
ಬಳ್ಳಾರಿ (ಜ.02): ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ವಿಚಾರದಲ್ಲಿ ನಡೆದ ಗಲಭೆಯಲ್ಲಿನ ಫೈರಿಂಗ್‌ನಲ್ಲಿ ಯುವಕ ಮೃತಪಟ್ಟಿದ್ದು, ಈ ಕುರಿತು ತನಿಖೆ ನಡೆಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಅಥವಾ ಸಿಬಿಐಗೆ ತನಿಖೆವಹಿಸಬೇಕೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಘಟನೆಯಲ್ಲಿ ಅಮಾಯಕ 26 ವರ್ಷದ ಯುವಕ ರಾಜಶೇಖರ್ ಮೃತಪಟ್ಟಿರುವುದು ತೀವ್ರ ನೋವುಂಟು ಮಾಡಿದೆ. ಮೃತ ಯುವಕ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷವಾದರೂ ಇಂತಹ ಘಟನೆ ನಡೆಬಾರದಿತ್ತು. ರಾಜಕೀಯದಲ್ಲಿ ಯುವಕರನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುವುದರ ಮೇಲೆ ಅವಲಂಭಿಸಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಯುವಕರನ್ನು ಕರೆತಂದು ಈ ರೀತಿ ಗಲಾಟೆ ನಡೆಸಿ ಬಲಿ ನೀಡುವುದು ಸರಿಯಲ್ಲ. ಬ್ಯಾನರ್ ಕಟ್ಟುವುದಕ್ಕೆ ನಮ್ಮದು ಯಾವುದೇ ಅಭ್ಯಾಂತರವಿಲ್ಲ. ಆದರೆ ಉದ್ದೇಶಪೂರ್ವಕವಾಗಿ ಜನಾರ್ದನ ರೆಡ್ಡಿ ನಿವಾಸದ ಬಳಿ ಓಡಾಡುವ ಸ್ಥಳದಲ್ಲಿ ಬ್ಯಾನರ್ ಹಾಕಿದ್ದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಇದನ್ನು ಪ್ರಶ್ನಿಸಿದ ಜನಾರ್ದನ ರೆಡ್ಡಿ ಮೇಲೆ ಶಾಸಕ ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿ ಹಾಗೂ ಬೆಂಬಲಿಗರು ಏಕಾಏಕಿ ದಾಳಿ ನಡೆಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ಸ್ಥಳದಲ್ಲಿದ್ದ ಪೊಲೀಸರು ಗುಂಪು ಚದುರಿಸಿದ್ದಾರೆ. ಈ ವೇಳೆ ಸತೀಶ್ ರೆಡ್ಡಿ ಕಡೆಯ ಬಾಡಿಗಾಡ್೯ಗಳು ಸಿನಿಮಾ ಶೈಲಿಯಲ್ಲಿ ಫೈರಿಂಗ್ ಮಾಡಿದ್ದಾರೆ. ಇದಕ್ಕೆ ಯಾರು ಅವಕಾಶ ಕೊಟ್ಟಿದ್ದು, ಸಾರ್ವಜನಿಕವಾಗಿ ಫೈರಿಂಗ್ ಮಾಡಿರುವುದು ಎಷ್ಟು ಸರಿ. ಫೈರಿಂಗ್ ಬಳಿಕ ಪತ್ತೆಯಾದ .76ಎಂಎಂ ಬುಲೆಟ್ ನಿಂದ ಫೈರಿಂಗ್ ಮಾಡಿದೆ. ಆ ಗುಂಪಿನಿಂದ ಕಲ್ಲು ತೂರಾಟವಾಗುತ್ತಿದ್ದಂತೆ, ನಮ್ಮ ಕಡೆಯಿಂದ ತೂರಾಟವಾಗಿದೆ. ನಮ್ಮ ಭಾಗದ ಅನೇಕ ಯುವಕರಿಗೆ ಗಾಯಗಳಾಗಿವೆ ಎಂದರು.
ಸತೀಶ್ ರೆಡ್ಡಿ ಅವರು ಯಾವುದೇ ಗಣ್ಯ ವ್ಯಕ್ತಿ ಅಲ್ಲದಿದ್ದರೂ ಗನ್ ಮ್ಯಾನಗಳನ್ನು ಇಟ್ಟುಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ. ಸಂವಿಧಾನ ಕಾಪಾಡಬೇಕಿದ್ದ ಶಾಸಕರೆ ಈ ರೀತಿ ದೌರ್ಜನ್ಯ ಮಾಡುತ್ತಿದ್ದಾರೆ. ಖಾಸಗಿ ವ್ಯಕ್ತಿಗಳಿಂದಲೇ ಫೈರಿಂಗ್ ಆದ ಹಿನ್ನೆಲೆ ಯುವಕ ಸಾವು ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಶಾಸಕ ಭರತ್ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರ ಮನೆ ಸುಟ್ಟು ಹಾಕುತ್ತಾನೆ ಎಂದು ಹೇಳುತ್ತಿದ್ದು, ಇದೆಲ್ಲಾ ಮುಂಚಿತವಾಗಿ ಪ್ಲಾನ್ ಮಾಡಿ, ಪೆಟ್ರೋಲ್ ಬಾಂಬ್ ತೆಗೆದುಕೊಂಡು ಬಂದಿದ್ದಾರೆ. ರಾಜಕೀಯ, ಸ್ವಾರ್ಥಕ್ಕಾಗಿ ವಾಲ್ಮೀಕಿ ಅವರನ್ನು ಇದರ ನಡುವೆ ತರುವುದು ಸರಿಯಲ್ಲ. ನಾನು ಲಂಡನ್ ನಲ್ಲಿ ಓದಿದ್ದೇನೆಂದು ಹೇಳುವ ಭರತ್ ರೆಡ್ಡಿ ಅವರಿಗೆ ಎಲ್ಲಿ ಓದಿದೆ ಎಂಬುವುದು ಮುಖ್ಯವಲ್ಲ, ಆದರೆ ಸಂಸ್ಕಾರ ಮುಖ್ಯ. ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆ ಅಲ್ಲ. ಚುನಾವಣೆ ವೇಳೆ ಶಕ್ತಿ ಪ್ರದರ್ಶನ ಮಾಡಲಿ ಎಂದು ಸವಾಲೆಸೆದರು.
ಮೃತ ಯುವಕನ ದೇಹದಲ್ಲಿರುವ ಗುಂಡು ಯಾವುದು ಎಂಬುವುದು ತನಿಖೆ ನಡೆಸಬೇಕು. ಜನಾರ್ದನ ರೆಡ್ಡಿ ಅವರನ್ನು ಟಾರ್ಗೆಟ್ ಮಾಡಿ ಹೋದ ಕಡೆಯೆಲ್ಲ ತೊಂದರೆ ಕೊಡುತ್ತಿದ್ದಾರೆ. ಸತೀಶ್ ರೆಡ್ಡಿ ಅವರು ಹೋರಾಟದ ಮೂಲಕ ದೊಡ್ಡವನಾಗಿಲ್ಲ. ರೆಡ್ಡಿ ವಿರುದ್ಧ ಮಾತನಾಡಿ ದೊಡ್ಡವನಾಗಿದ್ದಾನೆ. ಆಸ್ಪತ್ರೆಯಲ್ಲಿ ದಾಖಲಾಗುವಷ್ಟು ಸತೀಶ್ ರೆಡ್ಡಿಗೆ ಏನು ಆಗಿಲ್ಲ. ಅದು ಬೋಗಸ್ ಬ್ಯಾಂಡೇಜ್. ಬಳ್ಳಾರಿಯಲ್ಲಿ ಅವರು ಬ್ಯಾನರ್ ಗಳನ್ನು ಎಲ್ಲಿ ಬೇಕಾದರೂ ಹಾಕಬಹುದು. ಅವರಿಗಾಗಿ ಪ್ರತ್ಯೇಕ ಕಾನೂನಿದೆ. ಆದರೆ, ಬ್ಯಾನರ್ ನಿಂದ ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ಶಾಸಕ ಭರತ್ ರೆಡ್ಡಿ ಅವರಿಗೆ ಇನ್ನೂ ಉಜ್ವಲ ಭವಿಷ್ಯವಿದೆ. ವೇಗ ಹೆಚ್ಚಾದರೆ ಅಪಘಾತ ಕಟ್ಟಿಟ್ಟಬುತ್ತಿ. ಇಂತಹ ಗುಂಡಾಗಿರಿಗೆ ನಾವು ಹೆದರುವವರಲ್ಲ. ಘಟನೆ ಬಗ್ಗೆ ಹೈಕೋರ್ಟ್ ನ್ಯಾಯಾಮೂರ್ತಿಗಳಿಂದ ಅಥವಾ ಸಿಬಿಐನಿಂದ ತನಿಖೆ ನಡೆಸಲಿ. ನಾನು ತಪ್ಪು ಮಾಡಿದರೆ ಇಂದೇ ಪೊಲೀಸರಿಂದ ಬಂಧಿಸಲಿ. ಜ.೦೩ರಂದು ಕಾರ್ಯಕ್ರಮ ಯಾವುದೇ ವಿಘ್ನ ಇಲ್ಲದೆ ನಡೆಯಲಿ ಎಂದರು.
ಹತ್ಯೆ ಪ್ರಯತ್ನ ಹಿನ್ನೆಲೆ ಪಕ್ಷದ ಶಾಸಕರಾಗಿರುವ ಜನಾರ್ದನ ರೆಡ್ಡಿ ಅವರ ರಕ್ಷಣೆಗೆ ಮುಂದಾಗಿದೆ. ರೆಡ್ಡಿ ಮಾತ್ರವಲ್ಲ ಪಕ್ಷದ ಯಾರೇ ಕರ್ತರಿದ್ದರೂ ಅವರ ಬೆಂಬಲಕ್ಕೆ ನಿಲ್ಲುತ್ತೇನೆ. ಘಟನೆ ಬಗ್ಗೆ ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಂಜೆ ೪ಕ್ಕೆ ಜನಾರ್ದನ ರೆಡ್ಡಿ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಕಾಂಗ್ರೆಸ್ ನ ಕೆಲ ಸ್ನೇಹಿತ ಸಚಿವರು ಕರೆ ಮಾಡಿ ಕೇಳಿದ್ದು ಅವರಿಗೆ ಮಾಹಿತಿ ನೀಡಿದ್ದೇನೆ. ಹತ್ಯೆ ಸಂಚು ಹಿನ್ನೆಲೆ ಜನಾರ್ದನ ರೆಡ್ಡಿ ಅವರಿಂದ ದೂರು ದಾಖಲಿಸಲಾಗುತ್ತದೆ ಎಂದರು.
ಜನಾರ್ದನ ರೆಡ್ಡಿ, ರಾಮುಲು, ಸೋಮಶೇಖರ್ ರೆಡ್ಡಿ ಅವರಿಗೆ ಒಟ್ಟು ಏಳು ಜನ ಸರಕಾರಿ ಗನ್ ಮ್ಯಾನ್ ಗಳಿದ್ದು, ಎಲ್ಲರ ಗನ್ ಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವಕನ ಸಾವಿಗೆ ಖಾಸಗಿ ಗನ್ ನಿಂದ ಬಂದಿರುವ ಗುಂಡು ಎಂಬುವುದು ಪತ್ತೆಯಾಗಿದೆ ಎಂದು ಶ್ರೀರಾಮುಲು ತಿಳಿಸಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಮಾತನಾಡಿ, ನಾರಾ ಭರತ್ ರೆಡ್ಡಿ ಅವರು ನಾನು ಲಂಡನ್ ನಲ್ಲಿ ಓದಿದ್ದೇನೆ ಎಂದು ಹೇಳಿದ್ದು, ಓದು ಮುಖ್ಯವಲ್ಲ, ಸಂಸ್ಕಾರ ಮುಖ್ಯ. ಘಟನೆಯಿಂದ ಅವನ ಮೂರ್ಖತನ, ಸಂಸ್ಕೃತಿ ತೋರಿಸುತ್ತದೆ. ಜೀವ ರಕ್ಷಕ ವಿಚಾರ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ದೂರು ದಾಖಲಿಸಲು ನಿರ್ಧರಿಸಲಾಗಿದೆ. ಬಳ್ಳಾರಿಯಲ್ಲಿ ಶಾಸಕನೇ ಮಟ್ಕಾ ದಂಧೆ ನಡೆಸುತ್ತಿದ್ದಾನೆ. ಲಂಚ, ಮರಳು ಅಕ್ರಮ, ವರ್ಗಾವಣೆ ದಂಧೆ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಜನ ಪ್ರೀತಿ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಬ್ಯಾನರ್ ವಿಚಾರ ಇಟ್ಟುಕೊಂಡು ಇಷ್ಟು ದೊಡ್ಡಮಟ್ಟದ ಗಲಾಟೆ ನಡೆಸಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ