ಎಲ್ಲವೂ ಚೆನ್ನಾಗಿತ್ತು, ಆದ್ರೆ ಪಾರ್ಸಲ್‌ನಲ್ಲಿ ಬಂದ ಹೇರ್ ಡ್ರೈಯರ್‌ನಿಂದ ನನ್ನ ಕೈಗಳೇ ಕಟ್ ಆಯ್ತು!

By Sathish Kumar KH  |  First Published Nov 20, 2024, 7:20 PM IST

ಪಕ್ಕದ ಮನೆಯ ಸ್ನೇಹಿತೆಗೆ ಬಂದಿದ್ದ ಹೇರ್ ಡ್ರೈಯರ್ ಪಾರ್ಸಲ್ ಬಾಕ್ಸ್ ತೆರೆದ ಬಸಮ್ಮಳ ಎರಡೂ ಕೈಗಳು ತುಂಡಾಗಿವೆ. ಹೇರ್ ಡ್ರೈಯರ್ ಅನ್ನು ವಿದ್ಯುತ್ ಸ್ವಿಚ್‌ಗೆ ಕನೆಕ್ಟ್ ಮಾಡಿದಾಗ ಸ್ಫೋಟ ಸಂಭವಿಸಿದೆ. ಪಾರ್ಸಲ್ ಯಾರು ಕಳುಹಿಸಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಬಾಗಲಕೋಟೆ (ನ.20): ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗುತ್ತಿತ್ತು ಎನ್ನುವಾಗ ಪಕ್ಕದ ಮನೆಯ ಸ್ನೇಹಿತೆಗೆ ಬಂದಿದ್ದ ಆ ಒಂದು ಪಾರ್ಸಲ್ ಬಾಕ್ಸ್‌ನಲ್ಲಿದ್ದ ಹೇರ್ ಡ್ರೈಯರ್ ಮೇಲಿನ ಆಸೆಯಿಂದ ಮಹಿಳೆಯ ಎರಡೂ ಕೈಗಳು ತುಂಡಾಗಿರುವ ದುರ್ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಘಟನೆ ನಡೆದಿದೆ. ಶಶಿಕಲಾ ಎಂಬುವರ ಹೆಸರು ನಂಬರ್ ಹೊಂದಿದ್ದ ಡಿಟಿಡಿಸಿ ಕೊರಿಯರ್ ಪಾರ್ಸಲ್ ಬಂದಿತ್ತು. ಆದರೆ, ಶಶಿಕಲಾ ಅವರು ಮನೆಯಲ್ಲಿ ಇಲ್ಲದ ಕಾರಣ ಅದರ ಮೇಲಿದ್ದ ಮೊಬೈಲ್‌ ನಂಬರ್‌ಗೆ ಕರೆ ಮಾಡಿದ ಕೋರಿಯರ್ ಬಾಯ್ ಪಾರ್ಸಲ್ ಎಲ್ಲಿ ಕೊಡಬೇಕು ಎಂದು ಕೇಳಿದ್ದಾರೆ. ಆಗ, ನಮ್ಮ ಮನೆಯ ಪಕ್ಕದಲ್ಲಿರುವ ಬಸಮ್ಮ ಎನ್ನುವವರಿಗೆ ಪಾರ್ಸಲ್ ಕೊಟ್ಟು ಹೋಗುವಂತೆ ಶಶಿಕಲಾ ಅವರು ಸೂಚಿಸಿದ್ದಾರೆ. ಇದನ್ನು ಓಪನ್ ಮಾಡದಿದ್ದರೆ ಬಸಮ್ಮ ಆರೋಗ್ಯವಾಗಿಯೇ ಇರುತ್ತಿದ್ದರು. ಆದರೆ, ಆ ಪಾರ್ಸಲ್ ಬಾಕ್ಸ್‌ನಲ್ಲಿ ಏನಿದೆ ಎಂಬ ಕುತೂಹಲ ತಡೆಯಲಾರದೇ ಅದನ್ನು ಬಸಮ್ಮ ಓಪನ್ ಮಾಡಿದಾಗ ಹೇರ್ ಡ್ರೈಯರ್‌ ಸಿಕ್ಕಿದೆ. ಆಗ ಅದನ್ನು ಬಳಸುವುದು ಗೊತ್ತಿಲ್ಲದೇ ಕೆಲ ಹೊತ್ತು ಸುಮ್ಮನಾಗಿದ್ದು, ನಂತರ ಪಕ್ಕದ ಮನೆಯವರನ್ನು ಕೇಳಿ ಇದನ್ನು ಹೇಗೆ ಬಳಸಬೇಕು ಎಂದು ತಿಳಿದುಕೊಂಡಿದ್ದಾರೆ.

Tap to resize

Latest Videos

undefined

ಹೇರ್ ಡ್ರೈಯರ್ ಬಳಕೆ ಬಗ್ಗೆ ತಿಳಿದುಕೊಂಡ ನಂತರವೂ ಸುಮ್ಮನಿರದೇ ಅದನ್ನು ಹೇಗೆ ಬಳಸಬೇಕು ಎಂದು ನೋಡಿಬಿಡೋಣ ಎಂಬ ಆಸೆಯಿಂದ ಬಸಮ್ಮ ಅದನ್ನು ವಿದ್ಯುತ್ ಸ್ವಿಚ್‌ಗೆ ಕನೆಕ್ಟ್ ಮಾಡಿ ಆನ್ ಮಾಡಿದ್ದಾರೆ. ತತಕ್ಷಣವೇ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿದ್ದು, ಬಸಮ್ಮನ ಎರಡೂ ಕೈಗಳ ಮುಂಗೈನ ಬೆರಳುಗಳು ಛಿದ್ರಗೊಂಡು ತುಂಡಾಗಿದೆ. ಎರಡೂ ಕೈಗಳ ಅಂಗೈ ಸಂಪೂರ್ಣವಾಗಿ ತುಂಡಾಗಿ ಮನೆಯೆಲ್ಲಾ ರಕ್ತಸಿಕ್ತವಾಗಿತ್ತು. ಕೂಡಲೇ ಅಲ್ಲಿದ್ದವರು ಬಸಮ್ಮಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಎರಡೂ ಕೈಗಳನ್ನು ಕತ್ತರಿಸಿ ಬ್ಯಾಂಡೇಜ್ ಮಾಡಿ ಜೀವ ಉಳಿಸಿದ್ದಾರೆ.

ಇದನ್ನೂ ಓದಿ: ಉಡುಪಿ: ನಿಶ್ಚಿತಾರ್ಥದ ನಂತರ ಆತ್ಮಹತ್ಯೆಗೆ ಶರಣಾದ ಕೀರ್ತನಾ ಶೆಟ್ಟಿ

ಇನ್ನು ಬಸಮ್ಮ ಹಾಗೂ ಶಶಿಕಲಾ ಇಬ್ಬರೂ ಮೃತ ಯೋಧರ ಪತ್ನಿಯರಾಗಿದ್ದಾರೆ. ಇನ್ನು ಶಶಿಕಲಾ ಕೂಡ ತನಗೆ ಹೇರ್ ಡ್ರೈಯರ್ ಬೇಕು ಎಂದು ಆರ್ಡರ್ ಮಾಡಿರಲಿಲ್ಲ. ಆದರೂ, ಯಾರೋ ಬೇಕಂತಲೇ ಹಣವನ್ನು ಪಾವತಿಸಿ ಶಶಿಕಲಾ ಅವರ ಹೆಸರಿಗೆ ಹೇರ್ ಡ್ರೈಯರ್ ಕಳಿಸಿದ್ದರು. ಆದರೆ, ಆ ಹೇರ್ ಡ್ರೈಯರ್ ತೆರೆದು ಬಳಸಲು ಮುಂದಾದ ಬಸಮ್ಮಳ ಕೈ ತುಂಡಾಗಿ ನೋವು ಅನುಭವಿಸುತ್ತಿದ್ದಾಳೆ. ಅಂದರೆ, ಇದೀಗ ಈ ಹೇರ್ ಡ್ರೈಯರ್ ಆರ್ಡರ್ ಮಾಡಿದವರು ಯಾರು? ಯಾರು ಹಣ ಸಂದಾಯ ಮಾಡಿದ್ದಾರೆ? ಎಲ್ಲಿಂದ ಹೇರ್ ಡ್ರೈಯರ್ ಪಾರ್ಸಲ್ ಆಗಿ ಬಂತು ಎಂದು ಇಳಕಲ್ ನಗರ  ಪೊಲೀಸರಿಂದ ನಡೆದ  ತನಿಖೆ ನಡೆಯುತ್ತಿದೆ. ಇನ್ನು ಈ ಹೇರ್ ಡ್ರೈಯರ್ ವಿಶಾಖಪಟ್ಟಣದಲ್ಲಿ ತಯಾರಾಗಿದ್ದು, ಬಾಗಲಕೋಟೆಯಿಂದ ಬಂದಿದೆ ಎನ್ನುವುದು ಮಾತ್ರ ತಿಳಿದುಬಂದಿದೆ.

ಇದನ್ನೂ ಓದಿ: ರಾಧಿಕಾ ಕರಿಯ ಅಂದ್ರೆ ಖುಷಿ, ಜಮೀರ್‌ ಹೇಳಿದ್ರೆ ಟೀಕೆ ಯಾಕೆ ಎಂದ ತೇಜಸ್ವಿನಿ ಗೌಡ

click me!