ಕೊರೋನಾ ಕಾಟಕ್ಕೆ ಬಳಲಿ ಬೆಂಡಾದ ಕ್ಷೌರಿಕರು: ಸಲೂನ್‌ನತ್ತ ಮುಖಮಾಡದ ಜನ..!

By Kannadaprabha NewsFirst Published May 23, 2020, 11:55 AM IST
Highlights

ಸ್ಪಾ, ಸಲೂನ್‌, ಬ್ಯೂಟಿ ಪಾರ್ಲರ್‌ನತ್ತ ತಿರುಗಿ ನೋಡದ ಗ್ರಾಹಕರು| ಕ್ಷೌರಿಕರಿಗೆ ಹೊರೆಯಾದ ಸರ್ಕಾರದ ಕಠಿಣ ನಿರ್ದೇಶನ| ಬೆಂಗಳೂರಿನಲ್ಲಿ ಅರ್ಧಕರ್ಧ ಸೆಲೂನ್‌ಗಳು ತೆರೆದಿಲ್ಲ|

ಬೆಂಗಳೂರು(ಮೇ.23): ಲಾಕ್‌ಡೌನ್‌ ಅವಧಿಯಲ್ಲಿ ಸತತ 55 ದಿನಗಳ ಕಾಲ ಕ್ಷೌರದ ಅಂಗಡಿ ಮುಚ್ಚಿದ್ದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕ್ಷೌರಿಕರಿಗೆ ಇದೀಗ ಗ್ರಾಹಕರ ತೀವ್ರ ಕೊರತೆ ಉಂಟಾಗಿದ್ದು ಹೊಸ ಸಂಕಷ್ಟಗಳು ಸೃಷ್ಟಿಯಾಗಿವೆ.

ಕ್ಷೌರದ ಅಂಗಡಿ ನಡೆಸಲು ಸರ್ಕಾರ ಸೂಚಿಸಿರುವ ಕಠಿಣ ಮಾರ್ಗಸೂಚಿ ಹಾಗೂ ಗ್ರಾಹಕರ ತೀವ್ರ ಕೊರತೆಯಿಂದ ಅನುಮತಿ ಸಿಕ್ಕರೂ ಕ್ಷೌರದ ಅಂಗಡಿ ನಡೆಸಲಾಗದ ಸ್ಥಿತಿಗೆ ತಲುಪಿದ್ದು, ನಮ್ಮ ಬದುಕು ಬಾಣಲಿಯಿಂದ ಬೆಂಕಿಗೆ ಬಿದ್ದಂತಾಗಿದೆ ಎಂದು ಕ್ಷೌರಿಕರು ಸಂಕಷ್ಟತೋಡಿಕೊಂಡಿದ್ದಾರೆ.

ಲಾಕ್‌ಡೌನ್‌: ಕೊಡಗಿನಲ್ಲಿ 2 ಸಾವಿರಕ್ಕೂ ಅಧಿಕ ಕ್ಷೌರಿಕರು ಕೆಲಸವಿಲ್ಲದೆ ಕಂಗಾಲು!

ರಾಜ್ಯ ಸರ್ಕಾರವು ಮೇ 19 ರಂದು ಲಾಕ್‌ಡೌನ್‌ ಸಡಿಲಿಕೆ ಮಾಡಿ ಸಲೂನ್‌, ಸ್ಪಾ, ಬ್ಯೂಟಿ ಪಾರ್ಲರ್‌ಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿತ್ತು. ಆದರೆ, ಪ್ರಸ್ತುತ ಕೊರೋನಾ ಭೀತಿಯಿಂದ ಮೂರು ವಿಭಾಗಗಳ ಅಂಗಡಿಗಳಿಗೂ ಗ್ರಾಹಕರ ತೀವ್ರ ಕೊರತೆ ಉಂಟಾಗಿದೆ. ಬಹುತೇಕ ಅಂಗಡಿಗಳು ಗ್ರಾಹಕರಿಲ್ಲದೆ ಬಣಗುಡುತ್ತಿವೆ.

ಇದರ ನಡುವೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿ ಪ್ರತಿ ಅಂಗಡಿಯಲ್ಲಿ ಸ್ಯಾನಿಟೈಸರ್‌, ಮಾಸ್ಕ್‌ ಬಳಕೆ, ತಲೆಗವಸು ಮತ್ತು ಎಪ್ರಾನ್‌ ಧರಿಸುವುದು ಕಡ್ಡಾಯ. ಅಲ್ಲದೆ ಒಬ್ಬ ಗ್ರಾಹಕನಿಗೆ ಬಳಸಿದ ಬಟ್ಟೆ, ಟವೆಲ್‌, ಪೇಪರ್‌ ಬೇರೊಬ್ಬರಿಗೆ ಬಳಸುವಂತಿಲ್ಲ. ಒಬ್ಬರಿಗೆ ಬಳಸಿದ ಸಾಧನವನ್ನು ಕನಿಷ್ಠ 30 ನಿಮಿಷ ಸೋಂಕು ನಿವಾರಕ ದ್ರಾವಣದಲ್ಲಿ ಇಡಬೇಕು. ಹೀಗಾಗಿ ಹೆಚ್ಚುವರಿಯಾಗಿ ಹೇರ್‌ ಕಟಿಂಗ್‌ ಕಿಟ್‌ಗಳನ್ನು ಇಟ್ಟುಕೊಳ್ಳಬೇಕು ಎಂದು ಸರ್ಕಾರ ಹೇಳಿದೆ. ಇಷ್ಟೆಲ್ಲಾ ವೆಚ್ಚ ಭರಿಸಿ ಹೇಗೆ ನಿರ್ವಹಣೆ ಮಾಡಲು ಸಾಧ್ಯ ಎಂದು ಕ್ಷೌರಿಕರು ಪ್ರಶ್ನಿಸಿದ್ದಾರೆ.

ಇವೆಲ್ಲಾ ಕಾರಣದಿಂದ ಬೆಂಗಳೂರು ಸೇರಿ ರಾಜ್ಯದಲ್ಲಿರುವ 3 ಲಕ್ಷ ಸಲೂನ್‌ ಅಂಗಡಿಗಳ ಪೈಕಿ ಕೇವಲ ಅರ್ಧದಷ್ಟೂ ಸಹ ಬಾಗಿಲು ತೆರೆದಿಲ್ಲ. ಬೆಂಗಳೂರಿನಲ್ಲಂತೂ 80 ಸಾವಿರ ಅಂಗಡಿಗಳ ಪೈಕಿ 35 ಸಾವಿರ ಅಂಗಡಿ ತೆಗೆದಿದ್ದರೆ ಹೆಚ್ಚು ಎನ್ನುತ್ತಾರೆ ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಎನ್‌. ಸಂಪತ್‌ಕುಮಾರ್‌.

ಲಾಕ್‌ಡೌನ್‌ ಎಫೆಕ್ಟ್: ಸೆಲೂನ್‌ ಶಾಪ್‌ ಬಂದ್‌, ಮನೆ ಬಾಗಿಲಿಗೆ ಕ್ಷೌರಿಕರು!

ಕಷ್ಟಪಟ್ಟು ತೆರೆದರೂ ಗ್ರಾಹಕರಿಲ್ಲ:

ನಿಯಮ ಪಾಲಿಸಿ ಬೆಳಗ್ಗೆಯಿಂದ ಸಂಜೆಯವರಿಗೆ ಅಂಗಡಿಯಲ್ಲಿದ್ದರೂ ಮೂರ್ನಾಲ್ಕು ಮಂದಿ ಗ್ರಾಹಕರೂ ಬರುತ್ತಿಲ್ಲ. ಸಾಮಾನ್ಯ ದಿನಗಳಲ್ಲಿ 4-5 ದಿನಗಳಲ್ಲಿ ಆಗುತ್ತಿದ್ದ ಗಳಿಕೆ ಭಾನುವಾರ ಒಂದೇ ದಿನ ಆಗುತ್ತಿತ್ತು. ಸ್ಥಳೀಯ ಮೂಲ ನಿವಾಸಿಗಳು, ಬೆಂಗಳೂರಿನಲ್ಲೇ ನೆಲೆಸಿದ್ದ ವಲಸಿಗರಿಂದ ವ್ಯಾಪಾರ ಚೆನ್ನಾಗಿತ್ತು. ಇದೀಗ ವಿವಿಧ ಕಾರಣಗಳಿಗೆ ಗ್ರಾಹಕರೇ ಇಲ್ಲದಂತಾಗಿದ್ದಾರೆ ಎಂದು ಕ್ಷೌರಿಕರು ಅಳಲು ತೋಡಿಕೊಂಡರು.

5,000 ಪರಿಹಾರವೂ ಕೈ ಸೇರಿಲ್ಲ

ಗ್ರಾಹಕರ ಕೊರತೆ, ಸರ್ಕಾರದ ನಿಯಮದಿಂದ ಮತ್ತಷ್ಟುಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸರ್ಕಾರ ಕ್ಷೌರಿಕರಿಗೆ .5 ಸಾವಿರ ಪರಿಹಾರ ಘೋಷಿಸಿ ಸುಮ್ಮನಾಗಿದೆ. ಈ ಬಗ್ಗೆ ಈವರೆಗೆ ಕನಿಷ್ಠ ಮಾನದಂಡಗಳನ್ನೂ ಪ್ರಕಟಿಸಿಲ್ಲ ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಎನ್‌.ಸಂಪತ್‌ ಕುಮಾರ್‌ ಅವರು ಹೇಳಿದ್ದಾರೆ. 
 

click me!