಗೆ ಸಮಾನತೆ , ಕೊಡಬೇಕು ಎಂದವರು. ಆದರೆ ಅಂತಹ ಮಾನವತಾವಾದಿ ಬಸವಣ್ಣನವರನ್ನು ಈ ರವಿ ಹಂಜ್ ಎಂಬ ವ್ಯಕ್ತಿ ಕ್ರಿಮಿನಲ್ ಮಾಡೋಕೆ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರವಿ ಹಂಜ್‌ನಂತ ವ್ಯಕ್ತಿಗಳು ಇಂದಲ್ಲ, 12 ನೇ ಶತಮಾನದಲ್ಲೇ ಇಂಥವರಿದ್ದರು. ಈತ ಮಾತ್ರ ಅಲ್ಲ, ಹಿಂದಿನಿಂದಲೂ ಬಸವಣ್ಣನವರ ಅವಮಾನಿಸುವ ಇಂಥ ಕೃತ್ಯ ನಡೆಯುತ್ತಲೇ ಇದೆ. ಈತ ತಾನೊಬ್ಬ ದೊಡ್ಡ ಸಂಶೋಧಕನ ರೀತಿ ಮಾತನಾಡುತ್ತಿದ್ದಾನೆ. ಬಸವಣ್ಣನವರಿಗೆ ಕೊಲೆಗಾರ ಎಂದಿದ್ದಾನೆ. ವಿಶ್ವೇಶ್ವರ ಭಟ್ಟರಿಗಾದ್ರೂ ಗೊತ್ತಾಗಲಿಲ್ಲವಾ? ಎಂದು ಪ್ರಶ್ನಿಸಿದರು. ಮುಂದುವರಿದು ನೀವು ನಿಮ್ಮ ಧರ್ಮ ಪ್ರಚಾರ ಮಾಡಿ ನಾವು ಬಸವ ಧರ್ಮ ಪ್ರಚಾರ ಮಾಡ್ತೇವೆ ಎಂದು ಸವಾಲು ಹಾಕಿದರು.
ನಾವು ಸುಮ್ಮನಿರಲು ಸಾಧ್ಯವಿಲ್ಲ. ಬಸವಣ್ಣನವರನ್ನ ಅವಮಾನಿಸಿರುವ ಈ ವಿಚಾರವನ್ನು ನಾವು ಮುಖ್ಯಮಂತ್ರಿ ಗಮನಕ್ಕೆ ತಂದು ರವಿ ಹಂಜ್ ಎಂಬಾತನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ ಮಾಡುತ್ತೇವೆ. ನಾವು ನಮ್ಮ ಧರ್ಮ ಪ್ರೀತಿಸಬೇಕು, ಬೇರೆಯವರ ಧರ್ಮವನ್ನು ಗೌರವಿಸಬೇಕು ಹೊರತು ಈ ರೀತಿ ಅವಮಾನ, ಅಪ್ರಚಾರ ಮಾಡುವುದಲ್ಲ ಸಾಂಸ್ಕೃತಿಕ ನಾಯಕನಾಗಿರುವ ಬಸವಣ್ಣವರಿಗೆ ಅವಹೇಳನ ಮಾಡಿದ್ದಾರೆ ಕ್ರಮ ಆಗಲೇಬೇಕು ಎಂದರು.
'ಬಸವ ಮಂಟಪ' ಪುಸ್ತಕ ಲೋಕಾರ್ಪಣೆ ಮಾಡಲು ನಮ್ಮ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವ್ರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಚಪ್ಪಾಳೆ ಹೊಡೆದ್ರು ಇಂಥವರು ಭಾಗವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ನಾವು ಲಿಂಗಾಯತರು ಸೌಮ್ಯವಾದಿಗಳು. ನಮ್ಮ ಬಸವಣ್ಣ ನಮಗೆ ಕೆಟ್ಟದ್ದನ್ನೆಲ್ಲ ಕಲಿಸಿಲ್ಲ. ಈ ರವಿ ಹಂಜ್ ಎಂಬಾತ ಸ್ವಾಮಿಗಳಿಗೆ ಕರೆ ಮಾಡಿ ಬೈತಾನೆ, ಹೀಗೆ ಬಿಟ್ಟರೆ ಮುಂದೆ ಬಸವಧರ್ಮದ ಮೇಲೆ ದಾಳಿಯೂ ಮಾಡ್ತಾರೆ ಅವ್ರನ್ನ ನಾವು ಸುಮ್ಮನೆ ಬಿಡಲ್ಲ. ವಿಮರ್ಶೆ ಇರಲಿ, ಆದರೆ ಇಲ್ಲಿ ಬಸವಣ್ಣವರನ್ನು ಕೊಲೆಗಾರ ಅಂದಿದ್ದಾರೆ. ನಾವು ಲಿಂಗ ಹಾಕ್ತೇವೆ ಅದನ್ನ ಇವರು 'ಲಿಂಗ ಹತರು' ಅಂದು ಅವಮಾನ ಮಾಡಿದ ಈತ ಸಂಶೋಧಕನಾ? ಎಂದು ಗರಂ ಆದ ಸಚಿವರು.
ಮುಂದುವರಿಯುವುದು..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ