
ಬಾಗಲಕೋಟೆ (ಡಿ.5): ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಪ್ರಸಿದ್ಧ ಬಸವಗೋಪಾಲ ನೀಲಮಾಣಿಕ ಮಠದ ದಾನೇಶ್ವರ ಸ್ವಾಮೀಜಿ (75) ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿ 'ದಾಸೋಹ ಚಕ್ರವರ್ತಿ ಅನ್ನದಾನೇಶ್ವರ' ಎಂದೇ ಶ್ರೀಗಳು ಹೆಸರುವಾಸಿಯಾಗಿದ್ದರು..
ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ, ಲಿವರ್ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ಕು ದಿನಗಳ ಹಿಂದೆ ಅವರನ್ನು ಬೆಳಗಾವಿಯ ಕೆಎಲ್‌ಇ (KLE) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಿನ್ನೆ ರಾತ್ರಿ ಸುಮಾರು 11 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ. ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸ್ವಾಮೀಜಿ ಅಪಾರ ಭಕ್ತರನ್ನು ಹೊಂದಿದ್ದಾರೆ.
ಭಕ್ತರಿಗೆ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ: ಪಾರ್ಥಿವ ಶರೀರ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಿಂದ ಸ್ವಾಮೀಜಿಯ ಹುಟ್ಟೂರಾದ ಬೆಳಗಾವಿ ಜಿಲ್ಲೆಯ ಸವದಿ ಗ್ರಾಮಕ್ಕೆ ತಲುಪಲಿದೆ. ಅಲ್ಲಿ ಅಂತಿಮ ದರ್ಶನ ಬಳಿಕ ಬಂಡಿಗಣಿ ಮಠಕ್ಕೆ ರಾತ್ರಿ 10 ಗಂಟೆಗೆ ಆಗಮಿಸಲಿದೆ. ರಾತ್ರಿ 10 ರಿಂದ ನಾಳೆ (ಶನಿವಾರ) ಸಂಜೆ 4 ಗಂಟೆಯವರೆಗೆ ಭಕ್ತರಿಗೆ ಮಠದ ಆವರಣದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಂತ್ಯ ಸಂಸ್ಕಾರ:
ನಾಳೆ (ಶನಿವಾರ) ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ನಡೆಯಲಿದೆ.
ಸಿಎಂ ಸಿದ್ದರಾಮಯ್ಯರಿಂದ ಇತ್ತೀಚೆಗೆ ಶ್ಲಾಘನೆ
ಕಳೆದ ಅಕ್ಟೋಬರ್ 13 ರಂದು ಬಂಡಿಗಣಿ ಮಠದಲ್ಲಿ ನಡೆದ ವಿಶ್ವಾಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಿಎಂ ಅವರು, ಸ್ವಾಮೀಜಿ ಅವರು ಒಂದು ವರ್ಷದಲ್ಲಿ 187 ಬಾರಿ ಅನ್ನದಾನ ಮಾಡಿದ್ದಾರೆ ಎಂದು ಹಾಡಿ ಹೊಗಳಿದ್ದರು. ಅಲ್ಲದೆ, ಸ್ವಾಮೀಜಿ ಅವರ ವಯಸ್ಸನ್ನು ಕೇಳಿ 'ನಿಮಗೆ 75 ವಯಸ್ಸಲ್ವಾ, ನೀವು ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳಲಿ. ಆಯಸ್ಸು, ಆರೋಗ್ಯ, ಐಶ್ವರ್ಯ ಎಲ್ಲವನ್ನೂ ದೇವರು ಕೊಡಲಿ' ಎಂದು ಸಿದ್ದರಾಮಯ್ಯನವರು ಶುಭ ಹಾರೈಸಿದ್ದರು.
ಭಕ್ತರು ಶೀಘ್ರದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಬಂಡಿಗಣಿ ಮಠಕ್ಕೆ ಆಗಮಿಸುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ