ಬಳ್ಳಾರಿಯಲ್ಲಿ ವೈದ್ಯರಿಂದಲೇ ಕೊರೋನಾ ಆಸ್ಪತ್ರೆ| 100 ಬೆಡ್‌ನ ಆಸ್ಪತ್ರೆ ಶೀಘ್ರ ಶುರು| 50 ಬೆಡ್ ಸರ್ಕಾರಕ್ಕೆ| ಐಎಂಎ ಸದಸ್ಯ ವೈದ್ಯರ ಸಹಕಾರ| ರಾಜ್ಯದಲ್ಲಿ ಮೊದಲು
ಕೆ.ಎಂ.ಮಂಜುನಾಥ್
ಬಳ್ಳಾರಿ(ಜು.23): ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಬೆಡ್ ನೀಡಲು ಹಿಂದೇಟು ಹಾಕುತ್ತಿರುವ ಆರೋಪ ಕೇಳಿಬಂದಿರುವ ಸಂದರ್ಭದಲ್ಲೇ ನಗರದಲ್ಲಿ ವೈದ್ಯರ ಶ್ರಮದಿಂದಲೇ ‘ಖಾಸಗಿ ಕೊರೋನಾ ಆಸ್ಪತ್ರೆ’ಯೊಂದು ಸಿದ್ಧವಾಗುತ್ತಿದೆ! ಹಾಲಿ ಇರುವ ಖಾಸಗಿ ಆಸ್ಪತ್ರೆಯೊಂದನ್ನು ಕೊರೋನಾ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದ್ದು, ರಾಜ್ಯದಲ್ಲೇ ಮೊದಲನೆಯದಾಗಿರುವ ಈ ಪ್ರಯತ್ನಕ್ಕೆ ಪ್ರೇರಣೆಯಾಗಿ ನಿಂತಿರುವುದು ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಬಳ್ಳಾರಿ ಶಾಖೆ!
ಹೌದು ನಗರದ ಕಪ್ಪಗಲ್ ರಸ್ತೆಯ ಸುಸಜ್ಜಿತ ‘ಶಾವಿ’ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗಾಗಿ ಪರಿವರ್ತಿಸಲಾಗುತ್ತಿದ್ದು, ಇಲ್ಲಿ 100 ಹಾಸಿಗೆಗಳಿಗೆ ಬೇಕಾದ ಸಿಬ್ಬಂದಿ, ಅಗತ್ಯ ವೈದ್ಯಕೀಯ ಪರಿಕರಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸೋಂಕಿತರು, ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಐಎಂಎ ಇಂಥ ಪ್ರಯತ್ನಕ್ಕೆ ಕೈಹಾಕಿದೆ. ಐಎಂಎ ಪದಾಧಿಕಾರಿಗಳ ಒಂದು ತಿಂಗಳ ಸತತ ಪ್ರಯತ್ನದಿಂದಾಗಿ ಖಾಸಗಿ ಕೋವಿಡ್ ಆಸ್ಪತ್ರೆ ಬುಧವಾರದಿಂದ ರೋಗಿಗಳ ಸೇವೆಗೆ ಅಧಿಕೃತವಾಗಿ ಲಭ್ಯವಾಗಲಿದೆ.
ಗುಡ್ ನ್ಯೂಸ್: ರಾಜ್ಯದಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ಇಳಿಕೆ!
ಆಸ್ಪತ್ರೆಯ 100 ಹಾಸಿಗೆಗಳಲ್ಲಿ 50 ಹಾಸಿಗೆಗಳನ್ನು ಬಿಪಿಎಲ್ ಸೇರಿ ಇತರೆ ಆರೋಗ್ಯ ಕಾರ್ಡ್‌ಗಳನ್ನು ಹೊಂದಿರುವವರು ಬಳಕೆ ಮಾಡಿಕೊಳ್ಳಬಹುದು. ಅಂದರೆ ಜಿಲ್ಲಾಡಳಿತಕ್ಕೆ ಬಿಟ್ಟುಕೊಡಲಾಗುವುದು. ಉಳಿದ 50 ಹಾಸಿಗೆಗಳನ್ನು ಖಾಸಗಿಯವರಿಗೆ ಮೀಸಲಿಡಲಾಗಿದೆ. ಖಾಸಗಿಯಾಗಿ ಚಿಕಿತ್ಸೆ ಪಡೆಯಬಯಸುವವರಿಗೆ ಇಲ್ಲಿ ಪ್ರತಿದಿನಕ್ಕೆ .10 ಸಾವಿರದಂತೆ ದರ ನಿಗಡಿ ಮಾಡಲಾಗಿದೆ. ಹಾಗಂತ ಹಣವಿದೆ ಎಂದು ಸೋಂಕಿತರೆಲ್ಲರೂ ಇಲ್ಲಿ ಪ್ರವೇಶ ಪಡೆಯಲು ಅವಕಾಶವಿಲ್ಲ. ಸೋಂಕಿತನಿಗೆ ರೋಗದ ಲಕ್ಷಣಗಳು ಇರಬೇಕು. ನಿರ್ದಿಷ್ಟಸೋಂಕಿತನನ್ನು ದಾಖಲು ಮಾಡಿಕೊಳ್ಳುವಂತೆ ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಶಿಫಾರಸ್ಸು ಮಾಡಬೇಕು. ಆಗ ಮಾತ್ರ ದಾಖಲಿಸಿಕೊಂಡು ಅಗತ್ಯ ಚಿಕಿತ್ಸೆ ನೀಡಲಾಗುವುದು.
ವೈದ್ಯರ ಹಣ: ಈ ಖಾಸಗಿ ಕೋವಿಡ್ ಆಸ್ಪತ್ರೆ ನಿರ್ಮಾಣಕ್ಕೆ ಜಿಲ್ಲೆಯ 400ಕ್ಕೂ ಹೆಚ್ಚು ವೈದ್ಯರು ತಲಾ .3 ಸಾವಿರದಂತೆ ಹಣ ನೀಡಿದ್ದಾರೆ. ಅಲ್ಲದೆ, ಜಿಲ್ಲೆಯ ಖಾಸಗಿ ಆಸ್ಪತ್ರೆಯಯವರು ತಮ್ಮ ಆಸ್ಪತ್ರೆಯಲ್ಲಿರುವ ಹಾಸಿಗೆಗಳ ಅನುಗುಣವಾಗಿ ಪ್ರತಿ ಹಾಸಿಗೆಗೆ .1 ಸಾವಿರದಂತೆ ನೀಡಿದ್ದಾರೆ(ಉದಾ; 50 ಹಾಸಿಗೆಯುಳ್ಳ ಆಸ್ಪತ್ರೆ 50 ಸಾವಿರ ನೀಡಿದೆ). ಇದಲ್ಲದೆ, ಕೋವಿಡ್ ಆಸ್ಪತ್ರೆಯ ಸಮರ್ಪಕ ನಿರ್ವಹಣೆಗೆ ಆಯಾ ಆಸ್ಪತ್ರೆಯಿಂದ ಒಬ್ಬ ನರ್ಸ್ ಹಾಗೂ ಸಹಾಯಕಿ ನೀಡುವ ನಿರ್ಧಾರ ಕೈಗೊಂಡಿದ್ದು, ಡ್ಯೂಟಿ ವೈದ್ಯರು ಉಚಿತವಾಗಿ ಸೇವೆ ಮಾಡಲು ಮುಂದೆ ಬಂದಿದ್ದಾರೆ. ಈಗಾಗಲೇ ಉಚಿತ ಸೇವೆ ನೀಡಲು 50 ವೈದ್ಯರು ತಮ್ಮ ಹೆಸರು ನೋಂದಾಯಿಸಿದ್ದಾರೆ ಎನ್ನುತ್ತಾರೆ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು.
ಕೋವಿಡ್ ಆಸ್ಪತ್ರೆಗೆ ಲಕ್ಷಾಂತರ ಮೌಲ್ಯದ ನಾಲ್ಕೆ ೖದು ಆಕ್ಸಿಜನ್ ಯಂತ್ರಗಳು, ವೆಂಟಿಲೇಟರ್‌ಗಳು ಸೇರಿ ಅನೇಕ ವೈದ್ಯಕೀಯ ಪರಿಕರಗಳು ಬೇಕಾಗುತ್ತದೆ. ಎಲ್ಲವನ್ನು ವೈದ್ಯರಿಂದ ಸಂಗ್ರಹಿಸಿದ ಹಣದಲ್ಲಿಯೇ ಖರೀದಿ ಮಾಡಲಾಗಿದೆ ಎಂದು ಐಎಂಎಯ ರಾಜ್ಯಾಧ್ಯಕ್ಷ ಹಾಗೂ ಬಳ್ಳಾರಿಯವರೇ ಆದ ಡಾ.ಮಧುಸೂದನ್ ಹೇಳುತ್ತಾರೆ.
ಹೆಚ್ಚು ಗುಣಮುಖ: ಕರ್ನಾಟಕಕ್ಕೆ 10ನೇ ಸ್ಥಾನ!
ಈ ರೀತಿಯ ಪ್ರಯತ್ನ ರಾಜ್ಯದಲ್ಲೇ ಮೊದಲು. ಲಾಭದ ದೃಷ್ಟಿಯಿಂದ ಈ ಕೆಲಸ ಮಾಡುತ್ತಿಲ್ಲ. ವೈದ್ಯಕೀಯ ಕಾಳಜಿ ವಹಿಸಿ ಕೆಲಸ ಮಾಡುತ್ತಿರುವ ಭಾರತೀಯ ವೈದ್ಯಕೀಯ ಸಂಘವು ಜನರ ಸುರಕ್ಷತೆಯ ಕಾಳಜಿಯಿಂದಾಗಿ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದೆ.
- ಡಾ.ಮಧುಸೂದನ್ ಕಾರಿಗನೂರು ಅಧ್ಯಕ್ಷರು, ಐಎಂಎ, ಕರ್ನಾಟಕ ಶಾಖೆ